ರಾಮನಗರದ ರಸ್ತೆಗಳಿಗಿಲ್ಲ ದುರಸ್ತಿ ಭಾಗ್ಯ

7
ಮುಖ್ಯಮಂತ್ರಿಯನ್ನು ಚುನಾಯಿಸಿದರೂ ಬದಲಾಗದ ಪರಿಸ್ಥಿತಿ; ಸಾರ್ವಜನಿಕರ ಪರದಾಟ

ರಾಮನಗರದ ರಸ್ತೆಗಳಿಗಿಲ್ಲ ದುರಸ್ತಿ ಭಾಗ್ಯ

Published:
Updated:
Deccan Herald

ರಾಮನಗರ: ‘ಸಾರ್ವತ್ರಿಕ ಚುನಾವಣೆ ಕಳೆಯಿತು. ಉಪ ಚುನಾವಣೆಯೂ ಮುಗಿಯಿತು. ಇನ್ಯಾವ ನೀತಿಸಂಹಿತೆಯ ಅಡ್ಡಿ ಇಲ್ಲ. ಈಗಾಲಾದರೂ ರಸ್ತೆಗಳನ್ನು ದುರಸ್ತಿ ಮಾಡಿ’

–ಇದು ನಗರದ ಜನರು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಕೇಳುತ್ತಿರುವ ಪ್ರಶ್ನೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಐದು ಬಾರಿ ಪ್ರತಿನಿಧಿಸಿರುವ ರಾಮನಗರ ಪಟ್ಟಣದಲ್ಲಿನ ಮುಖ್ಯರಸ್ತೆಗಳ ತುಂಬಾ ಗುಂಡಿಗಳು ಬಿದ್ದಿವೆ. ಹೊಸ ಸರ್ಕಾರ ಬಂದು ಆರು ತಿಂಗಳು ಕಳೆದರೂ ಕನಿಷ್ಠ ಜಿಲ್ಲಾ ಕೇಂದ್ರದಲ್ಲಿನ ರಸ್ತೆಗಳಿಗೆ ಡಾಂಬರು ಹಾಕುವ ಕಾರ್ಯಕ್ಕೆ ಮುಂದಾಗಿಲ್ಲ.

ಕಳೆದ ಐದು ವರ್ಷದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಿದ್ದ ವೇಳೆ ನಗರದ ರಸ್ತೆಗಳು ದುರಸ್ತಿಯ ಭಾಗ್ಯ ಕಾಣಲಿಲ್ಲ. ಈಗ ಇಲ್ಲಿನವರೇ ಆದ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾರೆ. ಅವರ ಪತ್ನಿಯೇ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ಈಗಾಲಾದರೂ ಈ ರಸ್ತೆಗಳನ್ನು ತ್ವರಿತ ಗತಿಯಲ್ಲಿ ಅಭಿವೃದ್ಧಿಪಡಿಸಬೇಕು ಎನ್ನುವುದು ಜನರ ಬೇಡಿಕೆಯಾಗಿದೆ.

ಎಲ್ಲೆಲ್ಲಿ ಹಾಳು: ಬೆಂಗಳೂರು–ಮೈಸೂರು ಹೆದ್ದಾರಿ ವಿಸ್ತರಣೆ ನಡೆದಿರುವ ಕಾರಣ ಇದೊಂದು ಹೆದ್ದಾರಿ ಮಾತ್ರ ಅಚ್ಚುಕಟ್ಟಾಗಿದೆ. ಉಳಿದ ಬಹುತೇಕ ರಸ್ತೆಗಳಲ್ಲಿ ಗುಂಡಿಗಳು ಎದ್ದು ಕಾಣುತ್ತಿವೆ. ಮಾಗಡಿ ರಸ್ತೆ, ಜಾಲಮಂಗಲ ರಸ್ತೆ, ಕನಕಪುರ ರಸ್ತೆ, ಸ್ಟೇಷನ್‌ ರಸ್ತೆ, ಎಂ.ಜಿ. ಮಾರುಕಟ್ಟೆ, ಯಾರಬ್‌ ನಗರ ಮುಖ್ಯರಸ್ತೆ... ಹೀಗೆ ಪ್ರಮುಖ ರಸ್ತೆಗಳೆಲ್ಲ ಸಂಪೂರ್ಣ ಡಾಂಬರು ಕಂಡು ಅದೆಷ್ಟೋ ವರ್ಷ ಕಳೆಯುತ್ತಿವೆ.

ಮುಖ್ಯರಸ್ತೆಗಳ ಪಾಡೇ ಹೀಗಿರುವಾಗ ಬಡಾವಣೆಗಳ ಒಳರಸ್ತೆಗಳ ಪರಿಸ್ಥಿತಿ ಹೇಳುವಂತೆ ಇಲ್ಲ. ಅದರಲ್ಲಿಯೂ ಈಗಷ್ಟೇ ಅಭಿವೃದ್ಧಿ ಹೊಂದುತ್ತಿರುವ ಎಷ್ಟೋ ಬಡಾವಣೆಗಳಲ್ಲಿ ಇನ್ನೂ ಸರಿಯಾದ ರಸ್ತೆಗಳೇ ನಿರ್ಮಾಣ ಆಗಿಲ್ಲ.

‘ರಸ್ತೆಗಳು ಹದಗೆಟ್ಟಿರುವ ಕಾರಣ ವಾಹನ ಚಾಲನೆ ದುಸ್ತರವಾಗಿದೆ. ಮಳೆ ಬಂದ ಸಂದರ್ಭ ಗುಂಡಿಗಳು ಕಾಣದೇ ಬೈಕ್‌ ಸವಾರರು ಬಿದ್ದ ಉದಾಹರಣೆಗಳು ಸಾಕಷ್ಟಿವೆ. ಆಚೀಚೆ ಓಡಾಡುವ ಪಾದಚಾರಿಗಳಿಗೂ ನಿತ್ಯ ದೂಳಿನ ಸ್ನಾನ ತಪ್ಪಿಲ್ಲ’ ಎನ್ನುತ್ತಾರೆ ಐಜೂರು ನಿವಾಸಿ ಶ್ರೀನಿವಾಸ.

ನಗರೋತ್ಥಾನ ಅನುದಾನ ಸಾಲಲ್ಲ: ಸದ್ಯ ನಗರಸಭೆಯ ವ್ಯಾಪ್ತಿಯಲ್ಲಿ ನಗರೋತ್ಥಾನ–2 ಯೋಜನೆಯು ಜಾರಿಯಲ್ಲಿದ್ದು, ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ರಾಮನಗರಕ್ಕೆ ಸುಮಾರು ₨30 ಕೋಟಿ ಅನುದಾನ ಲಭ್ಯವಿದ್ದು, ಅದರಲ್ಲಿಯೇ 31 ವಾರ್ಡುಗಳ ರಸ್ತೆ, ಚರಂಡಿ, ಒಳಚರಂಡಿ ಮೊದಲಾದ ಎಲ್ಲ ಕಾಮಗಾರಿಗಳೂ ನಡೆಯಬೇಕಿದೆ. ಹೀಗಿರುವಾಗ ಅಲ್ಪ ಅನುದಾನದಲ್ಲಿ ಯಾವ ರಸ್ತೆಯನ್ನೂ ಸಂಪೂರ್ಣವಾಗಿ ದುರಸ್ತಿ ಮಾಡಲು ಆಗದು ಎನ್ನುತ್ತಾರೆ ನಗರಸಭೆಯ ಸದಸ್ಯರು.

ತೇಪೆ ಹಚ್ಚುವ ಯತ್ನ: ರಸ್ತೆ ಗುಂಡಿಗಳಿಗೆ ಆಗಾಗ್ಗೆ ತೇಪೆ ಹಚ್ಚುವ ಕೆಲಸವನ್ನು ನಗರಸಭೆ ಮಾಡುತ್ತಿದೆಯಾದರೂ ಅದು ಪ್ರಯೋಜನಕ್ಕೆ ಬಾರದಂತೆ ಆಗಿದೆ. ಹಲವು ಕಡೆ ಹೀಗೆ ಮುಚ್ಚಿದ್ದ ಗುಂಡಿಗಳು ವಾರಗಳ ಒಳಗೆ ಮತ್ತೆ ಬಾಯಿ ತೆರೆದು ಕುಳಿತಿವೆ.

ದಂಡ ಕಟ್ಟಿಸುವವರು ಯಾರು?
‘ರಸ್ತೆ ಬದಿಯಲ್ಲಿ ಕೇಬಲ್‌ಗಳ ಅಳವಡಿಕೆಗಾಗಿ ಅಲ್ಲಲ್ಲಿ ಅಗೆಯಲಾಗಿದೆ. ಇದರಿಂದ ಮೊದಲೇ ದುಃಸ್ಥಿತಿಯಲ್ಲಿ ಇರುವ ರಸ್ತೆಗಳು ಇನ್ನಷ್ಟು ಹಾಳಾಗಿವೆ. ರಸ್ತೆ ಅಗೆದವರೇ ಮತ್ತೆ ಗುಂಡಿ ಮುಚ್ಚಿ ಡಾಂಬರೀಕರಣ ಮಾಡಬೇಕು ಎಂಬ ನಿಯಮ ಇದ್ದರೂ ನಗರಸಭೆ ಅಧಿಕಾರಿಗಳು ಮಾತ್ರ ಅದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಭೂಗತ ಕೇಬಲ್‌ ಅಳವಡಿಸಿದವರು ಕಾಟಾಚಾರಕ್ಕೆ ಗುಂಡಿಗಳನ್ನು ಮುಚ್ಚಿ ಕೈತೊಳೆದುಕೊಳ್ಳುತ್ತಿದ್ದಾರೆ’ ಎಂದು ಸಾರ್ವಜನಿಕರು ದೂರುತ್ತಾರೆ.

ವಿಶೇಷ ಪ್ಯಾಕೇಜ್‌ ಘೋಷಣೆಗೆ ಆಗ್ರಹ
ಐದು ಬಾರಿ ತಮ್ಮನ್ನು ಶಾಸಕರಾಗಿ ಆಯ್ಕೆ ಮಾಡಿ ವಿಧಾನಸಭೆಗೆ ಕಳುಹಿಸಿರುವ ರಾಮನಗರದ ರಸ್ತೆ ಅಭಿವೃದ್ಧಿಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿಶೇಷ ಪ್ಯಾಕೇಜ್‌ ಘೋಷಿಸಬೇಕು ಎನ್ನುವುದು ಇಲ್ಲಿನ ಜನರ ಆಗ್ರಹವಾಗಿದೆ.

‘ಮುಖ್ಯಮಂತ್ರಿ ಆದವರು ತಮ್ಮ ಜಿಲ್ಲಾ ಕೇಂದ್ರಗಳಲ್ಲಿನ ಮೂಲ ಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‌ ನೀಡುವ ಸಂಪ್ರದಾಯ ಆಗಿನಿಂದಲೂ ಇದೆ. ಸದ್ಯ ಇಲ್ಲಿನ ಮುಖ್ಯ ರಸ್ತೆಗಳ ಅಭಿವೃದ್ಧಿಗೆ ಕುಮಾರಸ್ವಾಮಿ ಕನಿಷ್ಠ ₨50 ಕೋಟಿ ಅನುದಾನವನ್ನಾದರೂ ನೀಡಬೇಕು’ ಎನ್ನುತ್ತಾರೆ ವಿವೇಕಾನಂದ ನಗರ ನಿವಾಸಿ ಶಂಕರ್.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !