ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: 68 ಮಾದರಿಗಳೂ ನೆಗೆಟಿವ್: ಜನರು ನಿರಾಳ

ಇನ್ನೂ ಕೆಲವು ದಿನ ಕ್ವಾರಂಟೈನ್‌ ಮುಂದುವರಿಕೆ: ಮತ್ತೊಮ್ಮೆ ಪರೀಕ್ಷೆಗೆ ನಿರ್ಧಾರ
Last Updated 27 ಏಪ್ರಿಲ್ 2020, 15:54 IST
ಅಕ್ಷರ ಗಾತ್ರ

ರಾಮನಗರ: ಜೈಲಿನ ಕೈದಿಗಳ ಸ್ಥಳಾಂತರ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಜೈಲು ಸಿಬ್ಬಂದಿ, ನಗರಸಭೆ ಸಿಬ್ಬಂದಿ ಹಾಗೂ ಪೊಲೀಸರೂ ಸೇರಿದಂತೆ ಒಟ್ಟು 68 ಮಂದಿಯ ಕೋವಿಡ್‌-19 ಪರೀಕ್ಷೆ ವರದಿ ನೆಗೆಟಿವ್ ಆಗಿದ್ದು, ಜಿಲ್ಲೆಯ ಜನರು ನಿಟ್ಟುಸಿರು ಬಿಡುವಂತೆ ಆಗಿದೆ.

ರಾಮನಗರ ಜೈಲಿಗೆ ಸ್ಥಳಾಂತರಗೊಂಡಿದ್ದ ಪಾದರಾಯನಪುರ ಗಲಭೆ ಆರೋಪಿಗಳ ಪೈಕಿ ಐವರಲ್ಲಿ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಮತ್ತೆ ಬೆಂಗಳೂರಿಗೆ ವರ್ಗಾಯಿಸಲಾಗಿತ್ತು. ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ 80ಕ್ಕೂ ಹೆಚ್ಚು ಜನರು ಮತ್ತವರ ಕುಟುಂಬದವರನ್ನು ಕ್ವಾರಂಟೈನ್‌ಗೆ ಒಳಪಡಿಸಿದ್ದು, ಅವರಲ್ಲಿ ಹಲವರ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಸೋಮವಾರ ಈ ಎಲ್ಲ ಮಾದರಿಗಳ ಪರೀಕ್ಷೆ ವರದಿ ಆರೋಗ್ಯಾಧಿಕಾರಿಗಳ ಕೈ ಸೇರಿದ್ದು, ಯಾರೊಬ್ಬರಲ್ಲೂ ಸೋಂಕು ಪತ್ತೆಯಾಗಿಲ್ಲ. ಈ ಮೂಲಕ ರಾಮನಗರ ಜಿಲ್ಲೆಯು ಕೊರೊನಾ ಹಸಿರು ವಲಯವಾಗಿಯೇ ಉಳಿದುಕೊಳ್ಳುವ ವಿಶ್ವಾಸ ಮೂಡಿದೆ. ವರದಿಗಳು ನೆಗೆಟಿವ್‌ ಆಗಿದ್ದರೂ ಜೈಲು ಸಿಬ್ಬಂದಿ ಹಾಗೂ ಸಂಬಂಧಿಸಿದವರ ಕ್ವಾರಂಟೈನ್‌ ಮುಂದುವರಿಯಲಿದೆ.

’ಕೈದಿಗಳ ಸ್ಥಳಾಂತರ ಸಂಬಂಧಿಸಿದಂತೆ ಸಂಗ್ರಹಿಸಲಾಗಿದ್ದ ಎಲ್ಲ ಸಿಬ್ಬಂದಿಯ ವರದಿಯೂ ನೆಗೆಟಿವ್‌ ಆಗಿರುವುದು ನೆಮ್ಮದಿ ತಂದಿದೆ. ಆದಾಗ್ಯೂ ಈ ಎಲ್ಲರ ಕ್ವಾರಂಟೈನ್‌ ಮುಂದುವರಿಯಲಿದ್ದು, ನಿರಂತರ ನಿಗಾ ವಹಿಸಲಾಗುವುದು. ಮತ್ತೆ 10-12 ದಿನಗಳ ಬಳಿಕ ಮತ್ತೆ ಅವರ ಗಂಟಲ ದ್ರವಗಳ ಮಾದರಿ ಪಡೆದು ಪರೀಕ್ಷೆಗೆ ಒಳಪಡಿಸಲಾಗುವುದು. ಆನಂತರವಷ್ಟೇ ಕೋವಿಡ್-19 ಸೋಂಕಿನ ಕುರಿತು ಖಾತ್ರಿ ಸಿಗಲಿದೆ’ ಎಂದು ಜಿಲ್ಲಾ ಕುಟುಂಬ ಕಲ್ಯಾಣ ಮತ್ತು ಆರೋಗ್ಯಾಧಿಕಾರಿ ನಿರಂಜನ್ ತಿಳಿಸಿದರು.

ವರದಿಗಳು ನೆಗೆಟಿವ್‌ ಆಗಿದ್ದಾಗ್ಯೂ ಇನ್ನೂ ಹಲವು ವಾರಗಳ ಕಾಲ ಜೈಲಿನ ಸುತ್ತಮುತ್ತ ಸೀಲ್‌ಡೌನ್‌ ಪ್ರಕ್ರಿಯೆ ಮುಂದುವರಿಯಲಿದೆ. ಸುತ್ತಲಿನ 100 ಮೀಟರ್‌ ಪ್ರದೇಶವನ್ನು ಕಂಟೈನ್‌ಝೋನ್‌ ಆಗಿ ಜಿಲ್ಲಾಡಳಿತ ಘೋಷಿಸಿದ್ದು, ಇಲ್ಲಿ ಎಲ್ಲ ತರಹದ ಚಟುವಟಿಕೆಗಳಿಗೆ ಸಂಪೂರ್ಣ ನಿಷೇಧ ಹೇರಿದೆ. ಜಿಲ್ಲಾಧಿಕಾರಿ ಕಚೇರಿ ಹೊರತುಪಡಿಸಿ ಉಳಿದೆಲ್ಲ ಕಚೇರಿ, ಮನೆಗಳ ಬಾಗಿಲು ಮುಚ್ಚಿವೆ. ಸುತ್ತಲಿನ 1 ಕಿ.ಮೀ. ಪ್ರದೇಶವನ್ನು ಸಿವಿಯರ್ ವಲಯ ಎಂತಲೂ, 5 ಕಿ.ಮೀ. ವ್ಯಾಪ್ತಿಯಲ್ಲಿನ ಪ್ರದೇಶವನ್ನು ಕೊರೊನಾ ಬಫರ್‍ ಝೋನ್‌ ಎಂತಲೂ ಗುರುತಿಸಲಾಗಿದೆ.

ಆತಂಕ ದೂರ: ವರದಿಗಳ ನೆಗೆಟಿವ್‌ ಸುದ್ದಿ ಕೇಳಿ ಜನರಲ್ಲಿನ ಆತಂಕವು ಕೊಂಚ ಮಟ್ಟಿಗೆ ದೂರವಾಗಿದೆ. ಹಸಿರು ವಲಯದಲ್ಲಿ ಮುಂದುವರಿದಿದ್ದ ರಾಮನಗರದಲ್ಲಿನ ಜೈಲಿಗೆ ಪಾದರಾಯನಪುರ ಆರೋಪಿಗಳನ್ನು ಇದೇ 21ರಂದು ರಾಜ್ಯ ಸರ್ಕಾರ ಏಕಾಏಕಿ ಸ್ಥಳಾಂತರ ಮಾಡಿತ್ತು. ಅದಾದ ಮರು ದಿನವೇ ಆರೋಪಿಗಳಲ್ಲಿ ಇಬ್ಬರಿಗೆ ಸೋಂಕು ಇರುವುದು ಪತ್ತೆಯಾಗಿತ್ತು. ನಂತರದಲ್ಲಿ ಸೋಂಕಿತರ ಸಂಖ್ಯೆ ಐದಕ್ಕೆ ಏರಿಕೆ ಆಗಿತ್ತು. ಇದರಿಂದ ಎಚ್ಚೆತ್ತ ಸರ್ಕಾರ ಕೂಡಲೇ ಎಲ್ಲ ಆರೋಪಿಗಳನ್ನು ಬೆಂಗಳೂರಿನ ಹಜ್‌ ಭವನಕ್ಕೆ ಸ್ಥಳಾಂತರ ಮಾಡಿತ್ತು.

ರಾಜ್ಯ ಸರ್ಕಾರದ ಈ ನಿರ್ಧಾರಕ್ಕೆ ರಾಜ್ಯದಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿತ್ತು. ವಿರೋಧ ಪಕ್ಷಗಳ ಮುಖಂಡರಾದ ಎಚ್.ಡಿ. ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್‍ ಸೇರಿದಂತೆ ಹಲವರು ಈ ನಿರ್ಧಾರವನ್ನು ಖಂಡಿಸಿದ್ದರು. ಇದರಿಂದಾಗಿ ರಾಮನಗರದ ವರ್ಚಸ್ಸಿಗೆ ಧಕ್ಕೆ ಆಗಲಿದ್ದು, ಇಲ್ಲಿನ ಜನರಿಗೆ ಸೋಂಕು ಹರಡಿದರೆ ಅದಕ್ಕೆ ಸರ್ಕಾರವೇ ಹೊಣೆ ಎಂದು ಎಚ್ಚರಿಸಿದ್ದರು. ರೇಷ್ಮೆಗೂಡು ಮಾರುಕಟ್ಟೆ ಸೇರಿದಂತೆ ಸುತ್ತಲಿನ ಪ್ರದೇಶಗಳಿಗೆ ಜನರು ಬರಲು ಹಿಂದೇಟು ಹಾಕುವಂತಹ ಪರಿಸ್ಥಿತಿ ನಿರ್ಮಾಣ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT