ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇವಣ ಸಿದ್ದೇಶ್ವರ ಬೆಟ್ಟ; ಪ್ರವಾಸಿಗರನ್ನು ಸೆಳೆಯುವ ಏಕಶಿಲಾ ಗಿರಿ

Last Updated 21 ಸೆಪ್ಟೆಂಬರ್ 2021, 5:14 IST
ಅಕ್ಷರ ಗಾತ್ರ

ರಾಮನಗರ: ಕಡಿದಾದ ಮೆಟ್ಟಿಲುಗಳುಳ್ಳ ಈ ಬೆಟ್ಟವನ್ನು ಏರುವುದೇ ಒಂದು ಸವಾಲು. ಆದರೂ, ರೇವಣ
ಸಿದ್ದೇಶ್ವರನನ್ನು ಕಣ್ಮುಂಬಿಕೊಳ್ಳುವ ಭಕ್ತರ ಉತ್ಸಾಹಕ್ಕೆ ಇದು ಅಡ್ಡಿಯಾಗಿಲ್ಲ.

ರಾಮನಗರ ತಾಲ್ಲೂಕಿನ ಕೈಲಾಂಚ ಹೋಬಳಿಯ ಅವ್ವೇರಹಳ್ಳಿ ಗ್ರಾಮ ಸಮೀಪದ ಇರುವ ರೇವಣ ಸಿದ್ದೇಶ್ವರ ಬೆಟ್ಟವು ಈ ಭಾಗದ ಪ್ರಮುಖ ಧಾರ್ಮಿಕ, ಐತಿಹಾಸಿಕ ಕ್ಷೇತ್ರಗಳಲ್ಲಿ ಒಂದು. ಏಕಶಿಲಾ ಬೆಟ್ಟದ ಮೇಲ್ಭಾಗದಲ್ಲಿ ರೇವಣ ಸಿದ್ದೇಶ್ವರರ ದೇಗುಲವಿದ್ದು, ಭಕ್ತರನ್ನು ತನ್ನತ್ತ ಸೆಳೆಯುತ್ತಲೇ ಬಂದಿದೆ.

ಈ ಸ್ಥಳದಲ್ಲಿ ರೇವಣಸಿದ್ದರೆಂಬ ಯತೀಶ್ವರರು ಅನೇಕ ಕಾಲ ಯೋಗಾನುಷ್ಠಾನದಲ್ಲಿದ್ದು, ಈ ಗಿರಿಯನ್ನು ಸಿದ್ಧಗಿರಿಯನ್ನಾಗಿ ಮಾಡಿದುದರಿಂದ ಈ ಕ್ಷೇತ್ರಕ್ಕೆ ‘ರೇವಣಸಿದ್ದೇಶ್ವರ ಬೆಟ್ಟ’ ಎಂದು ಹೆಸರು ಬಂದಿರುವುದಾಗಿ ತಿಳಿದು ಬರುತ್ತದೆ.

ಬೆಟ್ಟದ ಬುಡದಲ್ಲಿರುವ ತೇರುಬೀದಿಯಲ್ಲಿ ರೇಣುಕಾಂಬೆಯ ದೇಗುಲವಿದೆ. ಬೆಟ್ಟದ ಮುಖ್ಯಭಾಗದಲ್ಲಿ ಗುಹಾಂತರ ದೇವಾಲಯವಿದ್ದು, ಅಲ್ಲಿ ಉದ್ಭವವಾದದ್ದೆಂದು ಹೇಳಲಾಗುವ ಅರ್ಧ ಅಡಿಯಷ್ಟು ಎತ್ತರದ ರೇವಣಸಿದ್ದೇಶ್ವರರ ಶಿಲಾಲಿಂಗವಿದೆ. ದೇವಸ್ಥಾನದ ಪಕ್ಕದಲ್ಲಿ ನೀರಿನ ದೊಣೆ ಇದೆ. ಬೆಟ್ಟ ಹತ್ತುವ ಪ್ರಾರಂಭದಲ್ಲಿ ಎಡ ಭಾಗದಲ್ಲಿ ಗಣಪತಿ ಮತ್ತು ಬಲಭಾಗದಲ್ಲಿ ರೇವಣ ಸಿದ್ದೇಶ್ವರರ ಪಾದಗಳಿವೆ. ಬೆಟ್ಟದ ಕೆಳಭಾಗದಲ್ಲಿ ಇನ್ನೂ ಹಲವು ದೇಗುಲಗಳಿವೆ.

ಪಾಂಡವರು ತಮ್ಮ ವನವಾಸದ ಕಾಲದಲ್ಲಿ ಈ ಪ್ರದೇಶದಲ್ಲೂ ಕೆಲಕಾಲ ವಾಸ ಮಾಡಿದ್ದರಂತೆ. ಆ ಸಂದರ್ಭದಲ್ಲಿ ಭೀಮನು ಬೆಟ್ಟದ ಮೇಲೆ ಲಿಂಗವೊಂದನ್ನು ಪ್ರತಿಷ್ಠಾಪಿಸಿ ಪೂಜಿಸಿದುದರಿಂದ ಈ ಬೆಟ್ಟಕ್ಕೆ ‘ಭೀಮೇಶ್ವರ ಬೆಟ್ಟ’ ಎಂಬ ಹೆಸರೂ ಸಹ ಬಂತೆಂಬ ಪ್ರತೀತಿ ಇದೆ. ರಾಜ್ಯದಾದ್ಯಂತ ಇರುವ ರೇವಣ ಸಿದ್ಧೇಶ್ವರರ 85 ನೆಲೆಗಳಲ್ಲಿ ಇಲ್ಲಿನ ನೆಲೆಯೂ ಪ್ರಮುಖವಾದುದು.

ವ್ಯಾಸ ಪೂರ್ಣಿಮೆಯ ಹಿಂದಿನ ದಿನ ಇಲ್ಲಿ ದೊಡ್ಡ ಜಾತ್ರೆಯೇ ನಡೆಯುತ್ತದೆ. ಕಾರ್ತಿಕ ಮಾಸದ ಅಮಾವಾಸ್ಯೆ ದಿನದಂದು ಇಲ್ಲಿ ಲಕ್ಷ ದೀಪೋತ್ಸವ ನಡೆಯುತ್ತದೆ. ಇದು ಪ್ರಾಕೃತಿಕವಾಗಿ ದಕ್ಷಿಣ ಕರ್ನಾಟಕದ ಏಕಶಿಲಾ ಬೆಟ್ಟಗಳಲ್ಲಿ ಒಂದು. ಇಲ್ಲಿಗೆ ಪ್ರತಿನಿತ್ಯ ನೂರಾರು ಭಕ್ತರು, ಪ್ರವಾಸಿಗರು, ಚಾರಣಿಗರು ಭೇಟಿ ನೀಡುತ್ತಾರೆ.

ಭಕ್ತರಿಗೆ ಸೌಲಭ್ಯ

ದೇವಸ್ಥಾನವು ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿದ್ದು, ಸರ್ಕಾರವೇ ನಿಯೋಜಿಸಿರುವ ಆಡಳಿತ ಮಂಡಳಿ ಇದೆ. ಪ್ರಯಾಣಿಕರ ಅನುಕೂಲಕ್ಕಾಗಿ ಇಲ್ಲಿ ಈಚೆಗಷ್ಟೇ ಯಾತ್ರಿನಿವಾಸ ನಿರ್ಮಿಸಲಾಗಿದೆ.

ಇದಲ್ಲದೆ ಇಲಾಖೆಯು ನಿರ್ಮಿಸಿರುವ ಅತಿಥಿ ಗೃಹ, ಬೆಟ್ಟದ ಆವರಣದಲ್ಲಿರುವ ದಾಸೋಹ ಮಠದಲ್ಲಿ ತಂಗಲು ವ್ಯವಸ್ಥೆ ಇದೆ. ನಿತ್ಯ ದಾಸೋಹ ಮಠ ಹಾಗೂ ದೇಗುಲ ಟ್ರಸ್ಟ್‌ ವತಿಯಿಂದ ಅನ್ನ ಪ್ರಸಾದದ ವ್ಯವಸ್ಥೆ ಇರುತ್ತದೆ. ಊಟೋಪಚಾರಕ್ಕೆ ಹೋಟೆಲ್‌ಗಳೂ, ಖಾಸಗಿ ವಸತಿಗೃಹಗಳೂ ಇವೆ.

ಬೆಟ್ಟದ ತಳಭಾಗದಿಂದ ಮೇಲಕ್ಕೆ ಲಿಫ್ಟ್‌ ಅಳವಡಿಸುವ ಕಾಮಗಾರಿಯು ಅರ್ಧಕ್ಕೆ ನಿಂತಿದೆ. ಹೀಗಾಗಿ ಭಕ್ತರು ಕಡಿದಾದ ಮೆಟ್ಟಿಲುಗಳನ್ನು ಹತ್ತಿಕೊಂಡೇ ಹೋಗಬೇಕು. ಹಾಗೆ ಹೋಗುವಾಗ ತುಸು ಎಚ್ಚರದಿಂದ ಹೆಜ್ಜೆ ಇಡಬೇಕು.

ತಲುಪುವುದು ಹೇಗೆ?

ರಾಮನಗರದಿಂದ ಕನಕಪುರಕ್ಕೆ ಹೋಗುವ ಮಾರ್ಗದಲ್ಲಿ ಸುಮಾರು 15 ಕಿ.ಮೀ ದೂರದಲ್ಲಿ ಈ ಬೆಟ್ಟ ಸಿಗುತ್ತದೆ. ಬೆಂಗಳೂರಿನಿಂದ 60 ಕಿ.ಮೀ ದೂರದಲ್ಲಿದೆ. ಅವ್ವೇರಹಳ್ಳಿ ಬಳಿ ಎಡಕ್ಕೆ ತಿರುಗಿದರೆ ಅಲ್ಲಿಂದ ಬೆಟ್ಟದ ತುದಿಯವರೆಗೂ ರಸ್ತೆ ಇದೆ. ಬಸ್‌, ಖಾಸಗಿ ವಾಹನಗಳ ಸೇವೆ ಲಭ್ಯವಿದೆ.ಏನೇನಿದೆ ಸುತ್ತಮುತ್ತ?

ರೇವಣ ಸಿದ್ದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದವರು ಅದೇ ಮಾರ್ಗವಾಗಿ ಮುಂದುವರಿದರೆ ಕನಕಪುರ ಸಿಗುತ್ತದೆ. ಅಲ್ಲಿಂದ ಸಂಗಮ, ಮೇಕೆದಾಟು, ಚುಂಚಿ ಜಲಪಾತ ಮೊದಲಾದ ಕಡೆಗಳಿಗೆ ಪ್ರವಾಸ ಮುಂದುವರಿ
ಸಬಹುದು. ಇಲ್ಲವೇ ಕನಕಪುರ ತಾಲ್ಲೂಕಿನ ಕಬ್ಬಾಳು ಕ್ಷೇತ್ರಕ್ಕೆ ಭೇಟಿ ನೀಡಬಹುದು. ರಾಮನಗರದ ಕಡೆಗೆ ಬಂದರೆ ರಾಮದೇವರ ಬೆಟ್ಟ, ಜಾನಪದ ಲೋಕಕ್ಕೂ ಹೋಗಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT