ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕೆ ₹70ಕೋಟಿ

ಅಧಿಕಾರಿಗಳೊಂದಿಗೆ ಸಚಿವ ಅಶ್ವತ್ಥನಾರಾಯಣ ಸಭೆ; ತರಾತುರಿಯಲ್ಲಿ ವಾಪಸ್
Last Updated 12 ಮೇ 2020, 9:56 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತವಾದ ರೇಷ್ಮೆಗೂಡು ಮಾರುಕಟ್ಟೆ ನಿರ್ಮಾಣಕ್ಕೆ ಸರ್ಕಾರ ₹70 ಕೋಟಿ ಅನುದಾನ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ್‌ ನಾರಾಯಣ ತಿಳಿಸಿದರು.

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸೋಮವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು ‘ಏಷ್ಯಾದ ಅತಿ ದೊಡ್ಡ ರೇಷ್ಮೆ ಮಾರುಕಟ್ಟೆ ವಿಸ್ತರಣೆ ಮಾಡಿ ಹೈಟೆಕ್ ಮಾರುಕಟ್ಟೆಯಾಗಿ ರೂಪಿಸಲಾಗುವುದು. ಎರಡು ಎಕರೆಯಲ್ಲಿರುವ ಮಾರುಕಟ್ಟೆ ವಿಸ್ತರಣೆ ಆಗಿ, ಪಾರದರ್ಶಕ ಆಡಳಿತ ನಡೆಸುವಂತಾಗಬೇಕು. ಅದಕ್ಕಾಗಿ ಈ ಮಾರುಕಟ್ಟೆಗೆ ಹೊಂದಿಕೊಂಡಂತೆ ಇರುವ ಕೆಐಎಡಿಬಿಗೆ ಸೇರಿದ ಮೂರು ಎಕರೆ ಭೂಮಿಯನ್ನು ಪಡೆದುಕೊಳ್ಳಲಾಗುವುದು. ಜಾಗದ ಸಂಬಂಧ ಕೋರ್ಟ್ ನಲ್ಲಿ ವಿವಾದ ಇದ್ದು ಅದನ್ನು ಬೇಗ ಬಗೆಹರಿಸಿ, ಭೂಮಿಯನ್ನು ವಶಕ್ಕೆ ಪಡೆಯಬೇಕು. ಈ ಸಂಬಂಧ ಅಧಿಕಾರಿಗಳ ನಿರ್ಲಕ್ಷ್ಯ ಸಲ್ಲದು’ಎಂದರು.

‘ರೇಷ್ಮೆಗೂಡಿನ ದರ ಕುಸಿದು ಬೆಳೆಗಾರರು ಕಂಗಾಲಾಗಿದ್ದ ಸಂದರ್ಭದಲ್ಲಿ ಸರ್ಕಾರ ಮಧ್ಯ ಪ್ರವೇಶಿಸಿ ದರ ಕುಸಿತವನ್ನು ತಡೆಯುವ ಪ್ರಯತ್ನ ಮಾಡಿದೆ. ಈ ನಿಟ್ಟಿನಲ್ಲಿ ತೋಟಗಾರಿಕೆ ಸಚಿವ ನಾರಾಯಣಗೌಡರು ಅಗತ್ಯ ಕ್ರಮ ವಹಿಸಿ, ರೈತರಿಗೆ ನೆರವಾಗಿದ್ದಾರೆ. ಆದ್ದರಿಂದ ರೈತರು ಆತಂಕಗೊಳ್ಳುವ ಅಗತ್ಯವಿಲ್ಲ’ ಎಂದು ಅವರುತಿಳಿಸಿದರು.

ಮಾವು ಸಂಸ್ಕರಣಾ ಘಟಕ: ‘ಕೋಲಾರದ ನಂತರ ಅತಿ ಹೆಚ್ಚು ಮಾವು ಬೆಳೆಯುವ ಜಿಲ್ಲೆ ರಾಮನಗರ. ಇಲ್ಲಿ ಸುಮಾರು 97 ಸಾವಿರ ಟನ್‌ ಮಾವು ಉತ್ಪಾದನೆ ಆಗುತ್ತಿದ್ದು, ಜಿಲ್ಲೆಯಲ್ಲಿ ಮಾವು ಸಂಸ್ಕರಣಾ ಘಟಕ ಆರಂಭಿಸಬೇಕು ಎಂಬ ಬಹುಕಾಲದ ಬೇಡಿಕೆ ಈಗ ಈಡೇರುತ್ತಿದೆ. ರೇಷ್ಮೆ ಇಲಾಖೆಯ 16 ಎಕರೆ ಜಾಗ ಪಡೆದು, ಮಾವು ಸಂಸ್ಕರಣಾ ಘಟಕ ನಿರ್ಮಾಣ ಮಾಡಲಾಗುವುದು’ಎಂದು
ಹೇಳಿದರು.

ತೋಟಗಾರಿಕೆ ಸಚಿವ ನಾರಾಯಣ ಗೌಡ ಮಾತನಾಡಿ 'ಇಲ್ಲಿಂದ ಹೈದರಾಬಾದ್‌, ಸೂರತ್‌ಗೆ ಅತೀ ಹೆಚ್ಚಿನ ಪ್ರಮಾಣದಲ್ಲಿ ರೇಷ್ಮೆನೂಲು ಪೂರೈಕೆಯಾಗುತ್ತಿದೆ. ಆದರೆ, ಲಾಕ್‌ ಡೌನ್‌ ನಿಂದಾಗಿ ರೀಲರ್ಸ್‌ಗಳು ಸಂಕಷ್ಟದಲ್ಲಿದ್ದಾರೆ. ಹೀಗಾಗಿ, ರಿಲರ್ಸ್‌ ಗಳಿಗೆ ನೆರವು ನೀಡಲು ಸರ್ಕಾರ ಕೆಎಸ್‌ಎಂಬಿಗೆ ₹50 ಕೋಟಿ ಅನುದಾನ ನೀಡಿದೆ. ಜೊತೆಗೆ ಪ್ರತಿ ಕೆ.ಜಿನೂಲಿಗೆ 200 ರೂಪಾಯಿ ಪ್ರೋತ್ಸಾಹಧನ ನೀಡಲಾಗುವುದು. ಕೆಎಸ್‌ಐಸಿ ವತಿಯಿಂದ ರೈತರ ಗೂಡು ಖರೀದಿ ಬಗ್ಗೆ ಪರಿಶೀಲಿಸಲಾಗುವುದು ಎಂದರು.

ಈಗಾಗಲೇ 250 ಟನ್‌ನಷ್ಟು ಮಾವು ರಾಜ್ಯದಿಂದ ರಪ್ತು ಮಾಡಲು ಅಗತ್ಯ ಕ್ರಮ ವಹಿಸಲಾಗಿದೆ. ಚನ್ನಪಟ್ಟಣದಲ್ಲಿ ಮೇಗಾ ಫುಡ್‌ ಮಾರ್ಟ್‌ ತೆರೆದು, ಮಾವು ರಪ್ತು ಮಾತ್ರವಲ್ಲ ಬೆಳೆಗಾರರಿಗೆ ಉತ್ತಮ ಬೆಲೆ ನಿಗದಿಪಡಿಸಿ ಖರೀದಿಗಾರರ ಹಿತಕಾಯಲಾಗುವುದು. ಮಾವಿನ ಹಣ್ಣನ್ನು ಪಲ್ಫ್‌ ಮಾಡುವ ಸಲಯವಾಗಿ ಸಂಸ್ಕರಣಾ ಘಟಕ ಸ್ಥಾಪಿಸಲಾಗುವುದು. ಚನ್ನಪಟ್ಟಣದಲ್ಲಿ ಮೊದಲ ಘಟಕ ಹಾಗು ಮಂಡ್ಯದಲ್ಲಿನ ಬೂಕನಕೆರೆ ಹೋಬಳಿಯಲ್ಲಿ ಎರಡನೇ ಘಟಕ ತೆರೆಯಲಾಗುವುದು.

ಹೀಗಾಗಿ ರೈತರು ಆತಂಕ ಪಡುವ ಅಗತ್ಯ ಇಲ್ಲ ಎಂದು ಭರವಸೆ ನೀಡಿದರು. ಮಾವು ಮಾರುಕಟ್ಟೆಯಲ್ಲಿ ಕಮಿಷನ್‌ ದಂಧೆಯ ಸಮಸ್ಯೆ ನನ್ನ ಗಮನಕ್ಕೆ ಬಂದಿದೆ.

ಹೀಗಾಗಿ ಎಲ್ಲವನ್ನು ನಿಗಾ ವಹಿಸುವ ಸಲುವಾಗಿ ಮಾರುಕಟ್ಟೆಗೆ ಭೇಟಿ ನೀಡಲಾಗುವುದು ಎಂದರು. ನಂತರ ನಾರಾಯಣಗೌಡ ರೇಷ್ಮೆಗೂಡು ಮಾರುಕಟ್ಟೆ ಹಾಗೂ ಮಾವು ಮಾರುಕಟ್ಟೆಗೆ ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT