ಶನಿವಾರ, ಮಾರ್ಚ್ 28, 2020
19 °C

ನದಿಗೆ ಭದ್ರಾ ಜಲಾಶಯದ ನೀರು: ರೈತ ಸಂಘ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಭದ್ರಾ ಜಲಾಶಯದಿಂದ ನದಿಗೆ ನೀರು ಹರಿಸಬಾರದು ಎಂದು ರೈತ ಸಂಘದ ಹಿರಿಯ ಮುಖಂಡ ಕೆ.ಟಿ.ಗಂಗಾಧರ್ ಆಗ್ರಹಿಸಿದರು.

ನದಿಗೆ 6 ಟಿಎಂಸಿ ನೀರು ಹರಿಸುವ ಪ್ರಯತ್ನ ಸರ್ಕಾರ ಕೈಬಿಡಬೇಕು. ಮುಂಗಾರು ಹಂಗಾಮಿನಲ್ಲಿ ತಡವಾಗಿ ಸುರಿದ ಮಳೆಗೆ ಭದ್ರಾ ಜಲಾಶಯ ಭರ್ತಿಯಾಗಿತ್ತು. ಜಲಾಶಯ ತುಂಬಿದ ನಂತರ ಅಚ್ಚುಕಟ್ಟು ಪ್ರದೇಶದ ರೈತರು ಭತ್ತ ಬೆಳೆದಿದ್ದಾರೆ. ನದಿಗೆ ನೀರು ಹರಿಸಿದರೆ ಮುಂದೆ ನೀರಿನ ಕೊರತೆಯಾಗುತ್ತದೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದರು.

ಭದ್ರಾ ಜಲಾಶಯದಲ್ಲಿ ಪ್ರಸ್ತುತ 53.090 ಟಿಎಂಸಿ ಅಡಿ ನೀರು ಲಭ್ಯವಿದೆ. ಬೇಸಿಗೆ ಹಂಗಾಮಿಗೆ ಎಡ ಮತ್ತು ಬಲ ನಾಲೆಗಳಿಗೆ ಹರಿಸುವ ನೀರಿನ ಪ್ರಮಾಣ 29 ಟಿಎಂಸಿ ಅಡಿ. ತರೀಕೆರೆ, ಭದ್ರಾವತಿ, ಹರಿಹರ, ರಾಣೆಬೆನ್ನೂರು, ಗದಗ ನಗರಗಳಿಗೆ ಕುಡಿಯುವ ನೀರು ಮತ್ತು ಕೈಗಾರಿಕಾ ಪ್ರದೇಶಗಳಿಗೆ 7.048 ಟಿಎಂಸಿ ಅಡಿ ನೀರು ಮೀಸಲಿಡಬೇಕು. ಭೂಮಿಯಲ್ಲಿ ಇಂಗುವ ನೀರಿನ ಪ್ರಮಾಣ ಸುಮಾರು 1.389 ಟಿಎಂಸಿ ಅಡಿ. ಡೆಡ್‌ ಸ್ಟೋರೇಜ್ 13.830 ಟಿಎಂಸಿ ಅಡಿ. ಹಾಗಾಗಿ, ಬೇಸಿಗೆ ಆರಂಭಕ್ಕೆ ಮೊದಲೇ ನದಿಗೆ ನೀರು ಹರಿಸುವುದು ಸರಿಯಾದ ನಿರ್ಧಾರವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಲಾಶಯದ ನೀರನ್ನೇ ಕುಡಿಯಲು ನೆಚ್ಚಿಕೊಂಡಿರುವ ನಗರಗಳಿಗೆ ಬೇಸಿಗೆಯ ಕೊನೆಯ ದಿನಗಳಲ್ಲಿ ತೊಂದರೆಯಾಗುತ್ತದೆ.  ಜಲಾಶಯದಲ್ಲಿನ ನೀರು ಪೋಲಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕೇಂದ್ರ, ರಾಜ್ಯ ಸರ್ಕಾರ ರೈತರ ಸಾಲಮನ್ನಾ ಮಾಡುತ್ತದೆ ಎಂದು ರೈತರು ಸಾಲ ಮರುಪಾವತಿಸಿಲ್ಲ. ಮುಖ್ಯಮಂತ್ರಿ ಬಜೆಟ್‌ನಲ್ಲಿ ಹಣ ನೀಡಬೇಕು. ಋಣಮುಕ್ತ ಕಾಯ್ದೆ ಜಾರಿಯ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ಯಶವಂತರಾವ್ ಘೋರ್ಪಡೆ, ಡಿ.ವಿ.ವೀರೇಶ್, ಹಿರಿಯಣ್ಣಯ್ಯ, ಎಂ.ಮೋಹನ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು