ಚನ್ನಪಟ್ಟಣ: ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಸೇರಿದಂತೆ 13 ಮಂದಿ ಬಿಜೆಪಿ ಮುಖಂಡರ ವಿರುದ್ಧ ತಾಲ್ಲೂಕು ಜೆಡಿಎಸ್ ವಿದ್ಯಾರ್ಥಿ ಘಟಕದ ಅಧ್ಯಕ್ಷ ಆಶಿಷ್ ನಗರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸೋಮವಾರ ದೂರು ದಾಖಲಿಸಿದ್ದಾರೆ.
ತಾಲ್ಲೂಕಿನ ಬೈರಾಪಟ್ಟಣ ಗ್ರಾಮದಲ್ಲಿ ಶನಿವಾರ ನಡೆದ ಜೆಡಿಎಸ್ ಪ್ರತಿಭಟನೆ ವೇಳೆ ಯೋಗೇಶ್ವರ್ ಸೇರಿದಂತೆ 13 ಮಂದಿ ಬಿಜೆಪಿ ಮುಖಂಡರು ತಮ್ಮ ಮೇಲೆ ಹಲ್ಲೆ ನಡೆಸಿ, ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ದೂರಿನಲ್ಲಿ ಸಿ.ಪಿ. ಯೋಗೇಶ್ವರ್, ಬಿಜೆಪಿ ಮುಖಂಡರಾದ ಎಲೆಕೇರಿ ರವೀಶ್, ಮುದಗೆರೆ ಜಯಕುಮಾರ್, ಕೋಟೆ ಸ್ವಾಮಿ, ದೊಡ್ಡಮಳೂರು ಜಯಂತ್, ಸುರೇಂದ್ರ, ರಾಜೇಶ್, ಬೈರಾಪಟ್ಟಣ ಸುರೇಶ್, ಎಪಿಎಂಸಿ ರಾಜು, ಮಳೂರು ಪಟ್ಟಣದ ನಂಜೇಶ್, ಶಿವಕುಮಾರ್, ಜಯಸ್ವಾಮಿ, ಬ್ರಹ್ಮಣೀಪುರ ಪ್ರಸನ್ನ ಸೇರಿ 13 ಮಂದಿ ಹೆಸರು ಉಲ್ಲೇಖಿಸಲಾಗಿದೆ.
‘ಇವರೆಲ್ಲರೂ ಅವಾಚ್ಯ ಪದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸುವವರನ್ನು ತಡೆಯುವ ಬದಲು ಅವರ ಪ್ರಚೋದನೆಗೆ ಒಳಗಾಗಿ ಪೊಲೀಸರು ನನ್ನ ಮೇಲೆ ಲಾಠಿ ಪ್ರಹಾರ ನಡೆಸಿದರು. ಲಾಠಿ ಏಟುತಿಂದು ನಾನು ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದೇನೆ. ನನ್ನ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕಾನೂನಿನ ರೀತಿ ಕ್ರಮ ತೆಗೆದುಕೊಳ್ಳಬೇಕು’ ಎಂದು ಆಶಿಷ್ ಮನವಿ ಮಾಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.