ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ ಚುನಾವಣೆ ಗೆಲುವು ರಾಜಕೀಯದ ದಿಕ್ಸೂಚಿ: ಕುಮಾರಸ್ವಾಮಿ

ಜೆಡಿಎಸ್ ಅಭ್ಯರ್ಥಿಯಾಗಿ ಅನಿತಾ ನಾಮಪತ್ರ ಸಲ್ಲಿಕೆ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸಾಥ್‌
Last Updated 15 ಅಕ್ಟೋಬರ್ 2018, 13:48 IST
ಅಕ್ಷರ ಗಾತ್ರ

ರಾಮನಗರ: ಈ ಬಾರಿ ಉಪ ಚುನಾವಣೆಯಲ್ಲಿ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭೆ ಕ್ಷೇತ್ರಗಳಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್‌ ಮೈತ್ರಿಕೂಟದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಇದು ಮುಂದಿನ ಲೋಕಸಭೆ ಚುನಾವಣೆಯ ದಿಕ್ಕನ್ನು ಬದಲಿಸಲಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ಸೋಮವಾರ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ ಬಳಿಕ ಅವರು ಪತ್ರಕರ್ತರ ಜೊತೆ ಮಾತನಾಡಿದರು. ‘ಕಳೆದ ಚುನಾವಣೆಯಲ್ಲಿ ಈ ಎರಡೂ ಕ್ಷೇತ್ರದ ಜನತೆಯೇ ಚುನಾವಣೆ ನಡೆಸಿದ್ದಾರೆ. ಎರಡೂ ಕಡೆ ನನ್ನನ್ನು ಗೆಲ್ಲಿಸಿ ರಾಜಕೀಯವಾಗಿ ಶಕ್ತಿ ತುಂಬಿದ್ದಾರೆ. ರಾಜೀನಾಮೆ ನೀಡುವ ಸಂದರ್ಭ ಜನರು, ನಿಮ್ಮ ಕುಟುಂಬದವರೇ ನಿಲ್ಲಬೇಕು ಎಂದು ಮಾತು ತೆಗೆದುಕೊಂಡಿದ್ದರು. ಹೀಗಾಗಿ ನಮ್ಮ ಕುಟುಂಬದವರನ್ನೇ ನಿಲ್ಲಿಸಬೇಕಾಯಿತು. ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡಲು ನನಗೆ ಆತಂಕವೇನು ಇರಲಿಲ್ಲ’ ಎಂದು ಸಮರ್ಥಿಸಿಕೊಂಡರು.

ಆತಂಕ ಬೇಡ: ಕಳೆದ ಎರಡು ದಶಕಗಳಿಂದ ಇಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಸ್ಪರ್ಧೆ ಇತ್ತು. ಇಂತಹ ಸಂದರ್ಭದಲ್ಲಿ ಕ್ಷೇತ್ರವನ್ನು ನಮಗೆ ಬಿಟ್ಟುಕೊಡುವ ಬಗ್ಗೆ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಆತಂಕ ಇರುವುದು ಸಹಜ. ಆದರೆ ಈ ಮೈತ್ರಿ ಕೇವಲ ರಾಮನಗರಕ್ಕೆ ಸೀಮಿತ ಅಲ್ಲ. ಎರಡೂ ಪಕ್ಷಗಳ ಸಹಮತದಿಂದ ಈ ಮೈತ್ರಿ ಸರ್ಕಾರ ರಚನೆಯಾಗಿದೆ. ರಾಷ್ಟ್ರಮಟ್ಟದಲ್ಲಿಯೂ ಕರ್ನಾಟಕದಿಂದ ಹೊಸ ರಾಜಕೀಯ ಬದಲಾವಣೆಗೆ ಪ್ರಯೋಗಗಳಿಗೆ ಕಾರಣವಾಗಲಿದೆ. ಇಬ್ಬರೂ ಜೊತೆಗೂಡಿ ದೂರದೃಷ್ಟಿಯ ರಾಜಕಾರಣ ಮಾಡೋಣ. ನಾನು ಈ ಹಿಂದೆಯೂ ಯಾವ ಪಕ್ಷದ ಕಾರ್ಯಕರ್ತರ ಮೇಲೆ ದ್ವೇಷದ ರಾಜಕಾರಣ ಮಾಡಿಲ್ಲ. ಹೀಗಾಗಿ ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರು ಆತಂಕಕ್ಕೆ ಒಳಗಾಗಬಾರದು’ ಎಂದು ಮನವಿ ಮಾಡಿದರು.

ಐದು ವರ್ಷ ಕಾಲ ಮೈತ್ರಿ ಸರ್ಕಾರ ಸುಭದ್ರವಾಗಿರಲಿದೆ. ಸರ್ಕಾರ ಬೀಳಿಸುವ ಬಿಜೆಪಿಯ ವ್ಯರ್ಥ ಕಸರತ್ತಿಗೆ ಈ ಐದು ಕ್ಷೇತ್ರಗಳ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪ್ರಚಾರ ಕಾರ್ಯಕ್ಕೆ ಕಾಂಗ್ರೆಸ್‌ನ ಎಲ್ಲ ನಾಯಕರೂ ಬರಲಿದ್ದಾರೆ. ಪರಸ್ಪರ ಒಟ್ಟಾಗಿ ಐದೂ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲಿದ್ದೇವೆ ಎಂದರು.

ಬಳಿಕ ಮಿನಿ ವಿಧಾನಸೌಧದ ಮುಂಭಾಗ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ ‘ಕಳೆದ ಎರಡು ದಶಕಗಳಿಂದ ಈ ಕ್ಷೇತ್ರದ ಜನತೆ ನಮ್ಮ ಕುಟುಂಬವನ್ನು ಆಶೀರ್ವದಿಸುತ್ತಾ ಬಂದಿದ್ದೀರಿ. ಕಳೆದ ಚುನಾವಣೆಯಲ್ಲಿ ಅನಿವಾರ್ಯವಾಗಿ ಇಲ್ಲಿಗೆ ರಾಜೀನಾಮೆ ನೀಡುವ ಪ್ರಸಂಗ ಬಂದೊದಗಿತು. ಆದರೆ ನನ್ನ ಕೊನೆ ಉಸಿರಿರುವವರೆಗೂ ರಾಮನಗರವನ್ನು ಮರೆಯುವುದಿಲ್ಲ’ ಎಂದರು. ‘ಅನಿತಾ ಅಭ್ಯರ್ಥಿಯಾದರೂ ನಿಜವಾಗಿ ನೀವೆ ಅಭ್ಯರ್ಥಿಗಳು. ನೀವೇ ಪಕ್ಷದ ಮುಖಂಡರಂತೆ ಕೆಲಸ ಮಾಡಬೇಕು’ ಎಂದು ಮನವಿ ಮಾಡಿದರು.

‘ಕ್ಷೇತ್ರದಲ್ಲಿನ ಮುಸಲ್ಮಾನರು ಕಳೆದ ಚುನಾವಣೆಯಲ್ಲಿ ಕೆಲವು ಕಾರಣಗಳಿಂದ ಜೆಡಿಎಸ್‌ಗೆ ಹೆಚ್ಚಿನ ಬೆಂಬಲ ನೀಡಿಲ್ಲ. ಆದರೆ ಈ ಬಾರಿ ವದಂತಿಗೆ ಕಿವಿಗೊಡಬಾರದು. ನನಗೆ ಒಕ್ಕಲಿಗರು, ನೀವೂ ಎಲ್ಲರೂ ಒಂದೇ’ ಎಂದರು.

‘ಶಿವಮೊಗ್ಗ ಹಾಗೂ ಮಂಡ್ಯ ಲೋಕಸಭೆ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕಿದೆ. ಶಿವಮೊಗ್ಗದಲ್ಲಿಯೇ 8–10 ದಿನ ಪ್ರಚಾರ ಕೈಗೊಳ್ಳಲಿದ್ದೇನೆ’ ಎಂದು ತಿಳಿಸಿದರು.

ಶಾಸಕರಾದ ಎ.ಮಂಜುನಾಥ್‌, ಗೋಪಾಲಯ್ಯ, ಮುನಿರತ್ನ, ವಿಧಾನ ಪರಿಷತ್ ಸದಸ್ಯರಾದ ಫಾರೂಕ್‌ ಅಹಮ್ಮದ್, ಬೋಜೇಗೌಡ, ಮುಖಂಡರಾದ ಡಿ.ಎಂ. ವಿಶ್ವನಾಥ್‌, ಮರಿಲಿಂಗೇಗೌಡ, ಎಂ.ಸಿ. ಅಶ್ವಥ್‌. ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್ ಇದ್ದರು.
ಇದಕ್ಕೂ ಮುನ್ನಾ ಅನಿತಾ ಕುಮಾರಸ್ವಾಮಿ ವಿವಿಧ ದೇಗುಲ ಹಾಗೂ ದರ್ಗಾಕ್ಕೆ ಭೇಟಿ ನೀಡಿದರು.

ಸಿಟ್ಟಲ್ಲ, ಪ್ರೀತಿ!
‘ನಿರಂತರವಾಗಿ ರಾಮನಗರ ಕ್ಷೇತ್ರದ ಜನರ ಜೊತೆ ಸಂಪರ್ಕದಲ್ಲಿ ಇದ್ದೇನೆ. ನನ್ನನ್ನೂ ಮನೆ ಮಗಳಾಗಿ ಸ್ವೀಕರಿಸಲಿದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾದ ನಂತರ ಅವರು ಕಾರ್ಯಕರ್ತರನ್ನು ಹೆಚ್ಚಿಗೆ ಭೇಟಿ ಮಾಡಲಾಗಿಲ್ಲ. ಹೀಗಾಗಿ ಕೆಲವರು ಸಿಟ್ಟು ವ್ಯಕ್ತಪಡಿಸಿದ್ದಾರೆ. ಅದು ಪ್ರೀತಿ ಹೊರತು ಸಿಟ್ಟಲ್ಲ. ಎಲ್ಲಿ ಪ್ರೀತಿ ಇರುತ್ತದೆಯೋ ಅಲ್ಲಿ ಸಿಟ್ಟು ಇದ್ದೇ ಇರುತ್ತದೆ. ಖಂಡಿತ ಗೆಲುವು ನನ್ನದೇ’ ಎಂದು ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ನ.1ರಿಂದ ಬಡ್ಡಿರಹಿತ ಸಾಲ
ಮೀಟರ್‌ ದಂಧೆಯನ್ನು ನಿಯಂತ್ರಿಸಿ ಬೀದಿಬದಿ ವ್ಯಾಪಾರಿಗಳಿಗೆ ಬಡ್ಡಿರಹಿತ ಸಾಲ ವಿತರಿಸುವ ಯೋಜನೆಯು ನವೆಂಬರ್ 1ರಿಂದ ಜಾರಿಗೆ ಬರಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ರಾಜ್ಯದ 175 ವಿಧಾನಸಭಾ ಕ್ಷೇತ್ರಗಳಲ್ಲಿ ಏಕಕಾಲಕ್ಕೆ ಈ ಯೋಜನೆಯು ಅನುಷ್ಠಾನಗೊಳ್ಳಲಿದೆ. ಮೊಬೈಲ್‌ ಬ್ಯಾಂಕಿಂಗ್‌ ಸೇವೆ ಮೂಲಕ ಬೀದಿಬದಿಯ, ಸಣ್ಣ ವ್ಯಾಪಾರಿಗಳಿಗೆ ದಿನಕ್ಕೆ ಗರಿಷ್ಠ ₨10 ಸಾವಿರದವರೆಗೆ ಸಾಲ ನೀಡಲಾಗುವುದು ಎಂದರು.

ಹೆದ್ದಾರಿಯಲ್ಲೇ ಪ್ರಚಾರ: ಸಂಚಾರ ದಟ್ಟಣೆ
ಮಿನಿ ವಿಧಾನಸೌಧದ ಮುಂಭಾಗದಿಂದ ಐಜೂರು ವೃತ್ತದವರೆಗೆ ಜೆಡಿಎಸ್ ಅದ್ದೂರಿ ಮೆರವಣಿಗೆ ಹಮ್ಮಿಕೊಂಡಿತ್ತು. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಚಾರದ ಸಲುವಾಗಿ ಪೊಲೀಸರು ‘ಝೀರೋ ಟ್ರಾಫಿಕ್‌’ ಸೌಲಭ್ಯ ಒದಗಿಸಿದ್ದರು. ಇದರಿಂದಾಗಿ ಮೈಸೂರು–ಬೆಂಗಳೂರು ಹೆದ್ದಾರಿಯಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಸಂಚಾರ ದಟ್ಟಣೆ ಉಂಟಾಯಿತು. ಕಿಲೋಮೀಟರ್ ಗಟ್ಟಲೆ ವಾಹನಗಳು ಸಾಲಾಗಿ ನಿಂತು, ಪ್ರಯಾಣಿಕರು ಪರದಾಡಿದರು.

ಬೆಳಗ್ಗೆ ಬಿಜೆಪಿ ಕಾರ್ಯಕರ್ತರು ಮೆರವಣಿಗೆಗೆ ಉದ್ದೇಶಿಸಿದ್ದರಾದರೂ ಪೊಲೀಸರು ಅನುಮತಿ ನೀಡಿರಲಿಲ್ಲ.

ಕಾಣದ ನಾಯಕರು
ಜೆಡಿಎಸ್–ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಅನಿತಾ ಅವರನ್ನು ಕಣಕ್ಕೆ ಇಳಿಸಿರುವುದಾಗಿ ಹೇಳಿದ್ದರೂ ಕಾಂಗ್ರೆಸ್‌ ಕಾರ್ಯಕರ್ತರು, ನಾಯಕರು ಕಾಣಿಸಿಕೊಳ್ಳಲಿಲ್ಲ. ಕಾಂಗ್ರೆಸ್ ಪರವಾಗಿ ಶಾಸಕ ಮುನಿರತ್ನ ಮಾತ್ರ ಬಂದಿದ್ದರು.

‘ಡಿ.ಕೆ. ಶಿವಕುಮಾರ್ ಬಳ್ಳಾರಿ ಉಸ್ತುವಾರಿ ಹೊತ್ತಿರುವ ಕಾರಣ ಬಂದಿಲ್ಲ. ಸುರೇಶ್‌ ಕಾರ್ಯಕ್ರಮವೊಂದಕ್ಕೆ ಹೋಗಿದ್ದಾರೆ. ಎಲ್ಲರೂ ಜೊತೆಗೂಡಿಯೇ ಪ್ರಚಾರ ಮಾಡುತ್ತೇವೆ’ ಎಂದು ಕುಮಾರಸ್ವಾಮಿ ಸ್ಪಷ್ಟನೆ ನೀಡಿದರು.

*ನಮ್ಮ ಕುಟುಂಬದವರನ್ನೇ ಉಪ ಚುನಾವಣೆಗೆ ನಿಲ್ಲಿಸಬೇಕು ಎಂಬುದು ಕಾರ್ಯಕರ್ತರ ಆಗ್ರಹವಾಗಿತ್ತು. ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡಲು ಆತಂಕ ಇರಲಿಲ್ಲ
-ಎಚ್.ಡಿ. ಕುಮಾರಸ್ವಾಮಿ,ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT