ಬುಧವಾರ, ನವೆಂಬರ್ 13, 2019
23 °C

ಗಿರಿರಾಜ ಕೋಳಿ ಮರಿಗಳ ವಿತರಣೆ

Published:
Updated:
Prajavani

ಚನ್ನಪಟ್ಟಣ: ಗಿರಿರಾಜ ಕೋಳಿಮರಿಗಳನ್ನು ಚೆನ್ನಾಗಿ ಸಾಕಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ವೀಣಾ ಚಂದ್ರು ಸಲಹೆ ನೀಡಿದರು.

ಪಟ್ಟಣದ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಆವರಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ತಲಾ 10 ಕೋಳಿ ಮರಿಗಳನ್ನು ವಿತರಿಸಿ ಮಾತನಾಡಿ, ಸರ್ಕಾರ ಮತ್ತು ವಿವಿಧ ಇಲಾಖೆಗಳ ಇಂತಹ ಉಪಯುಕ್ತ ಯೋಜನೆಗಳನ್ನು ಜನತೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಬೇವೂರು ಜಿಲ್ಲಾ ಪಂಚಾಯಿತಿ ಸದಸ್ಯೆ ಸುಗುಣ ತಿಮ್ಮಪ್ಪರಾಜು ಮಾತನಾಡಿ, ಒಂದೊಂದು ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ 681 ಗಿರಿರಾಜ ಕೋಳಿ ಮರಿಗಳನ್ನು ನಿಗಧಿ ಪಡಿಸಿ ವಿತರಿಸಲಾಗುತ್ತಿದೆ. ಕ್ಷೇತ್ರಗಳಲ್ಲಿ ಗಿರಿರಾಜ ಕೋಳಿಮರಿಗಳಿಗೆ ಬೇಡಿಕೆ ಹೆಚ್ಚಿದೆ. ಇನ್ನು ಹಲವಾರು ಫಲಾನುಭವಿಗಳಿದ್ದು, ಈ ಬಾರಿ ಕೈತಪ್ಪಿರುವ ಫಲಾನುಭವಿಗಳನ್ನು ಮುಂದಿನ ದಿನಗಳಲ್ಲಿ ಗುರುತಿಸಿ ಈ ಸೌಲಭ್ಯಗಳನ್ನು ದೊರಕಿಸಿ ಕೊಡಲಾಗುವುದು. ಪಲಾನುಭವಿಗಳು ಬೇಸರ ಮಾಡಿಕೊಳ್ಳದೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಚ್.ಸಿ.ಜಯರಾಮು ಮಾತನಾಡಿ, ತಾಲ್ಲೂಕಿನ 5 ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ತಲಾ 681 ರಂತೆ ಒಟ್ಟು 3406 ಗಿರಿರಾಜ ಕೋಳಿಮರಿಗಳನ್ನು ವಿತರಣೆ ಮಾಡಲಾಗುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಉಚಿತವಾಗಿ ಹಾಗೂ ಸಾಮಾನ್ಯ ವರ್ಗದವರಿಗೆ ಕೋಳಿ ಮರಿ ಒಂದಕ್ಕೆ ಶೇ 75ರ ಸಹಾಯಧನದಲ್ಲಿ ₹25 ರಂತೆ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್.ರಾಜಣ್ಣ, ತಾ.ಪಂ. ಸದಸ್ಯ ಹೊಂಗನೂರು ಸುರೇಶ್, ಯುವ ಮುಖಂಡ ಚಂದ್ರಸಾಗರ್, ಪಶು ವೈದ್ಯ ಇಲಾಖೆಯ ಸಿಬ್ಬಂದಿ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)