ಗುರುವಾರ , ಅಕ್ಟೋಬರ್ 6, 2022
23 °C
ಕಾಡಿನಲ್ಲಿ ತಾಯಿ ಆನೆ ಸಾವು; ಅನಾಥವಾಗಿ ಮರಿಯ ಅಲೆದಾಟ

ಕನಕಪುರ: ನಾಡಿಗೆ ಬಂದ ಮರಿ ಆನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನಕಪುರ (ರಾಮನಗರ ಜಿಲ್ಲೆ): ತಾಯಿ ಅಗಲಿಕೆಯಿಂದ ಅನಾಥವಾಗಿ ದನಗಳ ಹಿಂಡಿನ ಜೊತೆ ನಾಡಿನತ್ತ ಬಂದ ಆನೆ ಮರಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರು ಆರೈಕೆ ಮಾಡುತ್ತಿದ್ದು, ಈಗ ಅದು ಎಲ್ಲರ ಕೇಂದ್ರ ಬಿಂದುವಾಗಿದೆ.

ಒಂದೂವರೆ ತಿಂಗಳ ಪ್ರಾಯದ ಮರಿ ಇದಾಗಿದೆ. ಕಾವೇರಿ ವನ್ಯಜೀವಿ ಧಾಮಕ್ಕೆ ಹೊಂದಿಕೊಂಡಂತೆ ಇರುವ ಕನಕಪುರ ತಾಲ್ಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಆನೆಗಳ ಓಡಾಟ ಸಾಮಾನ್ಯವಾಗಿದೆ. ಹೀಗೆ ಗುಂಪಿನಲ್ಲಿ ಓಡಾಡಿಕೊಂಡಿದ್ದ ಆನೆಗಳ ಪೈಕಿ ಒಂದು ಹೆಣ್ಣಾನೆ ಈಚೆಗಷ್ಟೇ ಮರಿಯೊಂದಕ್ಕೆ ಜನ್ಮ ನೀಡಿತ್ತು. ನಂತರದಲ್ಲಿ ಆ ಆನೆಯು ಕುದುರೆ ದಾರಿ ಎಂಬಲ್ಲಿ ಕಂದಕಕ್ಕೆ ಬಿದ್ದು ಮೃತಪಟ್ಟಿತ್ತು ಎನ್ನಲಾಗಿದೆ.

ತಾಯಿ ಸಾವಿನಿಂದ ವಿಚಲಿತಗೊಂಡ ಮರಿಯು ಒಂದೆರಡು ದಿನ ಕಾಡಿನಲ್ಲೇ ಕಾಲ ಕಳೆದಿದೆ. ಕನಕಪುರ ತಾಲ್ಲೂಕಿನ ಸೋಲಿಗೆರೆ, ಪೋಡನಗುಂದಿ ಭಾಗದ ಜನರು ಕಾಡಿಗೆ ದನಗಳನ್ನು ಮೇಯಲು ಬಿಟ್ಟಿದ್ದು, ದನಗಳ ಜೊತೆ ಮರಿ ಆನೆಯೂ ಊರಿನತ್ತ ಹೆಜ್ಜೆ ಹಾಕಿದೆ.

ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಗೆ ಈ ವಿಷಯ ತಿಳಿಸಿದ್ದು, ಅವರು ಮರಿಯನ್ನು ರಕ್ಷಣೆ ಮಾಡಿದ್ದಾರೆ. ಬೇರೆ
ಆನೆಗಳ ಗುಂಪಿನ ಜೊತೆ ಬಿಡುವ ಪ್ರಯತ್ನ ಮಾಡಿದ್ದಾರೆ. ಆದರೆ ಇತರೆ ಆನೆಗಳು ಈ ಮರಿಯನ್ನು ಜೊತೆಗೆ ಸೇರಿಸಿಕೊಂಡಿಲ್ಲ. ಹೀಗಾಗಿ ಸದ್ಯ ಇದನ್ನು ಭೂಹಳ್ಳಿ ಕ್ಯಾಂಪ್‌ನಲ್ಲಿ ತಾವೇ ಪಾಲನೆ ಮಾಡುತ್ತಿದ್ದಾರೆ. ಸುತ್ತಲಿನ ಗ್ರಾಮಸ್ಥರು ಮರಿಯನ್ನು ಮುದ್ದು ಮಾಡಿ ಹೋಗುತ್ತಿದ್ದಾರೆ. ‘ಸದ್ಯ ಮರಿಯನ್ನು ಭೂಹಳ್ಳಿ ಪಶು ವೈದ್ಯಾಧಿಕಾರಿ ಗಿರೀಶ್ ನೇತೃತ್ವದಲ್ಲಿ ಪಾಲನೆ ಮಾಡಲಾಗುತ್ತಿದೆ. ಮರಿಯು ಹಾಲು ಕುಡಿಯುತ್ತಿದ್ದು, ಆರೋಗ್ಯದಿಂದ ಇದೆ. ಡಿಸಿಎಫ್‌ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನೊಂದು ವಾರದಲ್ಲಿ ಇದನ್ನು ಮುತ್ತತ್ತಿ ಬಳಿಯ ಭೀಮೇಶ್ವರಿ ಕ್ಯಾಂಪಿಗೆ ಬಿಡುತ್ತೇವೆ’ ಎಂದು ಕಾವೇರಿ ವನ್ಯಜೀವಿಧಾಮದ ಸಂಗಮ ವಲಯ ಅರಣ್ಯಾಧಿಕಾರಿ ದೇವರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು