ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಿತಾ ನೇತೃತ್ವದಲ್ಲಿ ಕಾರ್ಯಕರ್ತರ ಸಭೆ, ಜೆಡಿಎಸ್ ಪಾಳಯದಲ್ಲಿ ಚಟುವಟಿಕೆ ಚುರುಕು

21ರಂದು ಕಾಂಗ್ರೆಸ್ ಮುಖಂಡರೊಂದಿಗೆ ಚರ್ಚೆ
Last Updated 20 ಅಕ್ಟೋಬರ್ 2018, 12:48 IST
ಅಕ್ಷರ ಗಾತ್ರ

ರಾಮನಗರ: ಚುನಾವಣೆ ಸಮೀಪಿಸುತ್ತಿದ್ದಂತೆ ಜೆಡಿಎಸ್ ಅಂಗಳದಲ್ಲಿ ಚಟುವಟಿಕೆಗಳು ಗರಿಗೆದರಿದ್ದು, ಶನಿವಾರ ಬಸವನಪುರ ಬಳಿಯ ಹಿಲ್‌ವ್ಯೂ ರೆಸಾರ್ಟಿನಲ್ಲಿ ಪಕ್ಷದ ಕಾರ್ಯಕರ್ತರ ಸಭೆ ನಡೆಯಿತು.

ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ರಾಮನಗರ ನಗರಸಭೆ ವ್ಯಾಪ್ತಿಯ 31 ವಾರ್ಡುಗಳ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಗರದ ವ್ಯಾಪ್ತಿಯಲ್ಲಿ ಜೆಡಿಎಸ್‌ಗೆ ಕಡಿಮೆ ಮತಗಳು ಬಂದಿದ್ದು, ಇದಕ್ಕೆ ಕಾರಣಗಳು ಹಾಗೂ ಅದನ್ನು ಸರಿಪಡಿಸಲು ಮುಂದೆ ಏನು ಮಾಡಬೇಕು ಎಂಬುದರ ಕುರಿತು ಚರ್ಚೆ ನಡೆಯಿತು.

ಮುಸ್ಲಿಂ ಸಮುದಾಯದ ಮುಖಂಡರ ಜೊತೆಗೆ ಚರ್ಚೆ ನಡೆಸಿದ ಅನಿತಾ, ಮತಗಳು ಚದುರದಂತೆ ಕ್ರಮ ವಹಿಸಲು ಮನವಿ ಮಾಡಿದರು ಎನ್ನಲಾಗಿದೆ. ಪಕ್ಷದ ಕಾರ್ಯಕರ್ತರ ಅಸಮಾಧಾನವೂ ಇದೇ ವೇಳೆ ಚರ್ಚೆಗೆ ಬಂದಿತು. ಚುನಾವಣೆ ನಂತರದಲ್ಲಿ ತಮ್ಮ ಮಾತುಗಳಿಗೆ ಬೆಲೆ ಇಲ್ಲದಂತೆ ಆಗಿದೆ. ಮುಖ್ಯಮಂತ್ರಿ ಕಚೇರಿಗೆ ಪ್ರವೇಶವೂ ಸಿಗದಾಗಿದೆ ಎಂದು ಕೆಲವು ಕಾರ್ಯಕರ್ತರು ಅಳಲು ತೋಡಿಕೊಂಡರು. ಎಲ್ಲರನ್ನೂ ಸಮಾಧಾನಪಡಿಸಿದ ಅನಿತಾ, ಮುಂದಿನ ದಿನಗಳಲ್ಲಿ ಹೀಗಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು.

ಸಭೆಯ ನಂತರ ಪತ್ರಕರ್ತರ ಜೊತೆ ಮಾತನಾಡಿದ ಅವರು ‘ಚುನಾವಣೆಯ ತಯಾರಿ ಹಾಗೂ ಪಕ್ಷ ಸಂಘಟನೆ ಬಗ್ಗೆ ಚರ್ಚೆ ಮಾಡಿದ್ದೇವೆ. ಭಾನುವಾರ ಕಾಂಗ್ರೆಸ್ ಮುಖಂಡರ ಜೊತೆ ಮತ್ತೊಮ್ಮೆ ಸಭೆ ನಡೆಸಿ ಅವರ ಸಹಕಾರವನ್ನೂ ಕೋರಲಾಗುವುದು’ ಎಂದರು.

‘ಸೋಮವಾರದಿಂದ ಅಧಿಕೃತವಾಗಿ ಪ್ರಚಾರ ಪ್ರಾರಂಭ ಮಾಡಲಾಗುವುದು, ಕಾಂಗ್ರೆಸ್ ನಾಯಕರ ಜೊತೆಗೆ ಮುಖ್ಯಮಂತ್ರಿ ಸಹ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.

7 ಅಭ್ಯರ್ಥಿಗಳು ಅಂತಿಮ ಕಣದಲ್ಲಿ
ನವೆಂಬರ್‌ 3ರಂದು ನಡೆಯಲಿರುವ ಉಪ ಚುನಾವಣೆಗೆ ಅಂತಿಮ ಕಣದಲ್ಲಿ 7 ಅಭ್ಯರ್ಥಿಗಳು ಉಳಿದುಕೊಂಡಿದ್ದಾರೆ.

ನಾಮಪತ್ರ ಹಿಂಪಡೆಯಲು ಶನಿವಾರ ಕಡೆಯ ದಿನವಾಗಿದ್ದು, ಪಕ್ಷೇತರರಾಗಿ ಉಮೇದುವಾರಿಕೆ ಸಲ್ಲಿಸಿದ್ದ ತುಳಸಪ್ಪ ದಾಸರ ಹಾಗೂ ಆರ್‌. ವರದರಾಜಗೌಡ ತಮ್ಮ ನಾಮಪತ್ರಗಳನ್ನು ವಾಪಸ್ ಪಡೆದರು.

ಒಟ್ಟು 10 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಸೂಚಕರಿಲ್ಲದ ಕಾರಣ ಡಾ. ಕೆ. ಪದ್ಮರಾಜನ್‌ ಅವರ ಉಮೇದುವಾರಿಕೆಯು ತಿರಸ್ಕೃತಗೊಂಡಿತ್ತು.

ಅಂತಿಮ ಕಣದಲ್ಲಿ ಉಳಿದವರು: ಅನಿತಾ ಕುಮಾರಸ್ವಾಮಿ (ಜೆಡಿಎಸ್‌), ಎಲ್. ಚಂದ್ರಶೇಖರ್ (ಬಿಜೆಪಿ), ಎಚ್‌.ಡಿ. ರೇವಣ್ಣ (ಪೂರ್ವಾಂಚಲ ಮಹಾಪಂಚಾಯತ್‌ ಪಾರ್ಟಿ), ಬಿ.ಪಿ. ಸುರೇಂದ್ರ, ಮುನಿಯಾ ಭೋವಿ, ಕುಮಾರನಾಯ್ಕ, ಡಿ.ಎಂ. ಮಾದೇಗೌಡ.

*ಭಾನುವಾರ ಕಾಂಗ್ರೆಸ್ ಮುಖಂಡರೊಂದಿಗೆ ಸಭೆ ನಡೆಯಲಿದ್ದು, ಎಲ್ಲರ ಸಹಕಾರ ಕೋರುತ್ತೇವೆ. ಸೋಮವಾರದಿಂದ ಅಧಿಕೃತವಾಗಿ ಪ್ರಚಾರ ಆರಂಭಿಸುತ್ತೇವೆ.
–ಅನಿತಾ ಕುಮಾರಸ್ವಾಮಿ,ಜೆಡಿಎಸ್ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT