ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀರ್ಥಹಳ್ಳಿ ಕ್ಷೇತ್ರದ ಹಿಡಿತ ಸಾಧಿಸಲು ಮುಂದಾದ ಬೇಳೂರು

Last Updated 25 ಏಪ್ರಿಲ್ 2018, 12:46 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದ್ದರು ಎಂಬುದು ಈಗ ಹಳೆಯ ಮಾತು. ಅವರ ಪುತ್ರ ಮಧು ಬಂಗಾರಪ್ಪ ತೀರ್ಥಹಳ್ಳಿ ಕ್ಷೇತ್ರದ ಮೇಲೆ ಹಿಡಿತ ಸಾಧಿಸಲು ಜೆಡಿಎಸ್ ಪರವಾಗಿ ಹಲವು ಬಾರಿ ಪ್ರಚಾರ ನಡೆಸಿದ್ದರು. ಇದರ ಬೆನ್ನಲ್ಲೇ ಈಗ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ತೀರ್ಥಹಳ್ಳಿಯಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.

ನಗರ, ಹೊಸನಗರ, ಹುಂಚಾ ವ್ಯಾಪ್ತಿಯ ಹಳ್ಳಿಗಳಲ್ಲಿ ಪ್ರಭಾವ ಹೆಚ್ಚಿಸಿಕೊಂಡಿರುವ ಬೇಳೂರು, ತೀರ್ಥಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಹೋರಾಟ ನಡೆಸುತ್ತಿದ್ದಾರೆ. ಮಧು ಬಂಗಾರಪ್ಪ ಹಾಗೂ ಬೇಳೂರು ಗೋಪಾಲಕೃಷ್ಣ ಅವರ ಪ್ರಚಾರದ ಭರಾಟೆ ತೀರ್ಥಹಳ್ಳಿ ಕ್ಷೇತ್ರದಲ್ಲಿನ ಈಡಿಗ ಸಮುದಾಯದ ಮತದಾರರಲ್ಲಿ ಗೊಂದಲ ಮೂಡಿಸಿದೆ.

ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಚಿವ ಹರತಾಳು ಹಾಲಪ್ಪ ಅವರ ಹೆಸರು ಘೋಷಣೆಯಾದ ನಂತರ ತೀರ್ಥಹಳ್ಳಿ ಕ್ಷೇತ್ರದಲ್ಲಿ ಬಿಜೆಪಿಗೆ ಲಾಭ ತಂದುಕೊಡಲಿದೆ. ಹೊಸನಗರ, ರಿಪ್ಪನ್‌ಪೇಟೆ ಭಾಗದಲ್ಲಿ ಹರತಾಳು ಹಾಲಪ್ಪ ಹಾಗೂ ಬೇಳೂರು ಗೋಪಾಲಕೃಷ್ಣ ಅವರಿಗಿರುವ ಸಂಪರ್ಕ ತೀರ್ಥಹಳ್ಳಿ ಕ್ಷೇತ್ರದ ಚುನಾವಣಾ ರಾಜಕೀಯ ಲೆಕ್ಕಾಚಾರಕ್ಕೆ ಎಡೆಮಾಡಿಕೊಟ್ಟಿದೆ.

ಸಾಗರ ಕ್ಷೇತ್ರದಲ್ಲಾದ ರಾಜಕೀಯ ಬೆಳವಣಿಗೆ ತೀರ್ಥಹಳ್ಳಿ ಕ್ಷೇತ್ರದಲ್ಲೂ ಪರಿಣಾಮ ಬೀರಬಲ್ಲದು. ಬೇಳೂರು ಗೋಪಾಲಕೃಷ್ಣ ಅವರು ತೀರ್ಥಹಳ್ಳಿ ಕ್ಷೇತ್ರದಲ್ಲಿ ಕೆಲವು ವರ್ಷಗಳಿಂದ ಹೆಚ್ಚು ಸಂಪರ್ಕ ಹೊಂದಿರುವುದು ಕಾಂಗ್ರೆಸ್‌ಗೆ ರಾಜಕೀಯವಾಗಿ ಲಾಭ ತರದಿದ್ದರೂ, ಬಿಜೆಪಿಗೆ ‘ನಷ್ಟ’ವನ್ನಂತು ತರಲಿದೆ ಎಂಬ ಚರ್ಚೆ ಹುಟ್ಟುಹಾಕಿದೆ.

‌ಹೊಸನಗರ, ಹುಂಚಾ, ರಿಪ್ಪನ್‌ಪೇಟೆ, ನಗರ ಹೋಬಳಿ ವ್ಯಾಪ್ತಿಯಲ್ಲಿ ಬೇಳೂರು ಬೆಂಬಲಿಗರ ಪಡೆ ಕಾಂಗ್ರೆಸ್ ಬೆಂಬಲಿಸಿದರೆ, ತೀರ್ಥಹಳ್ಳಿ ಕ್ಷೇತ್ರದ ರಾಜಕಾರಣದಲ್ಲಿ ಬದಲಾವಣೆಗೆ ಕಾರಣವಾಗಬಹುದು ಎನ್ನಲಾಗುತ್ತಿದೆ.

ಬಿಜೆಪಿ ಮನೆಯಿಂದ ದೂರ ಸರಿದ ಬೇಳೂರು ನಡೆಯಿಂದ ಸಾಗರ, ತೀರ್ಥಹಳ್ಳಿ ಕ್ಷೇತ್ರದ ಗಡಿ ಭಾಗದ ಜನ, ಮಧು ಬಂಗಾರಪ್ಪ, ಹರತಾಳು ಹಾಲಪ್ಪ ಹಾಗೂ ಬೇಳೂರು ನಡುವೆ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಯಾವ ಅಭ್ಯರ್ಥಿ ಪರವಾಗಿ ಮಣೆ ಹಾಕುತ್ತಾರೆ ಎಂಬ ಕುತೂಹಲ ಮೂಡಿದೆ.

ದಿನದಿಂದ ದಿನಕ್ಕೆ ತೀವ್ರ ಕುತೂಹಲ ಮೂಡಿಸುತ್ತಿರುವ ತೀರ್ಥಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಮನೆ ಮನೆಗೆ ಎಡತಾಕುವ ಅಭ್ಯರ್ಥಿಗಳಿಗೆ ನಿಧಾನವಾಗಿ ತಮ್ಮ ಊರಿನ ಸಮಸ್ಯೆಗಳನ್ನು ಬಿಚ್ಚಿಡುವ ಮತದಾರರು, ತಮ್ಮ ನಡೆಯನ್ನು ಬಿಟ್ಟುಕೊಡದೇ ಇರುವುದು ಅಭ್ಯರ್ಥಿಗಳ ತಲೆನೋವಿಗೆ ಕಾರಣವಾಗಿದೆ.

- ಶಿವಾನಂದ ಕರ್ಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT