ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಡಗರ, ಸಂಭ್ರಮದ ಮಾಗಡಿ ರಥೋತ್ಸವ

Last Updated 17 ಏಪ್ರಿಲ್ 2019, 13:12 IST
ಅಕ್ಷರ ಗಾತ್ರ

ಮಾಗಡಿ: ತಿರುಮಲೆ ತಿರುವೆಂಗಳನಾಥ ರಂಗನಾಥಸ್ವಾಮಿ ಬ್ರಹ್ಮರಥೋತ್ಸವ ಸಡಗರ ಸಂಭ್ರಮದಿಂದ ನಡೆಯಿತು, ಉತ್ತರಾನಕ್ಷತ್ರ ಮಿಥುನ ಲಗ್ನದಲ್ಲಿ ರಂಗನಾಥಸ್ವಾಮಿ ಮತ್ತು ಕಾಮಾಕ್ಷ ಅಮ್ಮನವರಿಗೆ ಶಾಸ್ತ್ರೋಕ್ತವಾಗಿ ನಡೆದ ಮದುವೆಯಲ್ಲಿ ತಹಶೀಲ್ದಾರ್‌ ನರಸಿಂಹಮೂರ್ತಿ ಕನ್ಯಾದಾನ ಸೇವೆ ನೆರವೇರಿಸಿದರು.

ರಂಗನಾಥಸ್ವಾಮಿ ಮತ್ತು ಉಭಯ ಅಮ್ಮನವರ ಅಲಂಕೃತ ಉತ್ಸವ ಮೂರ್ತಿಗಳನ್ನು ರಥದ ಮೇಲೆ ಇಟ್ಟು ಪೂಜಿಸಿದರು. ಬೆಳಿಗ್ಗೆ 11.30ಕ್ಕೆ ನಡೆಯಬೇಕಿದ್ದ ರಥೋತ್ಸವ, ವಿಳಂಭವಾಗಿ ಮಧ್ಯಾಹ್ನ 12.20ಕ್ಕೆ ನಡೆಯಿತು.

ಮೂರು ಗರುಡ ಪಕ್ಷಗಳು ರಥದಮೇಲೆ ಸುತ್ತುಹಾಕಿ ನಭೋಮಂಡಲದತ್ತ ಹಾರಿದವು ಎಂದು ಸೇರಿದ್ದ ಜನರು ತಿಳಿಸಿದರು. ಭಕ್ತರ ಜಯಘೋಷ ಮುಗಿಲು ಮುಟ್ಟಿತು.

ಶಾಸಕ ಎ.ಮಂಜುನಾಥ, ಕಾಂಗ್ರೆಸ್‌ ಮುಖಂಡ ಎಚ್‌.ಸಿ,ಬಾಲಕೃಷ್ಣ, ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್‌.ಎಂ. ಕೃಷ್ಣಮೂರ್ತಿ, ಜೆಡಿಎಸ್‌ ಮುಖಂಡ ಮಂಡಿರಂಗೇಗೌಡ, ನಗರ ಜೆಡಿಎಸ್‌ ಅಧ್ಯಕ್ಷ ಟಿ.ಆರ್‌.ಪ್ರಕಾಶ್‌, ಜಿಲ್ಲಾ ಪಂಚಾಯಿತಿ ಸದಸ್ಯೆ ಚಂದ್ರಮ್ಮ ನಂಜಯ್ಯ, ಅಂತರರಾಷ್ಟ್ರೀಯ ಬೊಂಬೆತಜ್ಞ ಎಂ.ಆರ್‌.ರಂಗನಾಥ ರಾವ್‌, ಇತಿಹಾಸ ಸಂಶೋಧಕ ಡಾ.ಮುನಿರಾಜಪ್ಪ, ಕವಿ.ಡಿ.ರಾಮಚಂದ್ರಯ್ಯ, ಲೇಖಕ ಪಾಣ್ಯಂ ನಟರಾಜ್‌, ಶ್ರೀರಂಗ ಸೇವಾ ಟ್ರಸ್ಟಿನ ಅಧ್ಯಕ್ಷ ಟಿ.ಎಸ್‌.ಸತೀಶ್‌, ದೇವಾಲಯ ಸಮಿತಿ ಸದಸ್ಯರಾದ ವತ್ಸಲಾ ರೇವಣ್ಣ, ಭೈರಪ್ಪ, ಹೊಸಪೇಟೆ ಜಯಣ್ಣ ಮೇದರ, ಪ್ರಭು, ಬಾಲಾಜಿ ರಂಗನಾಥ್‌, ಪುರಸಭೆ ಸದಸ್ಯರಾದ ಸುಶೀಲ ರಂಗಹನುಮಯ್ಯ, ನಿರ್ಮಲಾ ಸೀತಾರಾಮು, ಬಸವರಾಜು, ಎಸ್‌.ಮಹದೇವ್‌, ಸುನಿತಾನಾಗರಾಜು, ಸರ್ಕಲ್‌ ಇನ್‌ಸ್ಪೆಕ್ಟರ್‌ಗಳಾದ ರವಿಕುಮಾರ್‌.ಜಿ.ಆರ್‌, ಉಮೇಶ್‌, ಸಬ್‌ಇನ್‌ಸ್ಪೆಕ್ಟರ್‌ ಬಿ.ನಟರಾಜು, ಶುಭೋದಯ ಮಹೇಶ್‌ ಇತರರು ರಥಕ್ಕೆ ಪೂಜೆ ಸಲ್ಲಿಸಿ ರಥವನ್ನು ಎಳೆದರು.

ಜನಸಾಗರದ ನಡುವೆ ಬ್ರಹ್ಮರಥೋತ್ಸವ ವೈಭವದಿಂದ ನಡೆಯಿತು. ರಾಜ್ಯದ ವಿವಿಧೆಡೆಗಳಿಂದ ಬಂದಿದ್ದ ಭಕ್ತರು ರಥವನ್ನು ಎಳೆದು ಭಕ್ತಿ ಸಮರ್ಪಿಸಿದರು. ರಥಬೀದಿಯ ವಿವಿಧ ಅರವಟಿಗೆಗಳಲ್ಲಿ ಸಾಮೂಹಿಕ ಅನ್ನದಾನ ನಡೆಯಿತು.

ನೀರು ಮಜ್ಜಿಗೆ, ಪಾನಕ, ಹಲಸಿನ ಹಣ್ಣಿನ ರಸಾಯನ ವಿತರಿಸಲಾಯಿತು. ನವದಂಪತಿ ರಥದ ಮೇಲೆ ಹೂವು ದವನ ಸಿಕ್ಕಿಸಿದ ಬಾಳೆಹಣ್ಣುಗಳನ್ನು ಎಸೆದರು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರಿಂದ ಮುಂಜಾಗ್ರತೆಯಿಂದ ಅಗ್ನಿಶಾಮಕ ದಳದ ಅಧಿಕಾರಿ ರೇವಣ್ಣ ಮತ್ತು ತಂಡದ ಸಿಬ್ಬಂದಿ, ತುರ್ತು ಚಿಕಿತ್ಸೆಗೆ ಬೇಕಾದ ವೈದ್ಯರ ಸಹಿತ ಆಂಬುಲೆನ್ಸ್‌ ಮತ್ತು ಅತಿಹೆಚ್ಚು ಪೊಲೀಸ್‌ ಸಿಬ್ಬಂದಿಯನ್ನು ರಥಬೀದಿಯಲ್ಲಿ ನಿಲ್ಲಿಸಲಾಗಿತ್ತು.

ಬೆಂಗಳೂರು, ದಾಬಸಪೇಟೆ, ಕುಣಿಗಲ್‌, ರಾಮನಗರ ನಾಲ್ಕು ದಿಕ್ಕಿನ ರಸ್ತೆಗಳಲ್ಲಿ ಜನಸಾಗರ ಹರಿದು ಬಂದಿತ್ತು. ಮೂಲದೇವರಿಗೆ ರಾಜ ದರ್ಬಾರ್‌ ಅಲಂಕಾರ ಏರ್ಪಡಿಸಲಾಗಿತ್ತು. ಭಕ್ತರು ಸಾಲಾಗಿ ನಿಂತು ದೇವರ ದರ್ಶನ ಪಡೆದರು. ಸಂಸ್ಕೃತ ಪಂಡಿತರು ಮತ್ತು ಹರಿದಾಸರು ರಥಬೀದಿಯಲ್ಲಿ ಭಕ್ತಿಗೀತೆಗಳನ್ನು ಹಾಡುತ್ತಾ ನರ್ತಿಸಿದರು.

ರಂಗನಾಥಸ್ವಾಮಿ ಮರಾಠ ಪರಿಷತ್‌ ಸೇವಾ ಟ್ರಸ್ಟಿನ ಅಧ್ಯಕ್ಷ ಕೃಷ್ಣೋಜಿ ರಾವ್‌, ಮೋಹನ್‌ ತಂಡದ ವತಿಯಿಂದ ಸಾಮೂಹಿಕ ಅನ್ನದಾನ ನಡೆಯಿತು. ರಥೋತ್ಸವದ ಅಂಗವಾಗಿ ದೇವಾಲಯಕ್ಕೆ ಹೂವಿನ ಅಲಂಕಾರ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT