ಉಪಚುನಾವಣೆ ಘೋಷಣೆ: ಗರಿಗೆದರಿದ ಚಟುವಟಿಕೆ

7
ಜೆಡಿಎಸ್‌–ಕಾಂಗ್ರೆಸ್ ಮೈತ್ರಿ ಬಗ್ಗೆ ಕುತೂಹಲ: ಅಭ್ಯರ್ಥಿ ಹಾಕುವಂತೆ ಕಾರ್ಯಕರ್ತರ ಒತ್ತಡ

ಉಪಚುನಾವಣೆ ಘೋಷಣೆ: ಗರಿಗೆದರಿದ ಚಟುವಟಿಕೆ

Published:
Updated:

ರಾಮನಗರ: ಇಲ್ಲಿನ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ನಾಮಪತ್ರ ಸಲ್ಲಿಕೆಗೆ ಇದೇ 16 ಕಡೆಯ ದಿನವಾಗಿದೆ. ನವೆಂಬರ್‌ 3ರಂದು ಮತದಾನ ಪ್ರಕ್ರಿಯೆಯು ನಡೆಯಲಿದ್ದು, 6ರಂದು ಮತ ಎಣಿಕೆ ಕಾರ್ಯವು ನಿಗದಿಯಾಗಿದೆ. ಚುನಾವಣೆ ಘೋಷಣೆಯ ನಿರೀಕ್ಷೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಆಯ್ಕೆ ಕುರಿತು ಕಳೆದೊಂದು ವಾರದಿಂದಲೂ ಚರ್ಚೆಯಲ್ಲಿ ತೊಡಗಿಕೊಂಡಿದ್ದವು. ಈಗ ಈ ಚರ್ಚೆಗೆ ಇನ್ನಷ್ಟು ಮಹತ್ವ ಬಂದಿದೆ.

ಜೆಡಿಎಸ್‌ನಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ಈ ಸ್ಥಾನ ತೆರವಾಗಿತ್ತು. ಈಗ ನಡೆಯಲಿರುವ ಉಪ ಚುನಾವಣೆಗೆ ಅವರ ಪಕ್ಷದಿಂದ ಅವರ ಪತ್ನಿ ಅನಿತಾ ಅವರ ಹೆಸರೇ ಹೆಚ್ಚಾಗಿ ಚಾಲ್ತಿಯಲ್ಲಿದೆ. ಉಳಿದ ಯಾವ ಕಾರ್ಯಕರ್ತರು, ಮುಖಂಡರೂ ಟಿಕೆಟ್‌ಗಾಗಿ ವರಿಷ್ಠದಲ್ಲಿ ಬೇಡಿಕೆ ಇಟ್ಟಿಲ್ಲ. ಅನಿತಾ ಸ್ಪರ್ಧೆ ಸ್ಪರ್ಧೆ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದು, ಕ್ಷೇತ್ರದ ಕಾರ್ಯಕರ್ತರ ಸಂಪರ್ಕದಲ್ಲಿ ಇದ್ದಾರೆ. ದೇವೇಗೌಡರು ಹಸಿರು ನಿಶಾನೆ ತೋರಿದಲ್ಲಿ ಕಣಕ್ಕೆ ಇಳಿಯುವ ಉತ್ಸಾಹದಲ್ಲಿ ಇದ್ದಾರೆ.

ಕಳೆದ ಸಾರ್ವತ್ರಿಕ ಚುನಾವಣೆ ಸಂದರ್ಭವೇ ಚನ್ನಪಟ್ಟಣ ಕ್ಷೇತ್ರದಿಂದ ಮತ್ತೊಮ್ಮೆ ಅನಿತಾ ಹೆಸರು ಕೇಳಿಬಂದಿತ್ತು. ಆದರೆ ಕುಟುಂಬದಲ್ಲಿ ಇಬ್ಬರಿಗೇ ಟಿಕೆಟ್ ಎಂಬ ಸೂತ್ರಕ್ಕೆ ಜೆಡಿಎಸ್ ಗಂಟುಬಿದ್ದ ಕಾರಣ ಅವರು ನಿರಾಸೆ ಅನುಭವಿಸಿದ್ದರು. ಇದೀಗ ಉಪ ಚುನಾವಣೆ ಮೂಲಕ ಶಾಸಕರಾಗುವ ಉತ್ಸಾಹದಲ್ಲಿ ಇದ್ದಾರೆ.

ಅಭ್ಯರ್ಥಿ ಆಯ್ಕೆ ಕುರಿತು ಜೆಡಿಎಸ್‌ನಲ್ಲಿ ಇನ್ನೂ ಅಧಿಕೃತವಾಗಿ ಚರ್ಚೆ ನಡೆದಿಲ್ಲ. ಚುನಾವಣೆ ದಿನಾಂಕ ನಿಗದಿಯಾದ ಬಳಿಕವಷ್ಟೇ ಈ ಬಗ್ಗೆ ಚರ್ಚೆ ಮಾಡುವುದಾಗಿ ಕುಮಾರಸ್ವಾಮಿ ಹೇಳುತ್ತಾ ಬಂದಿದ್ದಾರೆ. ಈಗ ಅಧಿಕೃತವಾಗಿ ಪ್ರಕಟಿಸುವುದಷ್ಟೇ ಬಾಕಿ ಉಳಿದಿದೆ.

ರುದ್ರೇಶ್ ಹೆಸರು ಮುಂಚೂಣಿಯಲ್ಲಿ: ಬಿಜೆಪಿ ಕೂಡ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿ ಪ್ರಬಲ ಸ್ಪರ್ಧೆ ಒಡ್ಡಲು ಸಿದ್ಧತೆ ನಡೆದಿದೆ.
ಕಮಲ ಪಾಳಯದ ಅಭ್ಯರ್ಥಿಯಾಗಿ ಕಂಠೀರವ ಸ್ಟುಡಿಯೋದ ಮಾಜಿ ಅಧ್ಯಕ್ಷ, ಬಿ.ಎಸ್. ಯಡಿಯೂರಪ್ಪ ಆಪ್ತರೂ ಆದ ಎಂ. ರುದ್ರೇಶ್ ಹೆಸರು ಮುಂಚೂಣಿಯಲ್ಲಿದೆ. ಕೆಲವು ತಿಂಗಳ ಹಿಂದಷ್ಟೇ ಜಿಲ್ಲೆಯಲ್ಲಿ ಪಕ್ಷ ಸಂಘಟನೆಯ ಸಾರಥ್ಯ ವಹಿಸಿರುವ ಅವರು ತಾವೇ ಅಭ್ಯರ್ಥಿಯಾಗುವ ಭರವಸೆಯಲ್ಲಿ ಇದ್ದಾರೆ.

ಬಿಜೆಪಿ ಅಭ್ಯರ್ಥಿಗಳಾಗಿ ರುದ್ರೇಶ್‌ ಜೊತೆಗೆ ಚನ್ನಪಟ್ಟಣದ ಮಾಜಿ ಶಾಸಕ ಸಿ.ಪಿ, ಯೋಗೇಶ್ವರ್ ಹೆಸರು ಹೆಚ್ಚಾಗಿ ಚಾಲ್ತಿಯಲ್ಲಿ ಇತ್ತು. ಆದರೆ ಸ್ಪರ್ಧೆ ಬಗ್ಗೆ ಸಿಪಿವೈ ಒಲವು ಹೊಂದಿಲ್ಲ. ಅವರು ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವತ್ತ ಮನಸ್ಸು ಮಾಡಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್‌ನಲ್ಲಿ ಗೊಂದಲ: ರಾಮನಗರ ಕ್ಷೇತ್ರದಲ್ಲಿ ಜೆಡಿಎಸ್ ಜೊತೆ ಮೈತ್ರಿಗೆ ಕಾಂಗ್ರೆಸ್ ನಾಯಕರು ಒಲವು ವ್ಯಕ್ತಪಡಿಸಿದ್ದರೆ, ಕಾರ್ಯಕರ್ತರಿಂದ ಅದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಹೀಗಾಗಿ ಕಾಂಗ್ರೆಸ್ ಮುಂದಿನ ನಡೆ ಬಗ್ಗೆ ಕುತೂಹಲ ಮೂಡಿಸಿದೆ.

ದಶಕಗಳಿಂದಲೂ ಇಲ್ಲಿ ಜನತಾದಳ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಡುತ್ತಾ ಬಂದಿದೆ. ಹೀಗಿರುವಾಗ ಮೈತ್ರಿ ಮಾಡಿಕೊಂಡರೆ ಪಕ್ಷದ ಅಸ್ತಿತ್ವಕ್ಕೇ ಪೆಟ್ಟು ಎಂಬುದು ಕಾರ್ಯಕರ್ತರ ವಾದ. ಹಿರಿಯರಾದ ವಿಧಾನಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ ಸೇರಿದಂತೆ ಹಲವರು ಮೈತ್ರಿಗೆ ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿದ್ದಾರೆ. ಅಭ್ಯರ್ಥಿ ಹಾಕದಿದ್ದರೆ ತಾವೇ ಬಂಡಾಯ ಅಭ್ಯರ್ಥಿಯಾಗುವ ಎಚ್ಚರಿಕೆಯನ್ನೂ ನೀಡಿದ್ದಾರೆ.

ಮೈತ್ರಿ ಧರ್ಮ ಪಾಲನೆ ಮಾಡಬೇಕೆ ಅಥವಾ ಪಕ್ಷದ ಹಿತದೃಷ್ಟಿಯಿಂದ ಹೆಸರಿಗಾದರೂ ಅಭ್ಯರ್ಥಿಯಾಕಬೇಕೆ ಎನ್ನುವ ಕುರಿತು ಕಾಂಗ್ರೆಸ್ ಹೈಕಮಾಂಡ್‌ ಚಿಂತನೆ ನಡೆಸಿದೆ. ಈ ಕುರಿತು ಚರ್ಚಿಸಲು ಸೋಮವಾರ ಬೆಂಗಳೂರಿನಲ್ಲಿ ಸಭೆ ನಿಗದಿಯಾಗಿದ್ದು, ಅಲ್ಲಿ ಅಂತಿಮ ತೀರ್ಮಾನ ಹೊರಬೀಳುವ ಸಾಧ್ಯತೆ ಇದೆ.

ಮೂರನೇ ಉಪ ಚುನಾವಣೆ: ರಾಮನಗರದಲ್ಲಿ ಈಗ ನಡೆಯಲಿರುವ ಉಪ ಚುನಾವಣೆಯು ಮೂರನೇಯದ್ದಾಗಿದೆ. 1997ರಲ್ಲಿ ಎಚ್.ಡಿ, ದೇವೇಗೌಡರಿಂದ ತೆರವಾದ ಸ್ಥಾನಕ್ಕೆ ಹಾಗೂ 2009ರಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಒಮ್ಮೆ ಕಾಂಗ್ರೆಸ್ ಗೆದ್ದಿದ್ದರೆ, ಇನ್ನೊಮ್ಮೆ ಜೆಡಿಎಸ್ ಸ್ಥಾನ ಉಳಿಸಿಕೊಂಡಿತ್ತು.

**

ಕಾಂಗ್ರೆಸ್‌ನಿಂದ ಅಭ್ಯರ್ಥಿ ಹಾಕಬೇಕು ಎನ್ನುವುದು ನಮ್ಮೆಲ್ಲರ ಆಗ್ರಹ. ಸೋಮವಾರ ನಡೆಯಲಿರುವ ಪಕ್ಷದ ಸಭೆಯಲ್ಲಿ ಈ ಬಗ್ಗೆ ಒತ್ತಾಯ ಮಾಡುತ್ತೇನೆ.
-ಸಿ.ಎಂ. ಲಿಂಗಪ್ಪ, ವಿಧಾನಪರಿಷತ್ ಸದಸ್ಯ

**

ಬಿಜೆಪಿ ಅಭ್ಯರ್ಥಿಗಳಾಗಿ ಸಿ.ಪಿ. ಯೋಗೇಶ್ವರ್‌ ಹಾಗೂ ನನ್ನ ಹೆಸರು ಚಾಲ್ತಿಯಲ್ಲಿದೆ. ಇಬ್ಬರಲ್ಲಿ ಒಬ್ಬರು ಅಭ್ಯರ್ಥಿಯಾಗುವುದು ಖಚಿತ
-ಎಂ. ರುದ್ರೇಶ್, ಅಧ್ಯಕ್ಷ, ಬಿಜೆಪಿ ಜಿಲ್ಲಾ ಘಟಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !