ಬುಧವಾರ, ಮೇ 18, 2022
27 °C
ನೇತ್ರದಾನಕ್ಕೆ 920 ಮಂದಿ ನೋಂದಣಿ

ಬೈರಮಂಗಲ ವೃತ್ತಕ್ಕೆ ಅಪ್ಪು ಹೆಸರು ನಾಮಕರಣ: ಅಭಿಮಾನಿಗಳ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಿಡದಿ: ಪಟ್ಟಣದಲ್ಲಿ ನಟ ಪುನೀತ್ ರಾಜ್‌ಕುಮಾರ್ ಅವರ ಪುಣ್ಯಸ್ಮರಣೆ ಅಂಗವಾಗಿ ಎ. ಮಂಜು ಚಾರಿಟಬಲ್ ಟ್ರಸ್ಟ್, ಡಾ.ರಾಜ್‌ಕುಮಾರ್ ಟ್ರಸ್ಟ್, ಶಂಕರ್ ಕಣ್ಣಿನ ಆಸ್ಪತ್ರೆ ಹಾಗೂ ಬಿಡದಿ ಹೋಬಳಿಯ ಕೆಮಿಸ್ಟ್ ಆ್ಯಂಡ್ ಡ್ರಗ್ಗಿಸ್ಟ್ ಫೌಂಡೇಶನ್ ಟ್ರಸ್ಟ್‌ನಿಂದ ಮಂಗಳವಾರ ಮೊಂಬತ್ತಿ ಮೆರವಣಿಗೆ ಮತ್ತು ಸ್ವಯಂಪ್ರೇರಿತ ನೇತ್ರದಾನ ನೋಂದಣಿ ಕಾರ್ಯಕ್ರಮ
ನಡೆಯಿತು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶಾಸಕ ಎ. ಮಂಜುನಾಥ್ ನೇತೃತ್ವದಲ್ಲಿ ನೂರಾರು ಮಂದಿ ಮೊಂಬತ್ತಿ ಹಿಡಿದು ಮೆರವಣಿಗೆ ನಡೆಸಿದರು. ಪುನೀತ್ ಅಭಿಮಾನಿಗಳು ಬಿಜಿಎಸ್ ಸರ್ಕಲ್‌ನಲ್ಲಿ ಅಪ್ಪುವಿನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಪುನೀತ್‌ ಅಭಿಮಾನಿ ರಮೇಶ್ ಕುಮಾರ್ ಮಾತನಾಡಿ, ‘ಬೈರಮಂಗಲ ವೃತ್ತಕ್ಕೆ ಪುನೀತ್ ಹೆಸರು ನಾಮಕರಣ ಮಾಡಲು‌ ಸರ್ಕಾರಕ್ಕೆ ಮನವಿ ಮಾಡಲಾಗುವುದು. ಬಿಡದಿಯಲ್ಲಿ ಪುನೀತ್ ನುಡಿ ನಮನ ಕಾರ್ಯಕ್ರಮ ಆಯೋಜಿಸಲಾಗುವುದು’ ಎಂದು ತಿಳಿಸಿದರು.

ಅಭಿಮಾನಿ ನಾಗರಾಜ್ ಮಾತನಾಡಿ, ಅಪ್ಪು ನಟನಾಗಿ ಮಾತ್ರವಲ್ಲದೆ ಶ್ರೇಷ್ಠ ಸಮಾಜ ಸೇವಕನಾಗಿ ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ. ಅವರ ಸೇವೆ ಅನಂತ ಮತ್ತು ಅವಿಸ್ಮರಣೀಯವಾದುದು ಎಂದು ಹೇಳಿದರು.

ಶಾಸಕ ಮಂಜುನಾಥ್ ಮಾತನಾಡಿ, ಅಪ್ಪು ಅವರ ಸಮಾಜಮುಖಿ ಕೆಲಸ, ಅವರ ಸರಳತೆ, ಜನರಿಗೆ ನೀಡುತ್ತಿದ್ದ ಗೌರವ ಮಾದರಿಯಾದುದು. ಅವರ ಹೃದಯ ಶ್ರೀಮಂತಿಕೆ ಇತರರಿಗೆ‌ ಮಾದರಿಯಾಗಿದೆ. ಅವರು ಜನರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ‌ ಉಳಿದುಕೊಂಡಿದ್ದಾರೆ ಎಂದು ಸ್ಮರಿಸಿದರು.

ಪುನೀತ್‌ ನೇತ್ರದಾನ ಮಾಡಿರುವಂತೆ ಸಮಾಜದ ಪ್ರತಿಯೊಬ್ಬರು ತಮ್ಮ ನೇತ್ರಗಳನ್ನು ದಾನ‌ ಮಾಡಿ ಅಂಧರಿಗೆ ದೃಷ್ಟಿ ನೀಡಬೇಕು. ಬಿಡದಿಯ ರಾಜ್‌ಕುಮಾರ್‌ ನೇತ್ರ ಸಂಗ್ರಹಣಾ ಕೇಂದ್ರ 920 ಮಂದಿಯಿಂದ ಕಣ್ಣುಗಳನ್ನು ದಾನ‌ ಪಡೆಯುವ ಮೂಲಕ ಉತ್ತಮ ಕೆಲಸ ಮಾಡಿದೆ ಎಂದು ಶ್ಲಾಘಿಸಿದರು.

ಡಾ.ರಾಜ್‌ಕುಮಾರ್ ನೇತ್ರ ಸಂಗ್ರಹಣಾ ಕೇಂದ್ರದಲ್ಲಿ ಶಾಸಕ ಮಂಜುನಾಥ್, ಅಪ್ಪು ಅಭಿಮಾನಿಗಳಾದ ನಾಗರಾಜ್, ಬಾಳಪ್ಪ ಮತ್ತು ರಾಕೇಶ್ ಕುಟುಂಬದ ಸದಸ್ಯರು ನೇತ್ರದಾನ ಪತ್ರಕ್ಕೆ ಸಹಿ ಹಾಕಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು