ಯಾರಿಗೆ ಒಲಿಯುತ್ತೆ ಅಧ್ಯಕ್ಷ ಹುದ್ದೆ?

7
ಜಿಲ್ಲಾ ಪಂಚಾಯಿತಿಗೆ ಹೊಸ ಸಾರಥಿ ಆಯ್ಕೆ ಇದೇ 9ರಂದು: ಹಲವರ ಹೆಸರು ಚಾಲ್ತಿಯಲ್ಲಿ

ಯಾರಿಗೆ ಒಲಿಯುತ್ತೆ ಅಧ್ಯಕ್ಷ ಹುದ್ದೆ?

Published:
Updated:
Deccan Herald

ರಾಮನಗರ: ಜಿಲ್ಲಾ ಪಂಚಾಯಿತಿಯ ನೂತನ ಅಧ್ಯಕ್ಷರ ಆಯ್ಕೆಗೆ ದಿನಗಣನೆ ಆರಂಭವಾಗಿದ್ದು, ಸದ್ಯದ ರಾಜಕೀಯ ನಡೆ ಕುತೂಹಲ ಮೂಡಿಸಿದೆ.

ಹೈಕೋರ್ಟ್‌ ಸೂಚನೆಯಂತೆ ನಿರ್ಗಮಿತ ಅಧ್ಯಕ್ಷ ಸಿ.ಪಿ. ರಾಜೇಶ್‌ ರಾಜೀನಾಮೆಯು ಅಂಗೀಕಾರಗೊಂಡಿದ್ದು, ಹೊಸ ಅಧ್ಯಕ್ಷರ ಆಯ್ಕೆಗೆ ಇದೇ 9ರಂದು ಚುನಾವಣೆಯು ನಡೆಯಲಿದೆ. ನಾಲ್ಕಾರು ಮಂದಿ ಈಗಾಗಲೇ ಈ ಹುದ್ದೆಯ ಮೇಲೆ ಕಣ್ಣಿಟ್ಟಿದ್ದು, ಪರ–ವಿರೋಧದ ಲಾಬಿಯೂ ನಡೆದಿದೆ.

ಕಳೆದ ವಿಧಾನಸಭೆ ಚುನಾವಣೆಯ ವೇಳೆ ಜೆಡಿಎಸ್‌ ತೊರೆದು ಕಾಂಗ್ರೆಸ್ ಸೇರಿರುವ ಎಚ್‌.ಸಿ. ಬಾಲಕೃಷ್ಣರ ಸಹೋದರ, ಕೂಟಗಲ್‌ ಕ್ಷೇತ್ರದ ಸದಸ್ಯ ಎಚ್‌.ಎನ್‌. ಅಶೋಕ್‌ ಅಧ್ಯಕ್ಷ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ. ಮತ್ತೊಂದೆಡೆ, ಸಚಿವ ಡಿ.ಕೆ. ಶಿವಕುಮಾರ್ ಸಂಬಂಧಿ, ದೊಡ್ಡಾಲಹಳ್ಳಿ ಕ್ಷೇತ್ರದ ಸದಸ್ಯ ಶಿವಕುಮಾರ್‌ ಸಹ ಸ್ಪರ್ಧೆಯ ಮುಂಚೂಣಿಯಲ್ಲಿ ಇದ್ದಾರೆ.

ಅಶೋಕ್‌ಗೆ ರಾಜಕೀಯ ಹಿನ್ನಲೆ ವರದಾನವಾಗಬಹುದು. ಆದರೆ ಅವರಿನ್ನೂ ತಾಂತ್ರಿಕವಾಗಿ ಜೆಡಿಎಸ್‌ನಲ್ಲಿಯೇ ಇದ್ದಾರೆ. ಆ ಪಕ್ಷದಿಂದ ಆಯ್ಕೆಯಾಗಿರುವ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಹೀಗಾಗಿ ಅದು ಆಯ್ಕೆಗೆ ತೊಡಕಾಗುವ ಸಾಧ್ಯತೆ ಇದೆ. ಶಿವಕುಮಾರ್ ಬಹುವಾಗಿ ಸಚಿವರನ್ನೇ ನಂಬಿದ್ದು, ಕನಕಪುರಕ್ಕೇ ಅಧ್ಯಕ್ಷ ಸ್ಥಾನ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಆದರೆ ಅವರಿಗೆ ಅವಕಾಶ ನೀಡಿದ್ದಲ್ಲಿ ಮತ್ತೆ ಕುಟುಂಬ ರಾಜಕಾರಣದ ಅಪವಾದ ಬರಬಹುದು ಎಂಬ ಕಾರಣಕ್ಕೆ ಡಿಕೆಎಸ್ ಸಹೋದರರು ಎಚ್ಚರಿಕೆಯ ಹೆಜ್ಜೆಗಳನ್ನು ಇಡತೊಡಗಿದ್ದಾರೆ.

ಚನ್ನಪಟ್ಟಣದಿಂದ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷರೂ ಆಗಿರುವ ಎಸ್. ಗಂಗಾಧರ್‌ ಹೆಸರು ಚಾಲ್ತಿಯಲ್ಲಿದೆ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವ ಅವರು ಕಳೆದ ವಿಧಾನಸಭೆ ಚುನಾವಣೆಯ ಸಂದರ್ಭ ಚನ್ನಪಟ್ಟಣದಿಂದ ಕಾಂಗ್ರೆಸ್ ಅಭ್ಯರ್ಥಿಯಾಗುವ ಸಾಧ್ಯತೆ ಇತ್ತು. ಕಡೆಯ ದಿನದಲ್ಲಿ ಆ ಸ್ಥಾನಕ್ಕೆ ಎಚ್‌.ಎಂ. ರೇವಣ್ಣ ಬಂದರು. ಇದರಿಂದ ಉಂಟಾದ ಬೇಸರ ಹೋಗಲಾಡಿಸಲು ಕೈ ಪಾಳಯವು ಅಧ್ಯಕ್ಷ ಹುದ್ದೆಯ ಅವಕಾಶ ನೀಡುವ ಸಾಧ್ಯತೆ ಇದೆ. ಆದರೆ ಸದ್ಯ ಮುಖ್ಯಮಂತ್ರಿಗಳೂ ಅದೇ ಕ್ಷೇತ್ರದವರಾಗಿರುವ ಕಾರಣ ಒಂದೇ ಕ್ಷೇತ್ರಕ್ಕೆ ಎರಡು ಪ್ರಭಾವಿ ಹುದ್ದೆ ಸಿಗುತ್ತದೆಯೇ ಎಂಬ ಅನುಮಾನವೂ ಇದೆ.

ರಾಮನಗರ ಕ್ಷೇತ್ರಕ್ಕೆ ಪ್ರಾತಿನಿಧ್ಯ ನೀಡಲು ಕಾಂಗ್ರೆಸ್‌ ಹೈಕಮಾಂಡ್ ನಿರ್ಧರಿಸಿದ್ದೇ ಆದಲ್ಲಿ ಮರಳವಾಡಿ ಕ್ಷೇತ್ರದ ಸದಸ್ಯ ಎಂ.ಎನ್. ನಾಗರಾಜು ಅವರಿಗೆ ಅವಕಾಶ ಒದಗುವ ಸಾಧ್ಯತೆ ಇದೆ. ಉಪ ಚುನಾವಣೆ ದೃಷ್ಟಿಯಿಂದಲೂ ಈ ನಿರ್ಧಾರವು ಮಹತ್ವದ್ದಾಗಿದೆ.
ಮೈತ್ರಿ ಮುಂದುವರಿಯುತ್ತಾ?: ಜಿಲ್ಲಾ ಪಂಚಾಯಿತಿಯಲ್ಲಿ ಸದ್ಯ ಕಾಂಗ್ರೆಸ್ ಬಲ ಹೆಚ್ಚಿದ್ದು, ರಾಜ್ಯದ ಮಾದರಿಯಲ್ಲಿ ಇಲ್ಲಿಯೂ ಮೈತ್ರಿಯಾದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಸಾಧ್ಯತೆ ಇಲ್ಲ.

ಅಧ್ಯಕ್ಷರ ಆಯ್ಕೆಯಲ್ಲಿ ಡಿಕೆಎಸ್‌ ಸಹೋದರರ ತೀರ್ಮಾನವೇ ಅಂತಿಮವಾಗಿದ್ದು, ಮೈತ್ರಿಯಾದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಮಾತಿಗೂ ಮನ್ನಣೆ ಸಿಗಲಿದೆ.

ಕಾಂಗ್ರೆಸ್‌ಗೆ ಸಂಖ್ಯಾ ಬಲ
ಒಟ್ಟು 22 ಸದಸ್ಯ ಬಲದ ಜಿಲ್ಲಾ ಪಂಚಾಯಿತಿಯಲ್ಲಿ ಕುದೂರು ಕ್ಷೇತ್ರದ ಸದಸ್ಯ ಎ.ಮಂಜುನಾಥ್ ರಾಜೀನಾಮೆಯಿಂದಾಗಿ ಒಂದು ಸ್ಥಾನ ತೆರವಾಗಿದ್ದು, 21 ಸದಸ್ಯರಿದ್ದಾರೆ.

6 ಮಂದಿ ಜೆಡಿಎಸ್‌ನಿಂದ ಆಯ್ಕೆಯಾಗಿದ್ದಾರೆ. ಇವರಲ್ಲಿ ಕೂಟಗಲ್ ಕ್ಷೇತ್ರದ ಎಚ್‌.ಎನ್. ಅಶೋಕ್ ಹಾಗೂ ತಗ್ಗೀಕುಪ್ಪೆ ಕ್ಷೇತ್ರದ ನಾಗರತ್ನಾ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದಾರೆ. ಈ ಮೂಲಕ ಕಾಂಗ್ರೆಸ್ ಹಾಗೂ ಬೆಂಬಲಿತ ಸಂಖ್ಯೆಯು 17ಕ್ಕೆ ಏರಿದೆ. ಕಾಂಗ್ರೆಸ್‌ನಿಂದ ಸದಸ್ಯರಾಗಿ ಆಯ್ಕೆಯಾಗಿ ಅಧ್ಯಕ್ಷರೂ ಆಗಿರುವ ಸಿ.ಪಿ. ರಾಜೇಶ್ ಬಿಜೆಪಿ ಕಡೆ ವಾಲಿದ್ದು, ಅವರ ನಡೆಯು ನಿಗೂಢವಾಗಿದೆ.

ಅಶೋಕ್‌ ಉಚ್ಛಾಟನೆಗೆ ಜೆಡಿಎಸ್ ಸಿದ್ಧತೆ
ಜಿಲ್ಲಾ ಪಂಚಾಯಿತಿ ಸದಸ್ಯ ಎಚ್‌.ಎನ್‌. ಅಶೋಕ್‌ರನ್ನು ಪಕ್ಷದಿಂದ ಉಚ್ಛಾಟಿಸಲು ಜೆಡಿಎಸ್ ಸಿದ್ಧತೆ ನಡೆಸಿದ್ದು, ಬುಧವಾರ ಷೋಕಾಸ್ ನೋಟಿಸ್ ಜಾರಿ ಮಾಡಿದೆ.

ಪಕ್ಷದ ಕಾರ್ಯಾಧ್ಯಕ್ಷ ಎಂ.ಎಸ್. ನಾರಾಯಣ ರಾವ್‌ ಈ ಕುರಿತು ಅಶೋಕ್‌ಗೆ ನೋಟಿಸ್ ನೀಡಿದ್ದಾರೆ. ‘ಪಕ್ಷದ ಚಿಹ್ನೆಯಡಿ ಜಿ.ಪಂ. ಸದಸ್ಯರಾಗಿ ಆಯ್ಕೆಯಾಗಿದ್ದೀರಿ. ಆದರೆ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಂಡು, ಅನ್ಯ ಪಕ್ಷಗಳ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದೀರಿ. 5 ದಿನಗಳ ಒಳಗೆ ಉತ್ತರ ಕೊಡದೇ ಹೋದಲ್ಲಿ ನಿಮ್ಮನ್ನು ಪಕ್ಷದಿಂದ ಉಚ್ಛಾಟಿಸಲಾಗುವುದು’ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !