ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗಡಿ: ನಿಯಮ ಉಲ್ಲಂಘಿಸಿದ 60 ವಾಹನ ವಶ

Last Updated 2 ಮೇ 2021, 5:08 IST
ಅಕ್ಷರ ಗಾತ್ರ

ಮಾಗಡಿ: ‘ಲಾಕ್‌ಡೌನ್‌ ಉಲ್ಲಂಘಿಸಿ ರಸ್ತೆಗಿಳಿದಿದ್ದ 60 ವಾಹನಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದೇವೆ’ ಎಂದು ಪಿಎಸ್‌ಐ ಶ್ರೀಕಾಂತ್‌ ತಿಳಿಸಿದರು.

ಪಟ್ಟಣದ ಸೋಮೇಶ್ವರ ಬಡಾವಣೆಯ ಅಂಬೇಡ್ಕರ್‌ ಸರ್ಕಲ್‌ನಲ್ಲಿ ಲಾಕ್‌ಡೌನ್‌ ಉಲ್ಲಂಘಿಸಿ ರಸ್ತೆಗಿಳಿದಿದ್ದ ವಾಹನಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುವುದಾಗಿ ಅವರು ತಿಳಿಸಿದರು.

ಪಟ್ಟಣ ಮತ್ತು ತಾಲ್ಲೂಕಿನಲ್ಲಿ ದಿನೇ ದಿನೇ ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದೆ. ನಿಷೇಧಾಜ್ಞೆ ಜಾರಿಯಲ್ಲಿದೆ. ಆದರೂ, ವಾಹನ ಸವಾರರು ರಸ್ತೆಗಿಳಿಯುವುದು ಸರಿಯಲ್ಲ. ಬೆಳಿಗ್ಗೆ 10 ಗಂಟೆ ನಂತರ ಅಂಗಡಿಮುಗ್ಗಟ್ಟುಗಳನ್ನು ಮುಚ್ಚಬೇಕು ಎಂದರು.

ಅಂಗಡಿ ವಿರುದ್ಧ ಪ್ರಕರಣ: ಪಟ್ಟಣದಲ್ಲಿ ಶನಿವಾರ ಬೆಳಿಗ್ಗೆ 11 ಗಂಟೆ ತನಕ ಬೀದಿಬದಿ ವ್ಯಾಪಾರಿಗಳಲ್ಲಿ ಕೆಲವರು ಮತ್ತು ಆರ್‌.ಆರ್‌. ರಸ್ತೆಯಲ್ಲಿ ಕೆಲವು ದಿನಸಿ ಅಂಗಡಿಗಳವರು ಬಾಗಿಲು ಮುಚ್ಚದೆ ವ್ಯಾಪಾರ ಮುಂದುವರಿಸಿದ್ದರು. ಪೊಲೀಸ್‌ ಸಿಬ್ಬಂದಿ ವ್ಯಾಪಾರಿಗಳಿಗೆ ಬಿಸಿ ಮುಟ್ಟಿಸಿ ಅಂಗಡಿ ಬಂದ್‌ ಮಾಡಿಸಿದರು. ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿ ವ್ಯವಹಾರ ನಡೆಸುತ್ತಿದ್ದ ಬೇಕರಿ, ಹೋಟೆಲ್‌, ದಿನಸಿ ಅಂಗಡಿಗಳ ಮಾಲೀಕರ ಮೇಲೆ 9 ದೂರು ದಾಖಲಿಸಿದರು.

ಪಟ್ಟಣದಲ್ಲಿ ಕೋವಿಡ್‌ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಸರ್ಕಾರದ ನಿಯಮದಂತೆ ಅಧಿಕಾರಿಗಳೆಲ್ಲರೂ ಕೊರೊನಾ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿದ್ದೇವೆ. ಲಾಕ್‌ಡೌನ್‌ ಉಲ್ಲಂಘಿಸಿ ವಾಹನ ಚಲಾಯಿಸಿ ರಸ್ತೆಗಿಳಿಯುವ ಸಾಹಸ ಮಾಡಬೇಡಿ. ಬೀದಿಬದಿ ವ್ಯಾಪಾರಿಗಳು, ದಿನಸಿ ಅಂಗಡಿ, ಬೇಕರಿ, ಹೋಟೆಲ್‌ ಇತರೆ ಅಂಗಡಿಮುಗ್ಗಟ್ಟುಗಳನ್ನು ಕಡ್ಡಾಯವಾಗಿ ಬೆಳಿಗ್ಗೆ 10 ಗಂಟೆಗೆ ಮುಚ್ಚಬೇಕು. ಇಲ್ಲವಾದರೆ ಕೋವಿಡ್‌ ನಿಯಮ ಉಲ್ಲಂಘನೆ ಮತ್ತು ಸಾಂಕ್ರಾಮಿಕ ರೋಗ ತಡೆ ಪ್ರತಿಬಂಧಕಾಜ್ಞೆ ಉಲ್ಲಂಘನೆಯ ಪ್ರಕರಣ ದಾಖಲಿಸುತ್ತೇವೆ ಎಂದು ಪೊಲೀಸರು ಎಚ್ಚರಿಸಿದರು.

ಕನಿಷ್ಠ ₹ 50 ಸಾವಿರ ದಂಡ ಕಟ್ಟಬೇಕಾಗುತ್ತದೆ. ವರ್ತಕರು ಮತ್ತು ಬೀದಿಬದಿ ವ್ಯಾಪಾರಿಗಳು ಕೋವಿಡ್‌ ನಿಯಮ ಉಲ್ಲಂಘಿಸಬಾರದು. ಸೋಂಕು ನಿಯಂತ್ರಣಕ್ಕೆ ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕು ಎಂದು ಕೋರಿದರು.

ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಡಿವೈಎಸ್‌ಪಿ ಓಂಪ್ರಕಾಶ್‌, ಸರ್ಕಲ್‌ ಇನ್‌ಸ್ಪೆಕ್ಟರ್ ಎ.ಬಿ. ಕುಮಾರ್‌ ಮತ್ತು ತಹಶೀಲ್ದಾರ್‌ ಬಿ.ಜಿ. ಶ್ರೀನಿವಾಸ ಪ್ರಸಾದ್‌ ಸೂಚನೆ ನೀಡಿದ್ದಾರೆ. ಸೋಂಕಿಗೆ ಸಿಲುಕಿ ಕಷ್ಟಪಡುವ ಮುನ್ನ ಎಚ್ಚರಿಕೆಯಿಂದಿರುವುದು ಸೂಕ್ತ. ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಅನಿವಾರ್ಯವಾಗಿದೆ ಎಂದು ತಿಳಿಸಿದರು.

ಎಎಸ್‌ಐಗಳಾದ ಮಲ್ಲೇಶಯ್ಯ, ದೇವರಾಜು, ಕಾನ್‌ಸ್ಟೆಬಲ್‌ಗಳಾದ ಬೀರಪ್ಪ, ಕಾಂತರಾಜು, ಮಹಮದ್‌ ರಫಿ, ಚಂದ್ರೇಗೌಡ, ಮಂಜುನಾಥ, ಗೃಹರಕ್ಷಕ ಸಿಬ್ಬಂದಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT