ರಾಮನಗರ: ಜೆಡಿಎಸ್ ಕಚೇರಿಯಲ್ಲಿ ಕಾರ್ಯಕರ್ತರ ದಾಂದಲೆ

7

ರಾಮನಗರ: ಜೆಡಿಎಸ್ ಕಚೇರಿಯಲ್ಲಿ ಕಾರ್ಯಕರ್ತರ ದಾಂದಲೆ

Published:
Updated:

ರಾಮನಗರ: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಪ್ರತಿನಿಧಿಸುವ ಕ್ಷೇತ್ರವಾದ ಚನ್ನಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಬುಧವಾರ ಮಧ್ಯಾಹ್ನ ಪಕ್ಷದ ಕಾರ್ಯಕರ್ತರು ದಾಂದಲೆ ನಡೆಸಿದ್ದು, ಪೀಠೋಪಕರಣಗಳನ್ನು ಧ್ವಂಸಗೊಳಿಸಿದರು.

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಚ್‌.ಸಿ. ಜಯಮುತ್ತು ವಿರುದ್ಧ ಮಂಗಳವಾರ ಅನಿತಾ ಕುಮಾರಸ್ವಾಮಿ ಒಡೆತನದ ಕಸ್ತೂರಿ ಸುದ್ದಿವಾಹಿನಿಯು ನಕಾರಾತ್ಮಕ ಸುದ್ದಿಯನ್ನು ಬಿತ್ತರ ಮಾಡಿತ್ತು. ‘ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೆಸರು ಹೇಳಿಕೊಂಡು ಜಯಮುತ್ತು ಕ್ಷೇತ್ರದಲ್ಲಿ ಲೂಟಿಗೆ ಇಳಿದಿದ್ದಾನೆ. ಎಲ್ಲೋ ಬಿದ್ದವನನ್ನು ಕರೆದು ಎಚ್‌ಡಿಕೆ ಸ್ಥಾನ ಮಾನ ನೀಡಿದ್ದರು. ಈಗ ಅದೇ ವ್ಯಕ್ತಿ ದೇವೇಗೌಡರ ಕುಟುಂಬದ ವಿರುದ್ಧವೇ ತಿರುಗಿ ಬಿದ್ದಿದ್ದಾನೆ. ಇವನನ್ನು ಕೇಳಿ ಚನ್ನಪಟ್ಟಣದಲ್ಲಿ ಅಭಿವೃದ್ಧಿ ಮಾಡಬೇಕಂತೆ. ಈತನೊಬ್ಬ ಘೋಮುಖ ವ್ಯಾಘ್ರ. ಕಳೆದ ಚುನಾವಣೆಯಲ್ಲಿ ಟಿಕೆಟ್ ನೀಡದ್ದಕ್ಕೆ ಪ್ರತಿಯಾಗಿ ಸಂಚು ರೂಪಿಸಿದ್ದಾನೆ’ ಎಂದು ವಾಹಿನಿಯಲ್ಲಿ ಸುದ್ದಿ ಪ್ರಸಾರ ಆಗಿತ್ತು.

ಇದಕ್ಕೆ ಸ್ಪಷ್ಟನೆ ನೀಡುವ ಸಲುವಾಗಿ ಬುಧವಾರ ಜಯಮುತ್ತು ಚನ್ನಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ‘ನಾನೆಂದೂ ಪಕ್ಷದ್ರೋಹದ ಕೆಲಸ ಮಾಡಿಲ್ಲ. ಜೆಡಿಎಸ್ ಅನ್ನು ಬಿಡುವುದೂ ಇಲ್ಲ.  ಸುದ್ದಿವಾಹಿನಿಯಲ್ಲಿ ಪ್ರಸಾರವಾದ ಸುದ್ದಿಯ ಕುರಿತು ಪಕ್ಷದ ವರಿಷ್ಠರಿಗೆ ದೂರು ನೀಡುತ್ತೇನೆ’ ಎಂದು ಹೇಳಿದರು.

ಇತ್ತ ಅದೇ ಸಮಯಕ್ಕೆ ಚನ್ನಪಟ್ಟಣ ಜೆಡಿಎಸ್ ಕಚೇರಿಯಲ್ಲಿಯೂ ಪತ್ರಿಕಾಗೋಷ್ಠಿ ಆಯೋಜನೆ ಆಗಿತ್ತು. ಜಯಮುತ್ತು ಬೆಂಬಲಿಸಿ ಅವರ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಅವರ ಅಭಿಮಾನಿಗಳು ಅಲ್ಲಿಂದ ನೇರವಾಗಿ ಜೆಡಿಎಸ್‌ ಕಚೇರಿಗೆ ತೆರಳಿ ಅಲ್ಲಿ ಕುರ್ಚಿಗಳನ್ನು ಒಡೆದು ಅಸಮಾಧಾನ ವ್ಯಕ್ತಪಡಿಸಿದರು. ಜಯಮುತ್ತು ಬೆಂಬಲಕ್ಕೆ ಪಕ್ಷದ ಸ್ಥಳೀಯ ಮುಖಂಡರು ನಿಲ್ಲಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳದಲ್ಲಿ ತಳ್ಳಾಟ ನಡೆದು ಒಂದಿಬ್ಬರಿಗೆ ಸಣ್ಣಪುಟ್ಟ ಗಾಯಗಳಾದವು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !