ಮಂಗಳವಾರ, ಅಕ್ಟೋಬರ್ 22, 2019
25 °C
ಹೆಬ್ಬಿದಿರುಮೆಟ್ಟಿಲು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಭೆ

ಸೆ.1ರಿಂದ ಪ್ರತಿ ಲೀಟರ್‌ ಹಾಲಿಗೆ ₹ 1 ಹೆಚ್ಚಳ: ಬಮೂಲ್‌ ನಿರ್ದೇಶಕ

Published:
Updated:
Prajavani

ಹಾರೋಹಳ್ಳಿ (ಕನಕಪುರ): ‘ಹೈನುಗಾರಿಕೆಯಿಂದ ರೈತರಿಗೆ ಅನುಕೂಲವಾಗುವಂತೆ‍ ಪ್ರತಿ ಲೀಟರ್‌ ಹಾಲಿಗೆ ಒಂದು ರೂಪಾಯಿ ಹೆಚ್ಚಿಸಲಾಗಿದ್ದು, ಸೆ.1ರಿಂದಲೇ ಜಾರಿಗೆ ಬರಲಿದೆ’ ಎಂದು ಬಮೂಲ್‌ ನಿರ್ದೇಶಕ ಹೊನ್ನಾಲಗನದೊಡ್ಡಿ ಹರೀಶ್‌ಗೌಡ ಹೇಳಿದರು.

ಇಲ್ಲಿನ ಹಾರೋಹಳ್ಳಿ ಹೋಬಳಿ ಹೆಬ್ಬಿದಿರುಮೆಟ್ಟಿಲು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು.

‘ಪ್ರಸ್ತುತ ಪ್ರತಿ ಲೀಟರ್ ಹಾಲಿಗೆ ₹ 25 ನೀಡಲಾಗುತ್ತಿದೆ. ಈಗ ಒಂದು ರೂಪಾಯಿ ಹೆಚ್ಚುವರಿಯಾಗಿ ನೀಡುತ್ತಿದ್ದು, ರೈತರನ್ನು ಆರ್ಥಿಕವಾಗಿ ಪುನಶ್ಚೇತನಗೊಳಿಸಲು ಒಕ್ಕೂಟ ಎಲ್ಲ ರೀತಿಯ ಪ್ರೋತ್ಸಾಹ ನೀಡುತ್ತದೆ’ ಎಂದರು.

‘ಡೇರಿಗೆ ಕನಿಷ್ಠ 60 ದಿನ ಹಾಲು ಸರಬರಾಜು ಮಾಡಿರುವವರು ಅಕಾಲಿಕವಾಗಿ ಮರಣ ಹೊಂದಿದರೆ ಒಕ್ಕೂಟದಿಂದ ಒಂದು ಲಕ್ಷ ರೂಪಾಯಿ ನೀಡಲಾಗುವುದು. ಹಾಲು ಉತ್ಪಾದಕರ ಪ್ರತಿಭಾವಂತ, ಉತ್ತಮ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು’ ಎಂದು ತಿಳಿಸಿದರು.

‘ಡೇರಿಯಲ್ಲಿ ಕೆಲಸ ಮಾಡುತ್ತಿರುವ ನೌಕರರ ನಿವೃತ್ತಿ ಸಮಯದಲ್ಲಿ ₹ 1ರಿಂದ ₹ 2 ಲಕ್ಷದವರೆಗೆ ಪ್ರೋತ್ಸಾಹಧನ ನೀಡಲಾಗುತ್ತದೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಮನವಿ ಮಾಡಿದರು.

ಹಾಲು ಉತ್ಪಾದಕರ ಸಹಕಾರ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಇ ಪ್ರಕಾಶ್ ಮಾತನಾಡಿ, ‘ಡೇರಿಗೆ ₹13,09,914 ವ್ಯಾಪಾರದ ಲಾಭ ಬಂದಿದ್ದು ಪ್ರತಿ ದಿನ 1,500 ಲೀಟರ್ ಹಾಲು ಉತ್ಪಾದನೆಯಾಗುತ್ತದೆ. ನಿವ್ವಳ ಲಾಭವಾಗಿ ₹ 6,37,831 ಬಂದಿದ್ದು ಹಾಲು ಉತ್ಪಾದಕರಿಗೆ ಬೋನಸ್ ರೂಪದಲ್ಲಿ ₹ 3,03,885 ನೀಡಲಾಗಿದೆ. ಮೊದಲ ಬಾರಿಗೆ ಡೇರಿ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿದ್ದು, ಮುಂದೆಯೂ ಇದನ್ನು ಮುಂದುವರಿಸಿಕೊಂಡು ಹೋಗಲಾಗುವುದು’ ಎಂದು ತಿಳಿಸಿದರು.

ಡೇರಿ ಅಧ್ಯಕ್ಷ ಮಾದೇಗೌಡ, ಉಪಾಧ್ಯಕ್ಷ ಶ್ರೀನಿವಾಸ್, ನಿರ್ದೇಶಕರಾದ ಎಚ್.ಕೆ ನಾರಾಯಣಪ್ಪ, ಚಿಕ್ಕಮರೀಗೌಡ, ಕೃಷ್ಣಪ್ಪ, ಈರೇಗೌಡ, ಮಹದೇವ, ರತ್ನಮ್ಮ, ನಾಗಮ್ಮ, ಕೃಷ್ಣಪ್ಪ, ಹಾಲು ಪರೀಕ್ಷಕ ರಾಮಕೃಷ್ಣ, ಸಹಾಯಕ ಶಿವಕುಮಾರ್, ಶುಚಿಗಾರ ಕರಿಯಪ್ಪ, ಮುಖಂಡರಾದ ಚನ್ನೇಗೌಡ, ರಾಜು, ಪುಟ್ಟಸ್ವಾಮಿ ಇದ್ದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)