ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

35 ಬಸ್‌ ಸಂಚಾರ ಆರಂಭ: ಬಸ್‌ ಮೇಲೆ ಕಲ್ಲು ತೂರಿದ ಆರೋಪಿ ಸೆರೆ

Last Updated 18 ಏಪ್ರಿಲ್ 2021, 3:45 IST
ಅಕ್ಷರ ಗಾತ್ರ

ಕನಕಪುರ: ವಿವಿಧ ಬೇಡಿಕೆ ಈಡೇರಿಕೆಗೆ ಸಾರಿಗೆ ನೌಕರರು ಪಟ್ಟು ಸಡಿಲಿಸದೆ ಪ್ರತಿಭಟನೆ ನಡೆಸುತ್ತಿರುವ ನಡುವೆಯೇ ಶನಿವಾರ ಕನಕಪುರ ಡಿಪೊದಿಂದ 30ಕ್ಕೂ ಹೆಚ್ಚು ಸಾರಿಗೆ ಬಸ್‌ಗಳು ರಸ್ತೆಗಿಳಿದಿದ್ದು, ಪ್ರಯಾಣಿಕರನ್ನು ಕರೆದೊಯ್ದವು.

ಪ್ರತಿಭಟನೆ ನಡೆಸುತ್ತಿರುವ ನೌಕರರಲ್ಲಿ ಕೆಲವು ಚಾಲಕ ಮತ್ತು ನಿರ್ವಾಹಕರು ಶನಿವಾರ ಬೆಳಿಗ್ಗೆ ಕರ್ತವ್ಯಕ್ಕೆ ಹಾಜರಾಗಿದ್ದರಿಂದ ಕನಕಪುರ ಡಿಪೊದಲ್ಲಿ ಘಟಕ ವ್ಯವಸ್ಥಾಪಕರು 35 ಬಸ್‌ಗಳ ಮಾರ್ಗ ಕಾರ್ಯಾಚರಣೆ ಆರಂಭಿಸಿದರು.

ಕೋಡಿಹಳ್ಳಿ, ಸಾತನೂರು, ಬೆಂಗಳೂರು, ರಾಮನಗರ, ಮರಳವಾಡಿ ಸೇರಿದಂತೆ ಹಳ್ಳಿಗಳಿಗೂ ಬಸ್‌ ಸಂಚಾರ ನಡೆಸಿದವು. ನೌಕರರು ಪ್ರತಿಭಟನೆ ನಡೆಸಿದ ಪರಿಣಾಮ ಬಸ್‌ಗಳು ಇಲ್ಲವೆಂದು ಪ್ರಯಾಣಿಕರು ತಿಳಿದಿದ್ದರಿಂದ ಶನಿವಾರ ಬೆಳಿಗ್ಗೆ ಬಸ್‌ಗಳು ಸಂಚಾರ ನಡೆಸಿದರೂ ಕಡಿಮೆ ಸಂಖ್ಯೆಯಲ್ಲಿದ್ದರು. ಮಧ್ಯಾಹ್ನದ ವೇಳೆಗೆ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿ ಬಸ್ಸಿನ ತುಂಬಾ ಪ್ರಯಾಣಿಸುತ್ತಿದ್ದು ಕಂಡುಬಂದಿತು.

ಬಸ್ಸಿಗೆ ಕಲ್ಲು: ಶನಿವಾರ ಬೆಳಿಗ್ಗೆ ರಾಮನಗರ ರಸ್ತೆಯಲ್ಲಿ ಹೋಗುತ್ತಿದ್ದ ಕನಕಪುರ ಡಿಪೊದ ಬಸ್ಸಿಗೆ ಅಳ್ಳಿಮಾರನಹಳ್ಳಿ ಸಮೀಪ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ.

ಬಸ್ಸಿನ ಕಿಟಿಕಿ ಗಾಜು ಒಡೆದಿದ್ದು ಯಾರಿಗೂ ತೊಂದರೆಯಾಗಿಲ್ಲ. ಈ ಸಂಬಂಧ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು
ದಾಖಲಾಗಿದೆ.

ಆರೋಪಿ ಬಂಧನ‌: ತಾಲ್ಲೂಕಿನ ಚುಂಚಿ ಕಾಲೊನಿಗೆ ಹೋಗುತ್ತಿದ್ದ ಸಾರಿಗೆ ಬಸ್‌ಗೆ ಇಬ್ಬರು ಆರೋಪಿಗಳು ಕಲ್ಲು ತೂರಿದ್ದು ಒಬ್ಬ ಆರೋಪಿ ಶಿವು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ಕಾಂತರಾಜು ಪರಾರಿಯಾಗಿದ್ದಾನೆ.

ಶನಿವಾರ ಮಧ್ಯಾಹ್ನದ ವೇಳೆಗೆ ಕನಕಪುರ ಡಿಪೊದಿಂದ ಉಯ್ಯಂಬಳ್ಳಿ ಹೋಬಳಿ ಚುಂಚಿ ಕಾಲೊನಿಗೆ ಹೋಗುತ್ತಿದ್ದ ಬಸ್‌ಗೆ ಏಳಗಳ್ಳಿ ಸರ್ಕಲ್‌ನಲ್ಲಿ ದೊಡ್ಡಾಲಹಳ್ಳಿ ಗ್ರಾಮದ ಶಿವು ಮತ್ತು ಕಾಂತರಾಜು ಬೈಕ್‌ನಲ್ಲಿ ಬಂದು ಕಲ್ಲು ತೂರಿದ್ದಾರೆ.

ಈ ವೇಳೆ ಬಸ್ಸಿನ ಕಿಟಕಿ ಗಾಜು ಒಡೆದಿದ್ದು ಯಾರಿಗೂ ತೊಂದರೆ ಆಗಿಲ್ಲ. ಈ ಸಂಬಂಧ ಸಾತನೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತ ಆರೋಪಿ ಶಿವು ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ಕುಕ್ಕರ್‌ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಮತ್ತೊಬ್ಬ ಆರೋಪಿ ಕಾಂತರಾಜು ರೇಷ್ಮೆ ಕೃಷಿಕನಾಗಿದ್ದು ದೊಡ್ಡಾಲಹಳ್ಳಿ ಗ್ರಾಮದವನಾಗಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT