ಗುರುವಾರ , ನವೆಂಬರ್ 14, 2019
18 °C

ಕನಕಪುರ: ಬಿಜೆಪಿ, ಜೆಡಿಎಸ್‌ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ!

Published:
Updated:

ಕನಕಪುರ: ನಗರಸಭೆ ಚುನಾವಣೆಗೆ ಸ್ಪರ್ಧಿಸಿದ್ದ 95 ಅಭ್ಯರ್ಥಿಗಳಲ್ಲಿ ಇಬ್ಬರು ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡಿದ್ದು 93 ಮಂದಿಯ ನಾಮಪತ್ರಗಳು ಅಧಿಕೃತವಾಗಿವೆ ಎಂದು ಚುನಾವಣೆ ಶಾಖೆಯ ಶಿರಸ್ತೇದಾರ‍ ಕೆ.ವಿ.ಸುನಿಲ್‌ಕುಮಾರ್‌ ಹೇಳಿದರು.

ನೀಲಕಂಠೇಶ್ವರ 27ನೇ ವಾರ್ಡಿನ ಬಿಜೆಪಿ ಅಭ್ಯರ್ಥಿ ಕೃಷ್ಣಶೆಟ್ಟಿ ನೀಡಿದ್ದ ಬಿ ಫಾರಂನಲ್ಲಿ ವಾರ್ಡ್‌ ಮತ್ತು ಹೆಸರು ತಪ್ಪಾಗಿದ್ದರಿಂದ ಅವರ ನಾಮಪತ್ರ ತಿರಸ್ಕೃತಗೊಂಡಿದೆ. ಈ ವಾರ್ಡಿನಲ್ಲಿ ಕಾಂಗ್ರೆಸ್‌ ನ ಎನ್‌.ಮೋಹನ್‌ ಮತ್ತು ಕೃಷ್ಣಶೆಟ್ಟಿ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಕೃಷ್ಣಶೆಟ್ಟಿ ನಾಮಪತ್ರ ತಿರಸ್ಕೃತಗೊಂಡ ಕಾರಣ ಎನ್‌.ಮೋಹನ್‌ ಅವಿರೋಧವಾಗಿ ಆಯ್ಕೆಯಾದಂತಾಗಿದೆ.

ಕೋಟೆ-1ರ 3 ನೇ ವಾರ್ಡ್‌ನಲ್ಲಿ ಜೆಡಿಎಸ್‌ ನಿಂದ ಸ್ಪರ್ಧಿಸಿದ್ದ ಕೆ.ವಿ.ಆನಂದ ಅವರು ತಮ್ಮ ನಾಮಪತ್ರದ ಜತೆ ಪಕ್ಷದಿಂದ ಬಿ.ಫಾರಂ ಕೊಡದ ಕಾರಣ ಅವರ ನಾಮಪತ್ರ ತಿರಸ್ಕೃತಗೊಂಡಿದೆ.

ಸೋಮವಾರ ಬೆಳಿಗ್ಗೆ 11 ಗಂಟೆಗೆ ಇಲ್ಲಿನ ಎಕ್ಸ್‌ ಮುನಿಸಿಪಲ್‌ ಸರ್ಕಾರಿ ಶಾಲೆಯಲ್ಲಿ ಪಿಆರ್‌ಒ ಮತ್ತು ಎಪಿಆರ್‌ಒ ಗಳಿಗೆ ತರಬೇತಿ ಕಾರ್ಯಗಾರ ನಡೆಯಲಿದೆ.

ಚುನಾವಣೆಯಲ್ಲಿ ಬಳಕೆ ಮಾಡುವ ಇವಿಎಂ ಮತಯಂತ್ರಗಳನ್ನು ರಾಮನಗರದಿಂದ ತಂದಿದ್ದು ಪೊಲೀಸ್‌ ಬಂದೋಬಸ್ತ್‌ನಲ್ಲಿ ಎಕ್ಸ್‌ ಮುನಿಸಿಪಲ್‌ ಶಾಲೆಯ ಭದ್ರತಾ ಕೊಠಡಿಯಲ್ಲಿ ಇಡಲಾಗಿದೆ.

ಪ್ರತಿಕ್ರಿಯಿಸಿ (+)