ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧಾರ್ ನೋಂದಣಿ-ತಿದ್ದುಪಡಿಗೆ ಪರದಾಟ

ಕಂಪ್ಯೂಟರ್‌ ಸಮಸ್ಯೆ, ಒಬ್ಬರಿಗೆ ಒಂದೇ ಅರ್ಜಿ ಮಾತ್ರ ವಿತರಣೆಯಿಂದ ತೊಂದರೆ
Last Updated 17 ಮಾರ್ಚ್ 2019, 13:48 IST
ಅಕ್ಷರ ಗಾತ್ರ

ರಾಮನಗರ: ಅಧಾರ್ ನೋಂದಣಿ ಸಮಸ್ಯೆ ನಿವಾರಣೆಗೆ ಜಿಲ್ಲಾಧಿಕಾರಿಗಳು ಹಾಗೂ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳದೇ ಇರುವುದರಿಂದ ಸಾರ್ವಜನಿಕರ ನೋವನ್ನು ಕೇಳುವವರೇ ಇಲ್ಲದಂತಾಗಿದೆ.

ಪ್ರತಿ ದಿನ ಮುಂಜಾನೆ 6 ಗಂಟೆಗೆ ಬಂದು ಕಾದರೂ ಆಧಾರ್ ನೋಂದಣಿಯ ಅರ್ಜಿ ಸಿಗುವುದು ಕಷ್ಟವಾಗಿದೆ. ಅರ್ಜಿ ಸಿಕ್ಕರೂ ನೋಂದಣಿಯಾಗಲು ಒಂದು ವಾರ ಕಾಯಬೇಕು. ಕಂಪ್ಯೂಟರ್‌ ಸಮಸ್ಯೆ, ಒಬ್ಬರಿಗೆ ಒಂದೇ ಅರ್ಜಿ ಮಾತ್ರ ನೀಡುತ್ತಿದ್ದಾರೆ.

ಅರ್ಜಿ ಪಡೆಯಲು ನಿಗದಿತ ದಿನಾಂಕಕ್ಕೆ ಬರಬೇಕು ಎಂದು ನಾಮಪಲಕ ಹಾಕಿರುತ್ತಾರೆ. ಬಂದರೂ ಬೆಳಿಗ್ಗೆ 6 ಗಂಟೆಗೆ ಬಂದು 9 ಗಂಟೆಯ ಒಳಗೆ ಪಡೆದುಕೊಳ್ಳಬೇಕು. ನೋಂದಣಿ ಮಾಡುವ ಅಪರೇಟರ್‌ಗಳ ಕಿರಿಕಿರಿ, ದರ್ಪದ ಮಾತು, ಹಿರಿಯರು ಎಂಬ ಭಾವನೆ ಇಲ್ಲ, ಸಣ್ಣ ಸಣ್ಣ ಮಕ್ಕಳನ್ನು ಕರೆದುಕೊಂಡು ಬಂದು ದಿನಗಟ್ಟಲೇ ಕಾಯುವುದು ಹೀಗೆ ಹತ್ತಾರು ಸಮಸ್ಯೆಗಳನ್ನು ಇಲ್ಲಿನ ಮಿನಿವಿಧಾನಸೌಧ ತಳಮಹಡಿ, ಸ್ಟೇಟ್ ಬ್ಯಾಂಕ್‌ ಆಫ್ ಇಂಡಿಯಾ ಹಾಗೂ ಸಿಂಡಿಕೇಟ್ ಬ್ಯಾಂಕಿನ ಆಧಾರ್ ನೋಂದಣಿ ಕೇಂದ್ರದ ಬಳಿ ಅನುಭವಿಸುವುದಾಗಿ ಸಾರ್ವಜನಿಕರು ಹೇಳುತ್ತಿದ್ದಾರೆ.

ನೋಂದಣಿ ಮಾಡದೆ ಇರುವವರಿಗೆ ಅನುಕೂಲವಾಗುವಂತೆ ಇಲ್ಲಿ ಕೇಂದ್ರಗಳನ್ನು ತೆರೆಯಲಾಗಿದೆ. ಆದರೆ ಈ ಕೇಂದ್ರಗಳಲ್ಲಿ ಒಂದು ಕಂಪ್ಯೂಟರ್ ಮಾತ್ರ ಕಾರ್ಯನಿರ್ವಹಿಸುತ್ತಿರುವುದರಿಂದ, ಪ್ರತಿ ದಿನ ನೂರಾರು ಜನ ಬಂದು ಕಾದು ಕಾದು ಹಿಂದಿರುಗುವಂತಾಗಿದೆ.

ಆಧಾರ್ ಕಾರ್ಡ್ ನೋಂದಣಿ ಮತ್ತು ತಿದ್ದುಪಡಿಗೆ ಅರ್ಜಿ ಸಲ್ಲಿಸಲು ದಿನಪೂರ್ತಿ ಕಾದು ನಿಲ್ಲುವ ಪರಿಸ್ಥಿತಿ ಎದುರಾಗಿದೆ. ಸರ್ಕಾರದ ಸವಲತ್ತುಗಳನ್ನು ಪಡೆಯಲು ಎಲ್ಲದಕ್ಕೂ ಆಧಾರ್ ಸಂಖ್ಯೆಯನ್ನು ಕಡ್ಡಾಯ ಮಾಡಿರುವುದರಿಂದ ಆಧಾರ್ ಸಂಖ್ಯೆಯ ಅವಶ್ಯಕತೆ ಇದೆ.

ತಾಲ್ಲೂಕು ಕಚೇರಿಯಲ್ಲಿ ಆಧಾರ್ ನೋಂದಣಿಗೆ ಇರುವುದು ಒಂದೇ ಕೌಂಟರ್. ಸರ್ವರ್ ಸರಿಯಿದ್ದರೆ 30 ರಿಂದ 35 ಆಧಾರ್ ನೋಂದಣಿಯಾಗುತ್ತದೆ ಎನ್ನುತ್ತಾರೆ ಕೌಂಟರ್‌ನ ಸಿಬ್ಬಂದಿ.

ಬ್ಯಾಂಕ್, ಅಂಚೆ ಕಚೇರಿಗಳಲ್ಲಿ ನೋಂದಣಿ: ಸರ್ಕಾರ ಬ್ಯಾಂಕುಗಳ ಮತ್ತು ಅಂಚೆ ಕಚೇರಿಗಳಲ್ಲೂ ಆಧಾರ್ ನೋಂದಣಿ ಮಾಡಲಾಗುತ್ತದೆ ಎಂದು ತಿಳಿಸಿತ್ತು. ರಾಮನಗರದ ಅಂಚೆ ಕಚೇರಿ, ಕರ್ಣಾಟಕ ಬ್ಯಾಂಕ್, ಭಾರತೀಯ ಸ್ಟೇಟ್ ಬ್ಯಾಂಕ್ ಹಾಗೂ ಕಾರ್ಪೊರೇಷನ್ ಬ್ಯಾಂಕ್‌ ಗಳಲ್ಲಿ ಆಧಾರ್ ನೋಂದಣಿ ಸ್ಥಾಪಿಸಿದೆ ಎಂದು ಯೂನಿಕ್ ಐಡೆಂಟಿಫಿಕೇಷನ್ ಅಥಾರಿಟಿ ಆಫ್ ಇಂಡಿಯಾದ (ಯುಐಡಿಎಐ) ವೆಬ್ ಸೈಟ್ ತಿಳಿಸಿದೆ. ಆದರೆ ಬ್ಯಾಂಕ್ ಮತ್ತು ಅಂಚೆ ಕಚೇರಿಯಲ್ಲಿ ಒಂದೇ ಉತ್ತರ ಸರ್ವರ್ ಡೌನ್.

ಗ್ರಾಮೀಣ ಪ್ರದೇಶದ ನಾಡಕಚೇರಿಗಳಲ್ಲೂ ಇದೇ ಕತೆ. ಜಿಲ್ಲಾ ಕೇಂದ್ರ ಮಾತ್ರವಲ್ಲದೆ ಜಿಲ್ಲೆಯ ಇತರ ತಾಲ್ಲೂಕುಗಳಲ್ಲಿಯೂ ಜನತೆ ಇದೇ ಸಮಸ್ಯೆ ಎದುರಿಸುತ್ತಿದ್ದಾರೆ. ಅಧಿಕಾರಿಗಳು ಮಾತ್ರ ಮೌನಕ್ಕೆ ಶರಣಾಗಿದ್ದಾರೆ ಎಂದು ವಿದ್ಯಾನಗರದ ರವಿ ಆರೋಪಿಸಿದರು.

ಸರ್ವರ್‌ ಸಮಸ್ಯೆ: ನಾಡ ಕಚೇರಿ ಹಾಗೂ ಸರ್ಕಾರೇತರ ಸಂಸ್ಥೆಗಳಲ್ಲಿ ಆಧಾರ್ ಕಾರ್ಡ್‌ ಪಡೆಯಲು ಅವಕಾಶವಿತ್ತು. ಆದರೆ, ಈ ನೀತಿಯನ್ನು ಸರ್ಕಾರ ಈಚೆಗೆ ಬದಲಾಯಿಸಿದೆ. ರಾಷ್ಟ್ರೀಕೃತ ಬ್ಯಾಂಕ್‌, ಅಂಚೆ ಕಚೇರಿ ಹಾಗೂ ತಾಲ್ಲೂಕು ಕಚೇರಿಗಳಲ್ಲಿ ಮಾತ್ರ ಇದಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಸಮಸ್ಯೆ ಇನ್ನಷ್ಟು ಸಂಕೀರ್ಣಗೊಂಡಿದೆ.

ಆಧಾರ್ ತಿದ್ದುಪಡಿ ಹಾಗೂ ನೂತನ ಕಾರ್ಡ್‌ ಪಡೆಯಲು ಸರ್ವರ್‌ ಸಮಸ್ಯೆ ಎದುರಾಗಿದೆ. ನಿತ್ಯ ಗರಿಷ್ಠ 20 ಜನರಿಗೆ ಮಾತ್ರ ಸೇವೆ ಒದಗಿಸಲು ಸಾಧ್ಯವಿದೆ. ಹೀಗಾಗಿ, ಮೊದಲು ಬಂದವರಿಗೆ ಮಾತ್ರ ಆದ್ಯತೆ ನೀಡುತ್ತೇವೆ. ಟೋಕನ್‌ ಪಡೆಯದವರು ಮರುದಿನ ಕೇಂದ್ರಕ್ಕೆ ಧಾವಿಸಿ ಸೇವೆ ಪಡೆಯಬಹುದು ಎನ್ನುತ್ತಾರೆ ಎಸ್‌ಬಿಐ ಹಾಗೂ ಸಿಂಡಿಕೇಟ್ ಬ್ಯಾಂಕಿನ ಸಿಬ್ಬಂದಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT