ಉಪಚುನಾವಣೆ: ‘ದಳ’ಕ್ಕೆ ಸಿಹಿ–ಕಹಿ

7
ಅಂಬರೀಷ್‌ಗೆ ಮುಖಭಂಗ: ಕೆ.ರಾಜು ಗೆಲುವಿನ ಓಟ

ಉಪಚುನಾವಣೆ: ‘ದಳ’ಕ್ಕೆ ಸಿಹಿ–ಕಹಿ

Published:
Updated:
Deccan Herald

ರಾಮನಗರ: ಮೂರನೇ ಉಪ ಚುನಾವಣೆ ಕದನಕ್ಕೆ ರಾಮನಗರ ವಿಧಾನಸಭಾ ಕ್ಷೇತ್ರ ಸಜ್ಜಾಗುತ್ತಿದೆ. ಈ ಹಿಂದೆ ಇಲ್ಲಿ ನಡೆದ ಎರಡು ಉಪ ಕದನಗಳಲ್ಲಿ ಜೆಡಿಎಸ್ (ಹಿಂದಿನ ಜನತಾದಳ) ಮಿಶ್ರ ಫಲ ಕಂಡಿದೆ.

ದೇವೇಗೌಡರ ಕುಟುಂಬದವರ ರಾಜೀನಾಮೆಯಿಂದ ತೆರವಾದ ಸ್ಥಾನಗಳಿಗೆ ಈ ಉಪ ಚುನಾವಣೆಗಳು ನಡೆದಿದ್ದವು ಎನ್ನುವುದು ವಿಶೇಷ. ಒಮ್ಮೆ ಸ್ವತಃ ದೇವೇಗೌಡರು ಅವಕಾಶ ಬಿಟ್ಟುಕೊಟ್ಟರೆ, ಇನ್ನೊಮ್ಮೆ ಕುಮಾರಸ್ವಾಮಿ ರಾಜೀನಾಮೆಯಿಂದ ಚುನಾವಣೆ ನಡೆದಿದೆ.

ಎಚ್‌.ಡಿ. ದೇವೇಗೌಡರಿಗೆ ರಾಜಕೀಯ ಪುನರ್ಜನ್ಮ ನೀಡಿದ ಕ್ಷೇತ್ರ ರಾಮನಗರ. 1989ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಹೊಳೆ ನರಸೀಪುರ ಹಾಗೂ ಕನಕಪುರ ಕ್ಷೇತ್ರಗಳೆರಡರಲ್ಲೂ ಸೋಲು ಕಂಡಿದ್ದ ಅವರಿಗೆ ಗೆಲುವಿನ ಸಿಹಿ ನೀಡಿದ್ದು ಇದೇ ರಾಮನಗರ ಕ್ಷೇತ್ರ. 1994ರ ಸಾರ್ವತ್ರಿಕ ಚುನಾವಣೆಯಲ್ಲಿ ಜನತಾದಳವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತ ಗೌಡರು ಇಲ್ಲಿಂದ ಸ್ಪರ್ಧೆಗೆ ಇಳಿದಿದ್ದರು. ಆ ಚುನಾವಣೆಯಲ್ಲಿ ಅವರು ಗೆದ್ದಿದ್ದು ಮಾತ್ರವಲ್ಲ, ಜನತಾದಳವು ಸರಳ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರ ಹಿಡಿಯಿತು. ಗೌಡರು ರಾಜ್ಯದ ಮುಖ್ಯಮಂತ್ರಿಯಾಗುವ ಯೋಗವೂ ಒದಗಿ ಬಂದಿತು.

1996ರಲ್ಲಿ ದೇಶದಲ್ಲಿ ಬದಲಾದ ರಾಜಕೀಯ ಪರಿಸ್ಥಿತಿಯಿಂದಾಗಿ ಎಚ್‌.ಡಿ. ದೇವೇಗೌಡರಿಗೆ ಪ್ರಧಾನಿ ಆಗುವ ಅವಕಾಶ ಒದಗಿ ಬಂದಿತು. ಹೀಗಾಗಿ ಅವರು ರಾಮನಗರ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಈ ಸ್ಥಾನಕ್ಕಾಗಿ 1997ರಲ್ಲಿ ಉಪ ಚುನಾವಣೆಯು ಘೋಷಣೆಯಾಯಿತು.

ಸೇಡು ತೀರಿಸಿಕೊಂಡ ಲಿಂಗಪ್ಪ: ಈ ಉಪ ಚುನಾವಣೆಯಲ್ಲಿ ಜನತಾದಳವು ಜನಪ್ರಿಯತೆಯ ಉತ್ತುಂಗದಲ್ಲಿ ಇದ್ದ ನಟ ಅಂಬರೀಷ್ ಅಲಿಯಾಸ್ ಅಮರ್‌ನಾಥ್‌ರನ್ನು ಪಕ್ಷದ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಿತ್ತು. ಅವರಿಗೆ ಇರುವ ಹೆಸರಿನಿಂದ ಸುಲಭವಾಗಿ ಜಯ ಗಳಿಸಬಹುದು ಎಂಬುದು ಗೌಡರ ಲೆಕ್ಕಾಚಾರ ಆಗಿತ್ತು.

ಕಳೆದ ಚುನಾವಣೆಯಲ್ಲಿ ಗೌಡರ ವಿರುದ್ಧ ಸಿ.ಎಂ. ಲಿಂಗಪ್ಪ ಮತ್ತೆ ಕಾಂಗ್ರೆಸ್‌ನಿಂದ ಸ್ಪರ್ಧೆಗೆ ಇಳಿದಿದ್ದರು. ರಾಮನಗರದ ಜನ ಅಂಬರೀಷ್‌ರನ್ನು ತಿರಸ್ಕರಿಸಿ ಕಾಂಗ್ರೆಸ್‌ಗೆ ಗೆಲುವಿನ ಮುದ್ರೆ ಒತ್ತಿದರು. ಈ ಮೂಲಕ ಲಿಂಗಪ್ಪ ಕಳೆದ ಚುನಾವಣೆಯಲ್ಲಿನ ಸೋಲಿನ ಸೇಡು ತೀರಿಸಿಕೊಂಡಿದ್ದರು. ಲಿಂಗಪ್ಪ 59,924 ಮತಗಳನ್ನು ಪಡೆದರೆ, ಅಂಬರೀಷ್‌ 50,314 ಮತ ಗಳಿಸಲಷ್ಟೇ ಶಕ್ತರಾದರು.

ರಾಜುಗೆ ಸುಲಭ ಜಯ: ರಾಮನಗರ ವಿಧಾನಸಭಾ ಕ್ಷೇತ್ರದಿಂದ 2008ರಲ್ಲಿ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾದ ಎಚ್‌.ಡಿ. ಕುಮಾರಸ್ವಾಮಿ 2009ರಲ್ಲಿ ಬೆಂಗಳೂರು ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾದರು. ಹೀಗಾಗಿ ರಾಮನಗರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಈ ಬಾರಿಯ ಉಪ ಚುನಾವಣೆಯಲ್ಲಿ ಜೆಡಿಎಸ್ ಸ್ಥಳೀಯ ಅಭ್ಯರ್ಥಿಗೆ ಮಣೆ ಹಾಕಿತು. 2009ರಲ್ಲಿ ನಡೆದ ಈ ಚುನಾವಣೆಯಲ್ಲಿ ಪಕ್ಷದ ಮುಖಂಡ ಕೆ.ರಾಜು ಅಭ್ಯರ್ಥಿಯಾದರು. ಕಾಂಗ್ರೆಸ್‌ನಿಂದ ಮತ್ತೆ ಸಿ.ಎಂ. ಲಿಂಗಪ್ಪ ಅದೃಷ್ಟ ಪರೀಕ್ಷೆಗೆ ಇಳಿದರು.

ಈ ಬಾರಿ ಲಿಂಗಪ್ಪರಿಗೆ ಅದೃಷ್ಟ ಕೈಕೊಟ್ಟಿತ್ತು. ರಾಜುಗೆ ಮೊದಲ ಬಾರಿಗೆ ಶಾಸಕರಾಗುವ ಯೋಗ ಕೂಡಿ ಬಂದಿತು. ಅವರು 60,774 ಮತಗಳೊಂದಿಗೆ ಗೆಲುವು ಸಾಧಿಸಿದರೆ, ಲಿಂಗಪ್ಪ 38,724 ಮತ ಪಡೆದು ಮುಖಭಂಗ ಅನುಭವಿಸಿದರು.

**

1997ರ ಉಪ ಚುನಾವಣೆ ಫಲಿತಾಂಶ
ವಿಜೇತ: ಸಿ.ಎಂ. ಲಿಂಗಪ್ಪ (ಕಾಂಗ್ರೆಸ್‌)
ಸಮೀಪದ ಸ್ಪರ್ಧಿ: ಎಂ.ಎಚ್. ಅಮರ್‌ನಾಥ್ ಅಲಿಯಾಸ್ ಅಂಬರೀಷ್‌ (ಜನತಾದಳ)
ಗೆಲುವಿನ ಅಂತರ: 9,610 ಮತ

**
2009ರ ಉಪ ಚುನಾವಣೆ ಫಲಿತಾಂಶ
ವಿಜೇತ: ಕೆ.ರಾಜು (ಜೆಡಿಎಸ್‌)
ಸಮೀಪದ ಸ್ಪರ್ಧಿ: ಸಿ.ಎಂ. ಲಿಂಗಪ್ಪ (ಕಾಂಗ್ರೆಸ್‌)
ಗೆಲುವಿನ ಅಂತರ: 22,050 ಮತ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !