ಬಾಡಿಗೆ, ಕರಾರಿಗೆ ವಾರದ ಗಡುವು

7
ತಾಲ್ಲೂಕು ಪಂಚಾಯಿತಿ ವಿಶೇಷ ಸಾಮಾನ್ಯ ಸಭೆಯಲ್ಲಿ ನಿರ್ಣಯ

ಬಾಡಿಗೆ, ಕರಾರಿಗೆ ವಾರದ ಗಡುವು

Published:
Updated:
Deccan Herald

ರಾಮನಗರ: ತಾಲ್ಲೂಕು ಪಂಚಾಯಿತಿ ವತಿಯಿಂದ ಹಳೆ ಬಸ್ ನಿಲ್ದಾಣ ವೃತ್ತ ಸಮೀಪ ನಿರ್ಮಿಸಲಾಗಿರುವ ಎಚ್.ಡಿ. ದೇವೇಗೌಡ ವಾಣಿಜ್ಯ ಸಂಕೀರ್ಣದಲ್ಲಿನ ಮಳಿಗೆಗಳಲ್ಲಿನ ಬಾಡಿಗೆದಾರರು ಏಳು ದಿನದ ಒಳಗೆ ಕರಾರು ಪತ್ರ ಮಾಡಿಸಿಕೊಳ್ಳಬೇಕು. ಜತೆಗೆ ಬಾಡಿಗೆ ನೀಡಬೇಕು. ಇಲ್ಲದಿದ್ದಲ್ಲಿ ಅಂತಹ ಮಳಿಗೆಗಳನ್ನು ತಾಲ್ಲೂಕು ಪಂಚಾಯಿತಿ ವಶಕ್ಕೆ ತೆಗೆದುಕೊಳ್ಳಬೇಕು ಎಂದು ತೀರ್ಮಾನಿಸಲಾಯಿತು.

ಇಲ್ಲಿನ ಮಿನಿವಿಧಾನ ಸೌಧದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ಕಾರ್ಯನಿರ್ವಹಣಾಧಿಕಾರಿ ಎಂ.ಬಾಬು ಮಾಹಿತಿ ನೀಡಿ, ಕರಾರು ಪತ್ರ ಮಾಡಿಸಿಕೊಳ್ಳುವಂತೆ, ಬಾಡಿಗೆ ನೀಡುವಂತೆ ಈಗಾಗಲೇ ಎರಡು ನೋಟಿಸ್‌ ನೀಡಿದ್ದರೂ ಪ್ರಯೋಜನವಾಗಿಲ್ಲ. ಬಾಡಿಗೆ ನೀಡಿ ಎಂದರೆ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡಿ ಎಂದು ಮಳಿಗೆಗಳ ಮಾಲೀಕರು ನೆಪ ಹೇಳುತ್ತಿದ್ದಾರೆ ಎಂದು ತಿಳಿಸಿದರು.

‘ಬಾಡಿಗೆ ನೀಡದ, ಕರಾರು ಪತ್ರ ಮಾಡಿಸಿಕೊಳ್ಳದ ಮಳಿಗೆಗಳನ್ನು ಕಾನೂನಿನ ಪ್ರಕಾರ ತಾಲ್ಲೂಕು ಪಂಚಾಯಿತಿ ಸುಪರ್ದಿಗೆ ತೆಗೆದುಕೊಳ್ಳಿ. ಅಕ್ರಮವಾಗಿ ತೆಗೆದಿರುವ ಮಳಿಗೆಗಳನ್ನು ತೆರವುಗೊಳಿಸಿ’ ಎಂದು ಸದಸ್ಯರಾದ ಎಚ್.ಎನ್. ಲಕ್ಷ್ಮೀಕಾಂತ್, ಭದ್ರಯ್ಯ ಒತ್ತಾಯಿಸಿದರು. ಮಳೆ ಬಂದ ಸಂದರ್ಭದಲ್ಲಿ ನೀರು ನಿಂತುಕೊಳ್ಳುತ್ತದೆ. ಈ ಸಮಸ್ಯೆಯನ್ನು ಪಿಡ್ಲ್ಬ್ಯೂಡಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿ ಪರಿಹಾರ ಕಂಡಕೊಳ್ಳಬೇಕು. ಬಾಡಿಗೆ ನೀಡಿದರೆ ಮೂಲ ಸೌಲಭ್ಯಗಳನ್ನು ಕಲ್ಪಿಸಬಹುದು, ಬಾಡಿಗೆಯನ್ನೇ ನೀಡದೆ ಸವಲತ್ತುಗಳನ್ನು ಕಲ್ಪಿಸಿಕೊಡಿ ಎಂದರೆ ಹೇಗೆ ಎಂದು ಪ್ರಶ್ನಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜೆ.ಎನ್. ನಟರಾಜ್‌ ಮಾತನಾಡಿ, ವಾಣಿಜ್ಯ ಮಳಿಗೆಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಪತ್ರ ಬರೆಯಿರಿ. ಈಗಾಗಲೇ ಮಳಿಗೆಗಳಲ್ಲಿ ಇರುವವರಿಗೆ ಈ ವಿಷಯವಾಗಿ ತಿಳಿಸಿ, ಒಪ್ಪದಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ವಾಣಿಜ್ಯ ಮಳಿಗೆಗಳಿಂದ ಬರುವ ಮಾಸಿಕ ಬಾಡಿಗೆ ತಾಲ್ಲೂಕಿನ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವಾಸಿಸಲು ಇರುವ ವಸತಿ ಗೃಹವನ್ನು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ವಾಸವಿರಲು ನೀಡಬಾರದು ಎಂದು ತಿಳಿಸಿದರು.

ಬಯೋಮೆಟ್ರಿಕ್ ಅಳವಡಿಸಿ: ತಾಲ್ಲೂಕಿನಲ್ಲಿ ಇರುವ ಎಲ್ಲಾ ಆರೋಗ್ಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಬಯೋಮೆಟ್ರಿಕ್ ಅಳವಡಿಸಬೇಕು ಎಂದು ಅಧ್ಯಕ್ಷರು ಸೂಚಿಸಿದರು.

‘ಬೆಳಿಗ್ಗೆ 9 ರಿಂದ ಸಂಜೆ 4.30ರ ವರೆಗೆ ವೈದ್ಯರು ಕಾರ್ಯನಿರ್ವಹಿಸಬೇಕು ಎಂಬ ನಿಯಮವಿದೆ. ಆದರೆ ಹಲವು ಕೇಂದ್ರಗಳಲ್ಲಿ ಬೆಳಿಗ್ಗೆ 11 ಗಂಟೆಯಾದರೂ ವೈದ್ಯರು ಬಂದಿರುವುದಿಲ್ಲ, ನಾನು ಅಧ್ಯಕ್ಷನಾದ ಮೇಲೆ ಹಲವು ಕೇಂದ್ರಗಳಿಗೆ ಭೇಟಿ ನೀಡಿದ್ದೆ ವೈದ್ಯರು ಇರಲಿಲ್ಲ. ಇದರಿಂದ ಜನರಿಗೆ ತೊಂದರೆಯಾಗುತ್ತಿದೆ’ ಎಂದರು.

‘ತಾಲ್ಲೂಕಿನಲ್ಲಿ 16 ಆರೋಗ್ಯ ಪ್ರಾಥಮಿಕ ಕೇಂದ್ರ, ಒಂದು ಸಮುದಾಯ ಆರೋಗ್ಯ ಕೇಂದ್ರ, ಎರಡು ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಕೆಲವು ಕೇಂದ್ರಗಳಿಗೆ ಬಯೋಮೆಟ್ರಿಕ್ ಅಳವಡಿಸಲಾಗಿದೆ. ಮುಂದಿನ 15 ದಿನದ ಒಳಗೆ ಎಲ್ಲಾ ಕೇಂದ್ರಗಳಿಗೂ ಬಯೋಮೆಟ್ರಿಕ್ ಅಳವಡಿಸಲಾಗುವುದು’ ಎಂದು ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿ ಡಾ. ಶಶಿಕಲಾ ತಿಳಿಸಿದರು.

ಸರ್ಕಾರಿ ಆಸ್ಪತ್ರೆಗಳಿಗೆ ಬರುವ ಗರ್ಭಿಣಿಯರಿಗೆ ಆಸ್ಪತ್ರೆಯಲ್ಲಿಯೇ ಹೆರಿಗೆ ಮಾಡಿಸಬೇಕು. ಹಲವು ವೈದ್ಯರು ಖಾಸಗಿ ಆಸ್ಪತ್ರೆಗಳಿಗೆ ಕಳಿಸುತ್ತಿದ್ದಾರೆ. ಇದರಿಂದ ಬಡ, ಮಧ್ಯಮ ವರ್ಗದ ಕುಟುಂಬಗಳಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಸದಸ್ಯ ಭದ್ರಯ್ಯ ತಿಳಿಸಿದರು.
ಕೈಲಾಂಚ ಹೋಬಳಿಯ ದಾಸೇಗೌಡನದೊಡ್ಡಿಯ ಇರುಳಿಗರ ಕಾಲೋನಿಯಲ್ಲಿ 17 ಮಕ್ಕಳು ಇದ್ದಾರೆ. ಇವರಿಗೆ ಅಂಗನವಾಡಿ ನಡೆಸಲು ಕ್ರಮ ಕೈಗೊಳ್ಳಿ ಎಂದು ಸದಸ್ಯ ಎಚ್.ಎನ್. ಲಕ್ಷ್ಮೀಕಾಂತ್‌ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಮೀನುಗಾರಿಕೆ ಇಲಾಖೆ ವತಿಯಿಂದ ರಾಮನಗರದಲ್ಲಿ ಮೀನು ಮಾರಾಟ ಕೇಂದ್ರ ತೆರೆಯಿರಿ. ಇದರಿಂದ ಹಲವು ರೈತರಿಗೆ ಲಾಭವಾಗುತ್ತದೆ. ಮೀನು ಸಾಕುವುದು ಒಂದು ಉದ್ಯಮವಾಗಿ ಬೆಳೆಯಲು ಸಹಕಾರಿಯಾಗುತ್ತದೆ ಎಂದು ಸದಸ್ಯ ಎಸ್.ಪಿ. ಜಗದೀಶ್ ತಿಳಿಸಿದರು.

ಅಧ್ಯಕ್ಷ ನಟರಾಜ್ ಮಾತನಾಡಿ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಗೆ ಬರುವ ಪ್ರತಿಯೊಂದು ಇಲಾಖೆಗಳು ತಮ್ಮಲ್ಲಿರುವ ಯೋಜನೆಗಳ ಮಾಹಿತಿಯನ್ನು ಜನರಿಗೆ ತಲಪುವಂತೆ ನೋಡಿಕೊಳ್ಳಬೇಕು. ಅಧಿಕಾರಿಗಳು ಸಮಯಪ್ರಜ್ಞೆಯನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ಸ್ಥಾಯಿಸಮಿತಿಗೆ ಆಯ್ಕೆ: ವರಲಕ್ಷ್ಮಿ ಪ್ರಕಾಶ್ ಅವರನ್ನು ತಾಲ್ಲೂಕು ಪಂಚಾಯಿತಿಯ ನೂತನ ಸ್ಥಾಯಿ ಸಮಿತಿ ಅಧ್ಯಕ್ಷೆಯನ್ನಾಗಿ ಶುಕ್ರವಾರ ಆಯ್ಕೆ ಮಾಡಲಾಯಿತು.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಲಕ್ಷ್ಮಮ್ಮ ದಾಸಪ್ಪ, ಸದಸ್ಯರು ಇದ್ದರು.

ಪ್ಲಾಸ್ಟಿಕ್ ಬಾಟಲ್ ನಿಷೇಧಕ್ಕೆ ಸೂಚನೆ
ತಾಲ್ಲೂಕು ಪಂಚಾಯಿತಿ ಮತ್ತು ಅದರ ಅಧೀನದ ಎಲ್ಲಾ ಇಲಾಖೆಗಳು ನಡೆಸುವ ಸಭೆ, ಸಮಾರಂಭಗಳಲ್ಲಿ ಒಂದೇ ಬಾರಿ ಬಳಸಿ ಎಸೆಯುವ ಪ್ಲಾಸ್ಟಿಕ್‌ ಬಾಟಲ್ ನೀರಿನ ಬಳಕೆಯನ್ನು ನಿಷೇಧಿಸಬೇಕು ಎಂದು ನಟರಾಜ್‌ ಹೇಳಿದರು.

ಇದರಿಂದ ಇಲಾಖೆಗೆ ಹಣ ಉಳಿಯುವುದಲ್ಲದೆ ಪರಿಸರ ಮಲಿನವಾಗುವುದನ್ನೂ ತಡೆಯಬಹುದು. ಸಂಘ–ಸಂಸ್ಥೆಗಳೂ ಈ ನಿರ್ಧಾರವನ್ನು ಬೆಂಬಲಿಸಬೇಕು ಎಂದರು. ಇದೇ ಮೊದಲ ಬಾರಿಗೆ ಸಭೆಯು ನಾಡಗೀತೆಯೊಂದಿಗೆ ಪ್ರಾರಂಭವಾಗಿ ರಾಷ್ಟ್ರಗೀತೆಯೊಂದಿಗೆ ಮುಕ್ತಾಯವಾಯಿತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !