ಸ್ನಾತಕೋತ್ತರ ತರಗತಿ ಆರಂಭಕ್ಕೆ ಸಿದ್ಧತೆ

7
ಕೆಂಗಲ್‌ ಹನುಮಂತಯ್ಯ ಅಭಿವೃದ್ಧಿ ಭವನ ಬಾಡಿಗೆಗೆ ಪಡೆದ ಬೆಂಗಳೂರು ವಿ.ವಿ

ಸ್ನಾತಕೋತ್ತರ ತರಗತಿ ಆರಂಭಕ್ಕೆ ಸಿದ್ಧತೆ

Published:
Updated:
Deccan Herald

ರಾಮನಗರ: ಇಲ್ಲಿನ ಕೆಂಗಲ್‌ ಹನುಮಂತಯ್ಯ ಅಭಿವೃದ್ಧಿ ಭವನದಲ್ಲಿ ಸ್ನಾತಕೋತ್ತರ ಪದವಿ ತರಗತಿಗಳನ್ನು ನಡೆಸಲು ಬೆಂಗಳೂರು ವಿಶ್ವವಿದ್ಯಾಲಯ ನಿರ್ಧರಿಸಿದೆ.

ಇದಕ್ಕಾಗಿ ಕೊಠಡಿಗಳ ಮರುವಿನ್ಯಾಸ ಕಾಮಗಾರಿ ಭರದಿಂದ ಸಾಗಿದೆ. ಸ್ನಾತಕೋತ್ತರ ಪದವಿ ತರಗತಿಗಳಿಗೆ ಈಗಾಗಲೇ ದಾಖಲಾತಿ ಪ್ರಕ್ರಿಯೆ ನಡೆಯುತ್ತಿದೆ. ಎರಡು ವಾರಗಳಲ್ಲಿ ತರಗತಿಗಳನ್ನು ನಡೆಸಲು ವಿಶ್ವವಿದ್ಯಾಲಯದ ಆಡಳಿತ ವರ್ಗ ಸಿದ್ಧತೆ ಮಾಡಿಕೊಳ್ಳುತ್ತಿದೆ.

ತರಗತಿಗಳು ಕೆಂಗಲ್ ಹನುಮಂತಯ್ಯ ಅಭಿವೃದ್ಧಿ ಭವನದ 2 ಮತ್ತು 3ನೇ ಮಹಡಿಯಲ್ಲಿ ನಡೆಯಲಿವೆ. ವಿಶ್ವವಿದ್ಯಾಲಯವು ತರಗತಿಗಳನ್ನು ನಡೆಸಲು ಅಭಿವೃದ್ಧಿ ಭವನವನ್ನು ಚದರ ಮೀಟರ್‌ಗೆ ₹297.85 ನಂತೆ ಬಾಡಿಗೆ ಆಧಾರದಲ್ಲಿ ಪಡೆಯಲು ಒಪ್ಪಂದ ಮಾಡಿಕೊಂಡಿದೆ.

ವಿದ್ಯಾರ್ಥಿಗಳಿಗೆ ಅನುಕೂಲ: ಪದವಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಜಿಲ್ಲೆಯ ವಿದ್ಯಾರ್ಥಿಗಳಿಗೆ ಎಂ.ಎ, ಎಂ.ಕಾಂ, ಎಂ.ಎಸ್ಸಿ ಮುಂತಾದ ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು ಮಾಡುವ ಅನುಕೂಲವಿರಲಿಲ್ಲ. ಉನ್ನತ ಶಿಕ್ಷಣ ಪಡೆಯಲು ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿಗೆ ಹೋಗಬೇಕಾದ ಅನಿವಾರ್ಯತೆ ಇತ್ತು. ವಿದ್ಯಾರ್ಥಿಗಳು ಸಂಚಾರ ದಟ್ಟಣೆಯಲ್ಲೂ ಪ್ರತಿನಿತ್ಯ ಬೆಂಗಳೂರಿಗೆ ಹೋಗಿ ಬರುವ ಪರಿಸ್ಥಿತಿಯಿತ್ತು.

ಉನ್ನತ ಶಿಕ್ಷಣ ಕಲಿಯಲು ಪ್ರಮುಖವಾಗಿ ಹೆಣ್ಣು ಮಕ್ಕಳಿಗೆ ತೀವ್ರ ಸಮಸ್ಯೆಯಾಗಿತ್ತು. ಪ್ರತಿದಿನ ಸಂಚಾರ ಮಾಡುವುದು, ಹಾಸ್ಟೆಲ್ ವ್ಯವಸ್ಥೆ ಕೊರತೆ ಇತ್ಯಾದಿ ಕಾರಣಗಳಿಂದ ಉನ್ನತ ವಿದ್ಯಾಭ್ಯಾಸವನ್ನೇ ಮೊಟಕುಗೊಳಿಸಬೇಕಾದ ಸಂದರ್ಭ ಉಂಟಾಗುತ್ತಿತ್ತು ಎನ್ನುತ್ತಾರೆ ಮಹಿಳಾ ಹೋರಾಟಗಾರ್ತಿ ಅನಸೂಯಮ್ಮ.

ಬೆಂಗಳೂರು ವಿಶ್ವವಿದ್ಯಾಲಯವು ಕಳೆದ ಶೈಕ್ಷಣಿಕ ವರ್ಷದಿಂದಲೇ ಎಂ.ಕಾಂ ಮತ್ತು ಅರ್ಥಶಾಸ್ತ್ರ ಕೋರ್ಸ್‌ ಗಳ ತರಗತಿಗಳನ್ನು ನಡೆಸಲು ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಬಳಿ ಆರಂಭಿಸಿತ್ತು.  ಈಗ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಮನಗರದಲ್ಲಿ 10 ಸ್ನಾತಕೋತ್ತರ ಕೋರ್ಸ್ ತರಗತಿಗಳನ್ನು ಪ್ರಾರಂಭಿಸಲಾಗುತ್ತಿದೆ. ಇದರಿಂದ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು.

ಸ್ಥಳ ಗುರುತಿಸುವ ಕಾರ್ಯ ನನೆಗುದಿಗೆ: ಜಿಲ್ಲೆಯಲ್ಲಿ ಬೆಂಗಳೂರು ವಿ.ವಿ. ಸ್ನಾತಕೋತ್ತರ ಕೇಂದ್ರದ ಕ್ಯಾಂಪಸ್ ನಿರ್ಮಾಣಕ್ಕಾಗಿ ಉನ್ನತ ಶಿಕ್ಷಣ ಇಲಾಖೆಯು ಬೆಂಗಳೂರು ವಿಶ್ವವಿದ್ಯಾಲಯದ ಸಹಕಾರದಲ್ಲಿ ನಾಲ್ಕು ವರ್ಷಗಳಿಂದ ಜಾಗದ ಹುಡುಕಾಟ ನಡೆಸಿತ್ತು.

ಆದರೆ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ನಾನಾ ಕಾರಣಗಳಿಂದ ಈವರೆಗೆ ವಿಶ್ವವಿದ್ಯಾಲಯದ ಸ್ಥಾಪನೆಗೆ ಸ್ಥಳ ಗುರುತಿಸುವ ಕಾರ್ಯ ನನೆಗುದಿಗೆ ಬಿದ್ದಿದೆ. ರಾಮನಗರ ತಾಲ್ಲೂಕಿನ ಕೃಷ್ಣಾಪುರದೊಡ್ಡಿ ಹಾಗೂ ಚನ್ನಪಟ್ಟಣ ತಾಲ್ಲೂಕಿನ ವಂದಾರಗುಪ್ಪೆ ಸಮೀಪದ ರೇಷ್ಮೆ ಇಲಾಖೆಗೆ ಸೇರಿದ ಕಟ್ಟಡದಲ್ಲಿ ಸ್ನಾತಕೋತ್ತರ ತರಗತಿಗಳನ್ನು ನಡೆಸಲು ತೀರ್ಮಾನಿಸಿ ವಿಶ್ವವಿದ್ಯಾಲಯದ ಅಧಿಕಾರಿಗಳು ಸ್ಥಳ ಪರಿಶೀಲನೆಯನ್ನು ನಡೆಸಿದ್ದರು. ನಂತರ ಕೆಲವು ತಾಂತ್ರಿಕ ಕಾರಣಗಳಿಂದ ಆ ಸ್ಥಳವನ್ನು ಕೈಬಿಡಲಾಯಿತು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !