ಶುಕ್ರವಾರ, ನವೆಂಬರ್ 15, 2019
20 °C

ನೆರೆಸಂತ್ರಸ್ತರಿಗಾಗಿ 20 ಟನ್‌ ಅಕ್ಕಿ ಸಂಗ್ರಹ

Published:
Updated:
Prajavani

ಕನಕಪುರ: ಉತ್ತರ ಕರ್ನಾಟಕದಲ್ಲಿನ ನೆರೆ ಸಂತ್ರಸ್ತರಿಗಾಗಿ ಅಚ್ಚಲು ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 20 ಟನ್‌ ಅಕ್ಕಿಯನ್ನು ಸಂಗ್ರಹಿಸಿದ್ದು ಅದನ್ನು ಸುರಕ್ಷಿತವಾಗಿ ನೆರೆ ಸಂತ್ರಸ್ತರಿಗೆ ಶನಿವಾರ ತಲುಪಿಸಲಾಗುವುದು ಎಂದು ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಸುಮಂಗಳ ಸುರೇಶ್‌ ಹೇಳಿದರು.

ತಾಲ್ಲೂಕಿನ ಸಾತನೂರು ಹೋಬಳಿ ಅಚ್ಚಲು ಗ್ರಾಮದಲ್ಲಿ ನೆರೆ ಸಂತ್ರಸ್ತರಿಗೆ ಸಂಗ್ರಹಿಸಿದ್ದ ಅಕ್ಕಿಯ ಚೀಲಗಳನ್ನು ಕಳುಹಿಸಿ ಕೊಡಲು ಲಾರಿಗೆ ತುಂಬಿಸುವ ವೇಳೆ ಅವರು ಮಾತನಾಡಿದರು.

ಪಂಚಾಯಿತಿ ವ್ಯಾಪ್ತಿಯ ತೋಟಳ್ಳಿ, ಅಚ್ಚಲು, ಜಕ್ಕೇಗೌಡನದೊಡ್ಡಿ, ಮದುವೆ ತೆಕ್ಕಲುದೊಡ್ಡಿ, ವಡ್ಲೇಗೌಡನದೊಡ್ಡಿ, ಗೊಲ್ಲರದೊಡ್ಡಿ, ಬೊಮ್ಮನಹಳ್ಳಿ, ಮಾರಣ್ಣನದೊಡ್ಡಿಯಲ್ಲಿ ಜನತೆ ಸ್ವಯಂಪ್ರೇರಣೆಯಿಂದ ಅಕ್ಕಿ ಕೊಟ್ಟಿದ್ದು ಅದನ್ನು ಸಂಗ್ರಹ ಮಾಡಿರುವುದಾಗಿ ತಿಳಿಸಿದರು.

ಕಾಂಗ್ರೆಸ್‌ ಮುಖಂಡ ಕೆಂಗೇಗೌಡ ಮಾತನಾಡಿ, ‘ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಅವರ ನೇತೃತ್ವದಲ್ಲಿ ಅಕ್ಕಿ ಸಂಗ್ರಹ ಕಾರ್ಯ ಮಾಡಿದ್ದೇವೆ. ಸಾರ್ವಜನಿಕರಿಂದ ಸಂಗ್ರಹವಾದ ಅಕ್ಕಿಯನ್ನು 25 ಕೆ.ಜಿ. ಯ ಚೀಲದಲ್ಲಿ ತುಂಬಿ ಸಂಸ್ಕರಿಸಲಾಗಿತ್ತು. ಇಂದು ಅದನ್ನು ಲಾರಿಯಲ್ಲಿ ತುಂಬಿಕೊಂಡು ನೆರೆಹಾವಳಿಗೆ ಸಿಲುಕಿದ ಗ್ರಾಮಗಳಿಗೆ ಹೋಗಿ ಸಂತ್ರಸ್ತರಿಗೆ ನೇರವಾಗಿ ಕೊಡುತ್ತೇವೆ’ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಗೌರಮ್ಮ ಪುಟ್ಟಮಾದಯ್ಯ, ಹಿಂದಿನ ಅಧ್ಯಕ್ಷ ನಟೇಶ್‌, ದೊಡ್ಡಮನೆ ಕಾಳೇಗೌಡ, ಜವರೇಗೌಡ, ಸತೀಶ್‌, ಶಿವಣ್ಣ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)