ಮಂಗಳವಾರ, ಸೆಪ್ಟೆಂಬರ್ 17, 2019
24 °C

ನೇತ್ರದಾನ ಮಾಡಲು ಸಲಹೆ

Published:
Updated:
Prajavani

ವಿಜಯಪುರ: ‘ವಿಜ್ಞಾನ, ತಂತ್ರಜ್ಞಾನ ಎಷ್ಟೇ ಮುಂದವರೆದರೂ ಕಣ್ಣನ್ನು ಕೃತಕವಾಗಿ ತಯಾರಿಸಲು ಸಾಧ್ಯವಾಗಿಲ್ಲ. ಆದ್ದರಿಂದ ನೇತ್ರದಾನ ಮಾಡುವ ಮೂಲಕ ಅಂಧರ ಬಾಳಿಕೆ ಬೆಳಕಾಗಬೇಕು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹೇಂದ್ರ ಎಂ.ಕಾಪಸೆ ಹೇಳಿದರು.

ನಗರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ 34ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಕಾರ್ಯಕ್ರಮದ ಜನಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿ 1.25 ಲಕ್ಷ ಪುರುಷರು, ಮಹಿಳೆಯರು ಮತ್ತು ಮಕ್ಕಳು ಮೃತ ವ್ಯಕ್ತಿಗಳು ದಾನ ಮಾಡಿದ ನೇತ್ರಗಳಿಂದ ಮರಳಿ ದೃಷ್ಟಿ ಪಡೆಯಲು ಕಾಯುತ್ತಿದ್ದಾರೆ. ಆದ್ದರಿಂದ ಸಾರ್ವಜನಿಕರಲ್ಲಿ ಈ ಬಗ್ಗೆ ಅರಿವು ಮೂಡಿಸಬೇಕು. ಶಾಲಾ ಕಾಲೇಜುಗಳಲ್ಲಿ ನೇತ್ರದಾನ ಮಾಡುವಂತೆ ಮನವೊಲಿಸಬೇಕು’ ಎಂದರು.

ಅನುಗ್ರಹ ವಿಜನ್ ಫೌಂಡೇಶನ್ ಟ್ರಸ್ಟ್‌ನ ನೇತ್ರ ತಜ್ಞ ಡಾ.ಪ್ರಭುಗೌಡ ಬಿ.ಎಲ್. (ಚಬನೂರ) ಪಾಟೀಲ ಮಾತನಾಡಿ, ‘ವ್ಯಕ್ತಿಯ ಮರಣದ ನಂತರ ಹತ್ತಿರದ ಸಂಬಂಧಿಗಳಿಗೆ ನೇತ್ರದಾನ ಮಾಡುವಂತೆ ಮನವೊಲಿಸಬೇಕು. ಕಣ್ಣುದಾನ ಮಾಡುವವರು ಮುಂದೆ ಬಂದು ಇನ್ನೊಬ್ಬರ ಬಾಳಿಗೆ ಬೆಳಕಾಗಬೇಕು’ ಎಂದು ತಿಳಿಸಿದರು.

ಇದಕ್ಕೂ ಮುನ್ನ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಿಂದ ಗಾಂಧಿ ಚೌಕ್ ಮಾರ್ಗವಾಗಿ ಜರುಗಿದ 34ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಕಾರ್ಯಕ್ರಮ ಜನಜಾಗೃತಿ ರ್‍ಯಾಲಿಗೆ ಚಾಲನೆ ನೀಡಲಾಯಿತು.

ಜಿಲ್ಲಾ ಅಂಧತ್ವ ನಿಯಂತ್ರಣ ಅಧಿಕಾರಿ ಡಾ.ಸಂಪತ್ತ ಗುಣಾರಿ, ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ.ಮಹೇಶ ನಾಗರಬೆಟ್ಟ, ಜಿಲ್ಲಾ ಕ್ಷಯರೋಗ ನಿಯಂತ್ರಣಾ ಅಧಿಕಾರಿ ಡಾ.ಈರಣ್ಣ ಧಾರವಾಡಕರ, ಜಿಲ್ಲಾ ಎನ್‌ವಿಬಿಡಿಸಿಪಿ ಅಧಿಕಾರಿ ಡಾ.ಜೈಬುನ್ನಿಸಾ ಬೀಳಗಿ, ತಾಲೂಕು ಆರೋಗ್ಯ ಅಧಿಕಾರಿ ಡಾ.ಕವಿತಾ ದೊಡ್ಡಮನಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸುರೇಶ ಹೊಸಮನಿ, ಬಿಎಲ್‌ಡಿಇ ವೈದ್ಯಕೀಯ ಮಹಾವಿದ್ಯಾಲಯದ ನೇತ್ರ ತಜ್ಞ ಡಾ.ಸುನಿಲ್ ಬಿರಾದಾರ ಇದ್ದರು.

Post Comments (+)