ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ರಾಜಕಾಲುವೆ ಒತ್ತುವರಿ ತೆರವು ಆರಂಭ

ಏಳು ಕಡೆ ಕಾರ್ಯಾಚರಣೆ ಮುಂದುವರಿಸಿದ ಬಿಬಿಎಂಪಿ
Last Updated 3 ಸೆಪ್ಟೆಂಬರ್ 2022, 20:56 IST
ಅಕ್ಷರ ಗಾತ್ರ

ಬೆಂಗಳೂರು: ರಾಜಕಾಲುವೆ ಒತ್ತುವರಿ ತೆರವು ಕಾರ್ಯವನ್ನು ಬಿಬಿಎಂಪಿ ಆರಂಭಿಸಿದ್ದು, ಏಳು ಕಡೆಗಳಲ್ಲಿ ಕಾರ್ಯಾಚರಣೆ ಮುಂದುವರಿದಿದೆ.

ಯಲಹಂಕ ವಲಯ ವ್ಯಾಪ್ತಿಯ ವಿದ್ಯಾರಣ್ಯಪುರದ ಬಸವಸಮಿತಿ ಲೇಔಟ್‌ನ ಹಲವೆಡೆ 195 ಅಡಿಯಷ್ಟು ಉದ್ದದ ಕಾಂಪೌಂಡ್‌ಗಳನ್ನು ತೆರವು ಗೊಳಿಸಲಾಗಿದೆ. ಬೊಮ್ಮನಹಳ್ಳಿ ವಲಯದ ಅಂಜನಾಪುರ ವಾರ್ಡ್‌ನ 60 ಅಡಿ ರಸ್ತೆ ಬಳಿ ಒತ್ತುವರಿ ಯಾಗಿದ್ದ 2 ಗುಂಟೆಯಷ್ಟು ರಾಜಕಾಲುವೆ ಜಾಗ ವಶಕ್ಕೆ ಪಡೆಯಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.

ವಸಂತಪುರ ವಾರ್ಡ್‌ನ ಸತ್ಯಮ್ಮನಕುಂಟೆಯಲ್ಲಿ 35 ಮೀಟರ್ ಉದ್ದದ ಕಾಂಪೌಂಡ್ ತೆರವುಗೊಳಿಸಿ, 4 ಗುಂಟೆ ಜಾಗ ವಶಕ್ಕೆ ಪಡೆಯಲಾಗಿದೆ. ಮಂಗಮ್ಮನಪಾಳ್ಯದ ರಸ್ತೆ ಬದಿಯ ರಾಜಕಾಲುವೆಯ ಮೇಲೆಯೇ ಅಳವಡಿಸಿದ್ದ ತಾತ್ಕಾಲಿಕ ಶೆಡ್ ತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ರಾಜರಾಜೇಶ್ವರಿನಗರ ವಲಯದ ಲಿಂಗಧೀರನಹಳ್ಳಿಯ ನಾಟಕದ ಚೆನ್ನಪ್ಪ ಬಡಾವಣೆಯ15 ಅಡಿ ಉದ್ದ ಹಾಗೂ 6 ಅಡಿ ಎತ್ತರದ ಕಾಂಪೌಂಡ್ ತೆರವುಗೊಳಿಸಲಾಗಿದೆ. ದಾಸರಹಳ್ಳಿ ವಲಯದ ಹೆಗ್ಗನಹಳ್ಳಿಯ ಭೈರವೇಶ್ವರ ಇಂಡಸ್ಟ್ರಿಯಲ್ ಎಸ್ಟೇಟ್‌ನಲ್ಲಿ ರಾಜಕಾಲುವೆಯ ಮೇಲೆ ನಿರ್ಮಿಸಿದ್ದ 17 ಮೀಟರ್ ಉದ್ದ ಹಾಗೂ 8 ಅಡಿ ಎತ್ತರದ ತಡೆಗೋಡೆ ತೆರವುಗೊಳಿಸಲಾಗಿದೆ. 20 ಚದರ ಅಡಿ ಜಾಗ ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದ್ದಾರೆ.

ಮಹದೇವಪುರ ವಲಯದ ವರ್ತೂರು ಕೋಡಿ ಬಳಿ ರಾಜಕಾಲುವೆ ಮೇಲೆಯೇ ನಿರ್ಮಿಸಿದ್ದ ಕಾಂಪೌಂಡ್ ತೆರವುಗೊಳಿಸಲಾಗಿದೆ. 8 ಮೀಟರ್ ಅಗಲದ ರಸ್ತೆ ಸೇರಿ ಸುಮಾರು 300 ಮೀಟರ್ ಒತ್ತುವರಿ ಇದ್ದು, ಈ ಪೈಕಿ 70 ಮೀಟರ್ ತೆರವು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಪೂರ್ವ ವಲಯದ ಇಂದಿರಾ ನಗರದ 80 ಅಡಿ ರಸ್ತೆಯಲ್ಲಿ (ಬಿಎಸ್ಎನ್ಎಲ್ ಕಚೇರಿ ಹತ್ತಿರ) ರಾಜಕಾಲುವೆ ಮೇಲೆ ಅಳವಡಿಸಿದ್ದ ಸುಮಾರು 5 ಮೀಟರ್ ಉದ್ದದ ಸ್ಲ್ಯಾಬ್‌ಗಳನ್ನು ತೆಗೆಯಲಾಗಿದೆ. ತೆರವಾಗಿರುವ ಜಾಗದಲ್ಲಿ ಮತ್ತೊಮ್ಮೆ ಒತ್ತುವರಿ ಮಾಡಿಕೊಳ್ಳದಂತೆ ಎಚ್ಚರಿಕೆ ನೀಡಲಾಗಿದೆ. ಬೇರೆಡೆಯೂ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

‘ದೊಡ್ಡ ಕಟ್ಟಡಗಳ ತೆರವಿಗೆ ಮೊದಲ ಆದ್ಯತೆ’
ರಾಜಕಾಲುವೆ ಒತ್ತುವರಿ ಮಾಡಿ ಕಟ್ಟಿರುವ ದೊಡ್ಡ ಕಟ್ಟಡಗಳನ್ನು ತೆರವುಗೊಳಿಸುವುದು ಮೊದಲ ಆದ್ಯತೆ ಎಂದು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.

‘ರಾಜಕಾಲುವೆಯ ಬಫರ್ ವಲಯದಲ್ಲಿ ಸಣ್ಣ ಗುಡಿಸಲು ಮತ್ತು ಟೆಂಟ್‌ಗಳನ್ನು ನಿರ್ಮಿಸಿಕೊಂಡಿರುವ ಬಡವರು ಮತ್ತು ಕಾರ್ಮಿಕರಿದ್ದಾರೆ. ಅವರನ್ನು ಕೂಡಲೇ ತೆರವು ಮಾಡುವುದಿಲ್ಲ. ಅವರಿಗೆ ಬದಲಿ ಜಾಗ ಕಲ್ಪಿಸಿದ ಬಳಿಕ ತೆರವು ಮಾಡಬೇಕಾಗುತ್ತದೆ’ ಎಂದು ಹೇಳಿದರು.

‘ರಾಜಕಾಲುವೆ ಮೇಲೆ ಮತ್ತು ಬಫರ್ ವಲಯದಲ್ಲಿರುವ ದೊಡ್ಡ ಕಟ್ಟಡಗಳಿರುವ 500ಕ್ಕೂ ಹೆಚ್ಚು ಸ್ಥಳಗಳನ್ನು ಗುರುತಿಸಿದ್ದೇವೆ. ಕಾರ್ಯಾಚರಣೆ ಆರಂಭವಾಗಿದ್ದು, ಹಂತ–ಹಂತವಾಗಿ ಎಲ್ಲಾ ಒತ್ತುವರಿಯೂ ತೆರವಾಗಲಿದೆ. ಕಂದಾಯ ಇಲಾಖೆ ದಾಖಲೆಗಳ ಪ್ರಕಾರ ರಾಜಕಾಲುವೆ ಎಷ್ಟು ಅಗಲ ಇದೆ ಎಂಬ ಮಾಹಿತಿ ಪಡೆದುಕೊಂಡು ಭೂಕಬಳಿಕೆ ನಿಷೇಧ ಕಾಯ್ದೆಯಡಿ ಕ್ರಮ ಜರುಗಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT