ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಳು ತಲೆ ಸರ್ಪದ ಪೊರೆ ಸುತ್ತ ಅನುಮಾನದ ಹುತ್ತ! ಇದು ಬರೀ ಗಿಮಿಕ್‌: ಉರಗ ತಜ್ಞರು

ಇಂಥಹ ಹಾವು ಕಂಡಿದ್ದು ನಿಜವೇ?
Last Updated 14 ಅಕ್ಟೋಬರ್ 2019, 4:33 IST
ಅಕ್ಷರ ಗಾತ್ರ

ರಾಮನಗರ: ಕನಕಪುರ ತಾಲ್ಲೂಕಿನ ಮರಿಗೌಡನದೊಡ್ಡಿ ಗ್ರಾಮದ ಹೊಲವೊಂದರಲ್ಲಿ ಸಿಕ್ಕಿರುವ ಹಾವಿನ ಪೊರೆ ಸದ್ಯ ಚರ್ಚೆಯ ಕೇಂದ್ರವಾಗಿದೆ. ಗ್ರಾಮಸ್ಥರು ಪೂಜೆ–ಪುನಸ್ಕಾರಗಳ ಮೂಲಕ ಭಕ್ತಿ ಮೆರೆದಿದ್ದಾರೆ. ಆದರೆ ಇದೆಲ್ಲ ಗಿಮಿಕ್‌ ಎನ್ನುವುದು ಉರಗ ತಜ್ಞರ ಅಭಿಪ್ರಾಯ.

ಗ್ರಾಮದ ಮರಿಕೆಂಪೇಗೌಡ ಎಂಬುವರ ಜಮೀನಿನಲ್ಲಿ ಕೆಲವು ದಿನಗಳ ಹಿಂದೆ ನಾಗರಹಾವಿನ ಪೊರೆಯೊಂದು ಪತ್ತೆಯಾಗಿತ್ತು. ಇದು ಹಾವಿಗೆ ಏಳು ತಲೆಗಳು ಇರುವ ರೀತಿಯಲ್ಲಿದ್ದು, ಪುರಾಣಗಳಲ್ಲಿ ಬರುವ ಏಳು ತಲೆಗಳ ಸರ್ಪದ ಹಾಗೆಯೇ ಇದೆ ಎಂಬ ಕಾರಣಕ್ಕೆ ಭಕ್ತರ ಆಕರ್ಷಣೆಯ ಕೇಂದ್ರವಾಗಿ ಮಾರ್ಪಟ್ಟಿತ್ತು.

ಆರು ತಿಂಗಳ ಹಿಂದಷ್ಟೇ ಇದೇ ಜಾಗದಲ್ಲಿ ಇದೇ ಮಾದರಿಯ ಪೊರೆ ಪತ್ತೆಯಾಗಿತ್ತು. ಅದಕ್ಕೂ ಏಳು ಹೆಡೆಗಳ ಚಿತ್ರಣವಿತ್ತು. ಅದೇ ಕಾರಣಕ್ಕೆ ಗ್ರಾಮಸ್ಥರು ಅದನ್ನು ಪೂಜಿಸಿ ಗಾಜಿನ ಪೆಟ್ಟಿಗೆಯಲ್ಲಿ ಇಟ್ಟು ಸಂರಕ್ಷಿಸಿದ್ದಾರೆ. ಅದೇ ಜಮೀನಿನಲ್ಲಿ ಈಗಾಗಲೇ ನಾಗ ಪ್ರತಿಷ್ಠಾಪನೆಯಾಗಿದ್ದು, ಮುಂದೆ ಗುಡಿ ಕಟ್ಟುವ ಗುರಿ ಇರುವುದಾಗಿ ಜಮೀನಿನ ಮಾಲೀಕರು ಹೇಳುತ್ತಾರೆ.

ಏನನ್ನುತ್ತಾರೆ ಉರಗ ತಜ್ಞರು

ಏಳು ತಲೆಯ ಹಾವಿನ ಬಗ್ಗೆ ಪುರಾಣಗಳ ಕಥೆಗಳಲ್ಲಿ ಉಲ್ಲೇಖವಿದೆ. ಆದರೆ ಈ ಕಲಿಯುಗದಲ್ಲಿ ಅದನ್ನು ಕಣ್ಣಾರೆ ಕಂಡವರು ಅಪರೂಪ.

ಏಳು ತಲೆ ಹಾವಿನ ಪೊರೆಯ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಲೇ ಮಾಧ್ಯಮ ತಂಡದೊಂದಿಗೆ ಬೆಂಗಳೂರು ಮಹಾನಗರ ಪಾಲಿಕೆಯ ವನ್ಯಜೀವಿ‌ ಸಂರಕ್ಷಕರಾದ ಕೆ.‌ ಮೋಹನ್, ಜಯರಾಜ್ ಹಾಗೂ ಪ್ರಸನ್ನಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪೊರೆಯನ್ನು ತಪಾಸಣೆಗೆ ಒಳಪಡಿಸಿದರು. ಈ ಸಂದರ್ಭ ತಜ್ಞರು ಕಂಡುಕೊಂಡಿರುವ ಅಂಶವೇ ಬೇರೆ.

‘ಇಲ್ಲಿ ಸಿಕ್ಕಿರುವ ಪೊರೆ ಸಂಪೂರ್ಣ ಒಂದೇ ಹಾವಿನದ್ದಲ್ಲ. ನಾಗರಹಾವು ಮತ್ತು ಕೇರೆ ಹಾವುಗಳ ಪೊರೆಗಳನ್ನು ಜೋಡಿಸಿ ಇದನ್ನು ಸೃಜಿಸಲಾಗಿದೆ. ದೇಹ ಕೇರೆ ಹಾವಿನದ್ದಾಗಿದ್ದರೆ ಹೆಡೆಗಳು ಮಾತ್ರ ನಾಗರದ್ದಾಗಿವೆ. ಬೇರೆ ಬೇರೆ ಹೆಡೆಗಳನ್ನು ಸೇರಿಸಿ ಏಳು ಹೆಡೆಗಳು ಇರುವ ಹಾಗೇ ಅಂಟಿಸಲಾಗಿದೆ’ ಎನ್ನುತ್ತಾರೆ ಮೋಹನ್ ಹಾಗೂ ಜಯರಾಜ್.

‘ಏಳು ತಲೆಯ ಹಾವಿರಲಿ. ಎರಡು ತಲೆಯ ಹಾವನ್ನು ನಾವು ಕಾಣುವುದೇ ಅಪರೂಪ. ಸಯಾಮಿ ಹಾವುಗಳು ಹುಟ್ಟಿದಲ್ಲಿ ಮಾತ್ರ ಅದನ್ನು ಕಾಣಬಹುದು. ಇನ್ನೂ ಏಳು ತಲೆ ಸರ್ಪದ ಬಗ್ಗೆ ಮಾತನಾಡುವುದೂ ಬೇಡ. ಅಂತಹ ಹಾವುಗಳು ಇರುವ ಸಾಧ್ಯತೆಯೂ ಇಲ್ಲ. ಒಂದು ವೇಳೆ ಏಳು ತಲೆಗಳ ಹಾವು ಹುಟ್ಟಿದರೂ ಅದು ಬದುಕುವುದಿಲ್ಲ’ ಎನ್ನುತ್ತಾರೆ ಪ್ರಸನ್ನಕುಮಾರ್.

ದೇವಾಲಯ ಕಟ್ಟುವ ಪ್ರಯತ್ನ

ಸದ್ಯ ಎರಡು ಪೊರೆಗಳು ಸಿಕ್ಕಿರುವ ಕಡೆ ಈಗಾಗಲೇ ನಾಗ ಪ್ರತಿಷ್ಠಾಪನೆಯಾಗಿದೆ. ಇದೇ ಜಾಗದಲ್ಲಿ ದೇವಾಲಯ ನಿರ್ಮಾಣಕ್ಕೂ ಪ್ರಯತ್ನ ನಡೆದಿದೆ. ಇದೇ ಕಾರಣಕ್ಕೆ ಹಾವಿನ ಪೊರೆಯ ಸುದ್ದಿ ತೇಲಿ ಬಿಡಲಾಗುತ್ತಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ.

ಈ ಜಮೀನು ಹಾಗೂ ಸುತ್ತಮುತ್ತಲಿನ ಕೆಲವು ಪ್ರದೇಶ ಅರಣ್ಯ ಇಲಾಖೆಗೆ ಸೇರಿದ್ದು, ಅದನ್ನು ಮರೆಮಾಚಲು ದೇಗುಲ ಕಟ್ಟಲಾಗುತ್ತಿದೆ ಎಂದು ಸ್ಥಳೀಯರೊಬ್ಬರು ಹೇಳುತ್ತಾರೆ. ಆದರೆ ಜಮೀನಿನ ಮಾಲೀಕ ಮರಿಕೆಂಪೇಗೌಡ ಹಾಗೂ ಗ್ರಾಮಸ್ಥರು ಈ ಆರೋಪವನ್ನು ನಿರಾಕರಿಸಿದ್ದು ‘ಈ ಜಮೀನು ನಮ್ಮದೇ. ಏಳು ಹೆಡೆಯ ನಾಗರ ಇರುವುದಕ್ಕೇ ದೇಗುಲ ಕಟ್ಟುತ್ತಿದ್ದೇವೆ ಹೊರತು ಮತ್ಯಾವುದಕ್ಕೂ ಅಲ್ಲ’ ಎಂದು ಸಮಜಾಯಿಷಿ ನೀಡುತ್ತಾರೆ.

* ಇಲ್ಲಿ ಏಳು ತಲೆ ಸರ್ಪ ಓಡಾಡಿದ್ದನ್ನು ನಾನೇ ಒಮ್ಮೆ ನೋಡಿದ್ದೇನೆ. ಈಗ ಸಿಕ್ಕಿರುವುದು ಖಂಡಿತ ಅದರದ್ದೇ ಪೊರೆ

ಮರಿಕೆಂಪೇಗೌಡ, ಪೊರೆ ಸಿಕ್ಕಿದ ಜಮೀನಿನ ಮಾಲೀಕ

* ನಾಗರ ಹಾಗೂ ಕೇರೆ ಹಾವಿನ ಪೊರೆಗಳನ್ನು ಅಂಟಿಸಿ ಇದನ್ನು ಸೃಜಿಸಲಾಗಿದೆ. ಇದು ಖಂಡಿತ ಒಂದೇ ಹಾವಿನ ಪೊರೆಯಲ್ಲ

ಮೋಹನ್, ಜಯರಾಜ್ವನ್ಯಜೀವಿ ಸಂರಕ್ಷಕರು, ಬಿಬಿಎಂಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT