ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನಪದ ಲೋಕದ ಗಾರುಡಿಗ ರಘುನಾಥ

50ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯ; ಗಾಯನದಲ್ಲೂ ಸೈ ಎನಿಸಿಕೊಂಡ ಕಲಾವಿದ
Last Updated 1 ನವೆಂಬರ್ 2019, 10:05 IST
ಅಕ್ಷರ ಗಾತ್ರ

ತಾಂಬಾ: ‘ಜಾನಪದ ಕಲೆ ನಮ್ಮ ವಂಶದ ಬಳುವಳಿ. ತಂದೆ ಹಾರ್ಮೋನಿಯಂ ಮಾಸ್ತರ್ ಆಗಿದ್ದರು. ಭಜನಾ ಪದಗಳ ಜೊತೆಗೆ ಜಾನಪದ ಗೀತೆಗಳನ್ನು ಹಾಡಿ ನೆರೆದ ಸಭಿಕರನ್ನು ರಂಜಿಸುತ್ತಿದ್ದರು. ಅದೇ ನನಗೂ ಬಳುವಳಿಯಾಗಿ ಬಂದಿದೆ’.

–ಇವು ಇಂಡಿ ತಾಲ್ಲೂಕು ಅಥರ್ಗಾ ಗ್ರಾಮದ ಜಾನಪದ ಕಲಾವಿದ ರಘುನಾಥ ಬಾಣಿಕೋಲ ಅವರ ಮಾತುಗಳು.

ಕನ್ನಡ ನಾಡು, ನುಡಿಗೆ ತಮ್ಮದೇ
ಯಾದ ಕೊಡುಗೆ ನೀಡುವ ಮೂಲಕ ಇವರು ಹೆಸರುವಾಸಿಯಾಗಿದ್ದಾರೆ. ‘ಕರ್ನಾಟಕ ರಾಜ್ಯೋತ್ಸವ’ ಹಿನ್ನೆಲೆಯಲ್ಲಿ ‘ಪ್ರಜಾವಾಣಿ’ಯೊಂದಿಗೆ ನಾಡುನುಡಿಗೆ ಸಲ್ಲಿಸಿದ ಸೇವೆಯನ್ನು ಅವರು ಹಂಚಿಕೊಂಡಿದ್ದಾರೆ.

‘ನಾನು 12ನೇ ವರ್ಷದವನಿದ್ದಾಗಲೇ ನಮ್ಮ ತಂದೆಯಿಂದ ಜಾನಪದ ಕಲೆ ಒಲಿದು ಬಂತು. ಭಜನಾ ಪದಗಳು ಮತ್ತು ಜಾನಪದ ಹಾಡುಗಳನ್ನು ಹಾಡುವ ಉಮ್ಮೇದು ಶುರುವಾಯಿತು. ಜಿಲ್ಲೆಯಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದ ನಾನು, ಸಹಜವಾಗಿಯೇ ಜಾನಪದ ಸಾಹಿತ್ಯದತ್ತ ಒಲವು ಬೆಳೆಸಿಕೊಂಡೆ’ ಎಂದು ಹೇಳಿದರು.

ಎಲ್ಲ ರಂಗಗಳಲ್ಲೂ ನುರಿತಿರುವ ರಘುನಾಥ ಅವರು ತಾವೇ ನಾಟಕಗಳನ್ನು ರಚಿಸುವುದಲ್ಲದೇ, ಉತ್ತಮ ನಟ ಸಹ ಆಗಿದ್ದಾರೆ. ಭಜನಾ ಗೀತೆಗಳನ್ನು ಬರೆದುಕೊಡುತ್ತಿರುವ ರಂಘುನಾಥ ಅವರು ರಚಿಸಿದ ಜಾನಪದ ಮತ್ತು ಶೋಷಣೆ ವಿರೋಧಿ ಗೀತೆಗಳನ್ನು ಜನರು ಈಗಲೂ ಹಾಡುತ್ತಾರೆ.

ಇವರು 1984ರಲ್ಲಿ ಕಲಬುರ್ಗಿಯ ಕೆಎಸ್‌ಆರ್‌ಟಿಸಿ ಘಟಕದಲ್ಲಿ ಮೆಕ್ಯಾನಿಕ್‌ ಆಗಿ ಉದ್ಯೋಗಕ್ಕೆ ಸೇರಿದರು. ಅಲ್ಲಿ ಇವರಿಗೆ ಕಲಾವಿದರ ಪರಿಚಯ ಮತ್ತು ಪ್ರೋತ್ಸಾಹ ದೊರೆತು, ಹಲವಾರು ನಾಟಕಗಳನ್ನು ರಚಿಸಿ ತಮ್ಮ ಸಂಸ್ಥೆಯ ಕಲಾ ತಂಡಕ್ಕೆ ನೆರವಾದರು. ಸಾರಿಗೆ ಸಂಸ್ಥೆಯ ಕಲಾ ಬಳಗ ಇವರ ನಾಟಕಗಳನ್ನೆಲ್ಲ ರಂಗದ ಮೇಲೆ ಪ್ರದರ್ಶಿಸಿದೆ.

‘ರೋಗಿ ಡಾಕ್ಟರಾದ, ಕೈದಿ ವಕೀಲನಾದ’, ‘ಮೂರು ಮಕ್ಕಳ ತಾಯಿ ಭಾರತಿ’, ‘ಜೋಕುಮಾರ ಸ್ವಾಮಿ’, ‘ಮುನ್ಸಿಪಾಲ್ಟಿ ಮುತ್ತು’ ಹಾಗೂ ‘ವಿಶ್ವಜ್ಯೋತಿ ಶರಣ ಬಸವ’, ಮುಂತಾದ ನಾಟಕಗಳನ್ನು ರಚಿಸಿದ್ದಾರೆ. ಇದಲ್ಲದೇ ಸುಮಾರು 200 ಜಾನಪದ ಗೀತೆಗಳನ್ನು ಸಹ ರಚಿಸಿದ್ದಾರೆ.

ಇಷ್ಟೇ ಅಲ್ಲ ಸುಮಾರು 50 ರಿಂದ 70 ನಾಟಕಗಳಲ್ಲಿ ಅಭಿನಯಿಸಿ ಸೈ ಎನ್ನಿಸಿಕೊಂಡಿದ್ದಾರೆ.

1992ರಲ್ಲಿ ಇವರಿಗೆ ‘ಉತ್ತಮ ಉದ್ಯೋಗಿ ಪ್ರಶಸ್ತಿ’ ದೊರೆತಿದೆ. ನವದೆಹಲಿಯ ದಿ ಲಿಟಲ್ ಥಿಯೇಟರ್‌ ಆಶ್ರಯದಲ್ಲಿ ಡಾ.ಸಿದ್ಧಲಿಂಗಯ್ಯ ಅವರ ‘ಅಲ್ಲೇ ಇದ್ದೋರು’ ನಾಟಕ ಪ್ರದರ್ಶಿಸಿದ ಇವರ ಸಾರಿಗೆ ಸಂಸ್ಥೆಯ ತಂಡ ದ್ವಿತೀಯ ಸ್ಥಾನ ಪಡೆದಿದೆ.

ತುಮಕೂರಿನ ಗುಬ್ಬಿ ವೀರಣ್ಣ ರಂಗ ಮಂದಿರದಲ್ಲಿ ನಡೆದ ನಾಟಕ ಸ್ಪರ್ಧೆಯಲ್ಲಿ ಇವರು ರಚಿಸಿದ ಗೀತೆ ಮತ್ತು ಗಾಯನಕ್ಕೆ ಪ್ರಶಸ್ತಿ ಒಲಿದಿದೆ. ವಿಭಾಗಮಟ್ಟದ ಸಂಗೀತ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ, ಅಂತರ ವಿಭಾಗ ನಾಟಕ ಸ್ಪರ್ಧೆಯಲ್ಲಿ ಇವರು ರಚಿಸಿರುವ ‘ಮೂರು ಮಕ್ಕಳ ತಾಯಿ ಭಾರತಿ’ ನಾಟಕಕ್ಕೆ ರಾಷ್ಟ್ರೀಯ ಭಾವ್ಯಕ್ಯತೆ ಮೂಡಿಸುವ ನಾಟಕ ಎಂಬ ‘ಸನ್ಮಾನ ಪತ್ರ’ ಲಭಿಸಿದೆ.

ಇವರ ಎಲ್ಲ ನಾಟಕಗಳನ್ನು ಇವರ ಸಹೋದ್ಯೋಗಿ ಭೀಮರಾವ್‌ ತಿಲ್ಲಾಗೋಳ ಅವರೇ ನಿರ್ದೇಶಿಸಿದ್ದಾರೆ. ಇಲಾಖೆಯು ಕಲಾ ಚಟುವಟಿಕೆಗಳಿಗೆ ಸಾಕಷ್ಟು ಉತ್ತೇಜನ ನೀಡುತ್ತಿದೆ.

‘ಸರ್ಕಾರ ಪ್ರಶಸ್ತಿಗಳಿಗೆ ಮಾನದಂಡ ನಿಗದಿಪಡಿಸಬೇಕು. ಸದ್ಯ ಕಲಾವಿದರಿಗೆ ₹1,500 ಮಾಸಾಶನ ನೀಡಲಾಗುತ್ತಿದ್ದು, ಇದನ್ನು ₹5 ಸಾವಿರಕ್ಕೆ ಹೆಚ್ಚಿಸಬೇಕು’ ಎಂದು ರಘುನಾಥ ಮನವಿ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT