4

ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

Published:
Updated:

ರಾಮನಗರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇಲ್ಲಿನ ಜಿಲ್ಲಾ ಪಂಚಾಯಿತಿ ಭವನದ ಎದುರು ರಾಜ್ಯ ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.

‘ಶೂನ್ಯ ಜಂಟಿ ಖಾತೆಯನ್ನು ತೆರೆಯಲು ನಮ್ಮ ವಿರೋಧವಿಲ್ಲ. ಆದರೆ ಇದರಲ್ಲಿರುವ ನಕಾರಾತ್ಮಕ ಅಂಶಗಳನ್ನು ತೆಗೆಯಬೇಕು. ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್‌ಕೆಜಿ, ಯುಕೆಜಿ ಪ್ರಾರಂಭಿಸಬೇಕು. ಹಲವು ಕಡೆ ಐದು ತಿಂಗಳಾದರೂ ಇನ್ನೂ ಗೌರವಧನ ನೀಡಿಲ್ಲ. ಪ್ರತಿ ತಿಂಗಳು ಗೌರವಧನ ಪಾವತಿಯಾಗುವಂತೆ ನೋಡಿಕೊಳ್ಳಬೇಕು’ ಎಂದು ಆಗ್ರಹಿಸಿದರು.

ಖಾಲಿ ಇರುವ ಮೇಲ್ವಿಚಾರಕಿಯರ ಹುದ್ದೆಗಳಿಗೆ ಅಂಗನವಾಡಿ ನೌಕರರಿಗೆ ಶೇ 50ರಷ್ಟು ಮುಂಬಡ್ತಿ ಕೊಡಬೇಕು ಎಂಬ ಕೇಂದ್ರ ಸರ್ಕಾರದ ಆದೇಶವಿದೆ. ಆದರೆ ಈ ನಿಯಮವನ್ನು ರಾಜ್ಯ ಸರ್ಕಾರ ಸರಿಯಾಗಿ ಪಾಲಿಸುತ್ತಿಲ್ಲ ಎಂದು ಆರೋಪಿಸಿದರು. ಜತೆಗೆ ಹೆರಿಗೆ ರಜೆ, ಕಾಯಿಲೆಗಳು ಬಂದಾಗ ಪರ್ಯಾಯ ವ್ಯವಸ್ಥೆ ಮಾಡಬೇಕು. ವರ್ಗಾವಣೆ, ಮುಂಬಡ್ತಿ ಸಿಗಬೇಕು ಎಂದು ಆಗ್ರಹಿಸಿದರು.

ಸೇವಾ ಹಿರಿತನದ ಆಧಾರದಲ್ಲಿ ಕನಿಷ್ಠ ವೇತನ ಜಾರಿ ಮಾಡಬೇಕು. ₹18 ಸಾವಿರ ಕನಿಷ್ಠ ವೇತನ ಜಾರಿ ಮಾಡಬೇಕು. ದಿನಕ್ಕೆ 7 ಗಂಟೆ ಕೆಲಸ, ಮಾತೃ ಪೂರ್ಣ ಮತ್ತಿತರ ಕೆಲಸಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಮಾತೃವಂದನಾ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ ಅಂಗನವಾಡಿ ನೌಕರರ ಮೂಲಕ ಜಾರಿ ಮಾಡಿಸುತ್ತಿದೆ. 2010ರಿಂದ ಗೌರವಧನ ಹೆಚ್ಚಳ ಮಾಡಿಲ್ಲ. ಈ ಕಾರ್ಯಕ್ರಮವನ್ನು ಉಚಿತವಾಗಿ ಮಾಡಬೇಕೆಂದೂ ಒತ್ತಾಯಿಸಲಾಗುತ್ತಿದೆ. ಆದ್ದರಿಂದ ಮಾತೃವಂದನಾ ಕಾರ್ಯಕ್ರಮಕ್ಕೆ ಒಂದು ಕಂತಿಗೆ ₹300 ಅನ್ನು ನಿಗದಿಪಡಿಸಬೇಕು ಎಂದರು.

‘ಅಂಗನವಾಡಿ ಸಹಾಯಕಿ ಕಾರ್ಯಕರ್ತೆಗಾಗಿ ಮುಂಬಡ್ತಿ ಪಡೆಯಲು ಇರುವ ವಯಸ್ಸಿನ, ಭೌಗೋಳಿಕ ವಿಸ್ತೀರ್ಣದ ಮಿತಿಯನ್ನು ಸಡಿಲಿಸಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಹಿಂದೆ ಗ್ಯಾಸ್‌ ಸಿಲಿಂಡರ್‌ ಹಣವನ್ನು ನಮ್ಮ ಖಾತೆಗೆ ಒಂದೇ ಬಾರಿ ಜಮಾ ಮಾಡಲಾಗುತ್ತಿತ್ತು. ಆದರೆ ಈಗ ಈ ಹಣವನ್ನು ನಮ್ಮ ಖಾತೆಗೆ ಜಮಾ ಮಾಡುತ್ತಿಲ್ಲ. ಗ್ಯಾಸ್ ಸಿಲಿಂಡರ್‌ಗೆ ಕಾರ್ಯಕರ್ತೆಯು ಹಣವನ್ನು ನೀಡಿ ಪಡೆದ ನಂತರ, ಬಿಲ್ಲುಗಳನ್ನು ಕಚೇರಿಗೆ ಸಲ್ಲಿಸಬೇಕು. ನಂತರ ಆರು ತಿಂಗಳಿಗೋ ಅಥವಾ ವರ್ಷದ ನಂತರ ಕಾರ್ಯಕರ್ತೆಯ ಖಾತೆಗಳಿಗೆ ಹಣವನ್ನು ಜಮಾ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮೊಟ್ಟೆ ಬಿಲ್‌ ಸರಿಯಾದ ಸಮಯಕ್ಕೆ ಖಾತೆಗಳಿಗೆ ಜಮಾ ಆಗುತ್ತಿಲ್ಲ. ಕಚೇರಿಯಿಂದ ಕಾರ್ಯಕರ್ತೆಗೆ ಒಂದು ಮೊಟ್ಟೆಗೆ ₹4.50 ಹಣ ಸಂದಾಯ ಮಾಡಲಾಗುತ್ತಿದೆ. ಆದರೆ ₹5 ಕೊಟ್ಟು ಕೊಂಡುಕೊಳ್ಳಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಮೇಲ್ವಿಚಾರಕಿಯರು ಕೆಲವರು ತಾಲ್ಲೂಕಿಗೆ ಬಂದು 15 ವರ್ಷಗಳಾಗಿದ್ದರೂ ಇವರನ್ನು ಬೇರೆಡೆಗೆ ವರ್ಗಾವಣೆ ಮಾಡಿಲ್ಲ. ಇವರ ಮೇಲೆ ದೂರು ನೀಡಿದ್ದರೂ ಯಾವುದೇ ರೀತಿಯ ಕ್ರಮ ತೆಗೆದುಕೊಂಡಿಲ್ಲ. ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಹೋದರೆ ಅಲ್ಲಿನ ಅಧಿಕಾರಿ, ಕಚೇರಿಯ ಸಿಬ್ಬಂದಿ ಸೌಜನ್ಯದಿಂದ ವರ್ತಿಸುತ್ತಿಲ್ಲ. ಕೂಡಲೇ ಅಂಗನವಾಡಿ ಕಾರ್ಯಕರ್ತೆಯರ ಕುಂದುಕೊರತೆ ಸಭೆಯನ್ನು ಕರೆಯಬೇಕು ಎಂದರು.

ರಾಜ್ಯ ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೆ ಪುಷ್ಪಲತಾ, ಪ್ರಧಾನ ಕಾರ್ಯದರ್ಶಿ ಸಿ. ಜಯಲಕ್ಷ್ಮಮ್ಮ, ಖಜಾಂಚಿ ಜಯಶೀಲಾ, ಅನ್ನಪೂರ್ಣ, ಸಿಐಟಿಯು ಸಂಚಾಲಕ ಬಿ.ವಿ. ರಾಘವೇಂದ್ರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !