ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್ ಭವನ ಕಾಮಗಾರಿ ಕಳಪೆ: ಸಮಾಜ ಕಲ್ಯಾಣ ಇಲಾಖೆಯ ನಿರ್ಲಕ್ಷ್ಯ ಆರೋಪ

ಎಚ್.ಡಿ. ಕುಮಾರಸ್ವಾಮಿ ಪರಿಶೀಲನೆ
Last Updated 2 ಫೆಬ್ರುವರಿ 2022, 2:59 IST
ಅಕ್ಷರ ಗಾತ್ರ

ಚನ್ನಪಟ್ಟಣ: ‘ನಗರದಲ್ಲಿ ನಿರ್ಮಾಣವಾಗಿರುವ ಅಂಬೇಡ್ಕರ್ ಭವನದ ಕಾಮಗಾರಿ ಕಳಪೆಯಿಂದ ಕೂಡಿದೆ ಎಂಬ ದೂರುಗಳು ಕೇಳಿಬಂದಿದ್ದು, ಈ ಬಗ್ಗೆ ಸಂಬಂಧಪಟ್ಟ ಸಚಿವರ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಶಾಸಕ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.

ಮಂಗಳವಾರ ನಗರದ ಅಂಬೇಡ್ಕರ್ ಭವನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಕಾಮಗಾರಿ ಆರಂಭಗೊಂಡ ಹದಿನೈದು ವರ್ಷಗಳ ಬಳಿಕ ಭವನ ಉದ್ಘಾಟನೆ ಮಾಡಿದ್ದೇವೆ. ಇಲ್ಲಿನ ಕಾಮಗಾರಿಗಳ ಬಗ್ಗೆ ಅಧಿಕಾರಿಗಳು ಗಮನಕ್ಕೆ ತಂದಿಲ್ಲ ಎಂದರು.

‘ಭವನದ ಕಾಮಗಾರಿ ಬಗ್ಗೆ ಈಗ ದೂರುಗಳು ಬಂದಿವೆ. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಿಲ್ಲ. ಇದಕ್ಕೆ ನಾನು ಹೊಣೆಗಾರ ಅಲ್ಲ. ಭವನವನ್ನು ಸರಿಪಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಹೇಳಿದರು.

ಕಾಂಗ್ರೆಸ್‌ನ ಮೇಕೆದಾಟು ಪಾದಯಾತ್ರೆಯಿಂದ ಅಣೆಕಟ್ಟು ಕಟ್ಟಲು ಸಾಧ್ಯವಿಲ್ಲ. ಅವರ ಶಕ್ತಿ ಬೆಳೆಸಿಕೊಳ್ಳಲು ಪಾದಯಾತ್ರೆ ಮಾಡುತ್ತಿದ್ದಾರೆ. ಈಗ ಎರಡನೇ ಹಂತದ ಪಾದಯಾತ್ರೆ ಮಾಡುತ್ತಿದ್ದಾರೆ. ಈ ಸಮಸ್ಯೆ ಪಾದಯಾತ್ರೆಯಿಂದ ಬಗೆಹರಿಯುವುದಿಲ್ಲ ಎಂದರು.

‘ಡಿ.ಕೆ. ಸುರೇಶ್ ಸಂಸದರಾಗಿ ಏಳು ವರ್ಷ ಆಯ್ತು. ಕ್ಷೇತ್ರಕ್ಕೆ ಇವರ ಕೊಡುಗೆ ಏನಿದೆ, ಕೇವಲ ಚಿತಾಗಾರ ನೋಡಿಕೊಂಡು ಬಂದರು. ಇವರು ಸತ್ತೇಗಾಲದಿಂದ ಕನಕಪುರಕ್ಕೆ ನೀರು ತೆಗೆದುಕೊಂಡು ಹೋಗಲು ಯೋಜನೆ ಮಾಡಿದ್ದರು. ₹ 540 ಕೋಟಿ ವೆಚ್ಚದ ನೀರಾವರಿ ಯೋಜನೆ ಅದು. ಆದರೆ, ನಾನು ರಾಮನಗರ, ಚನ್ನಪಟ್ಟಣ, ಮಾಗಡಿಗೆ ನೀರು ಕೊಡಲು ಯೋಜನೆ ರೂಪಿಸಿದೆ. ಜನರ ಬದುಕು ಕಟ್ಟಿಕೊಡುವ ಯೋಜನೆ ನಮ್ಮದು. ನಮಗೂ ಇವರಿಗೂ ಇರುವ ವ್ಯತ್ಯಾಸ ಇದು’ ಎಂದರು.

‘ನಾನು ರಾಮನಗರ ಜಿಲ್ಲೆ ಮಾಡಿದಾಗ ಡಿ.ಕೆ. ಶಿವಕುಮಾರ್ ಜಿಲ್ಲೆ ಮಾಡಬಾರದಿತ್ತು. ಅದು ಮಹಾನ್ ಅಪರಾಧ ಅಂದಿದ್ದರು. ಕಲ್ಲುಬಂಡೆ ಒಡೆಯುವುದು ಇವರ ಕೆಲಸ. ರಾಮನಗರದಲ್ಲಿ ಕಲ್ಲು ಬಂಡೆ ಇಲ್ಲ. ಅದಕ್ಕೆ ಹಾಗೆ ಹೇಳಿದ್ದರು ಎನಿಸುತ್ತದೆ. ಇವರಂತೆ ನಾನು ಬೇರೆಯವರ ಆಸ್ತಿಗೆ ಬೇಲಿ ಹಾಕಿಕೊಂಡಿಲ್ಲ. ಇವರಿಂದ ರಾಜಕೀಯ ಮಾಡುವುದನ್ನು ಕಲಿಯಬೇಕಾಗಿಲ್ಲ. ಜನ ತೀರ್ಮಾನ ಮಾಡುತ್ತಾರೆ’ ಎಂದರು.

‘ಹಾರೋಹಳ್ಳಿ ತಾಲ್ಲೂಕು ಕೇಂದ್ರ ಮಾಡುವಲ್ಲಿ ನಾನು ಯಶಸ್ವಿಯಾಗಿದ್ದೇನೆ. ಸಂಬಂಧಿಸಿದ ಸಚಿವರ ಜತೆ ನಿರಂತರ ಸಂಪರ್ಕ ಮಾಡಿದ್ದೇನೆ. ಹಿಂದೆ ಕನಕಪುರಕ್ಕೆ ಜನ ಹೋಗಲು ಸಮಸ್ಯೆಯಾಗುತ್ತಿತ್ತು. ಕನಕಪುರ ಬಹಳ ದೂರ ಆಗುತ್ತಿತ್ತು. ಹಾಗಾಗಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದರು.

ಎಲ್.ಆರ್. ಶಿವರಾಮೇಗೌಡರ ಬಗ್ಗೆ ಮೃದು ಧೋರಣೆ ಇಲ್ಲ ಎಂದು ಕುಮಾರಸ್ವಾಮಿ ತಿಳಿಸಿದರು.

ಶಿವರಾಮೇಗೌಡರ ಬಗ್ಗೆ ಸಾಫ್ಟ್ ಆಗಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಕ್ಷಮೆ ಕೇಳಿದರೆ ನೋಡೋಣ ಎಂದಿದ್ದೇನೆ. ಇಲ್ಲಿ ಅಪರಾಧ ಆಗಿದೆ. ತೀರ್ಮಾನ ಆಗಿದೆ. ಕ್ಷಮೆ ಕೇಳಿದರೆ ಬದಲಾವಣೆ ಆಗುವ ವಿಚಾರ ನನ್ನ ಮುಂದೆ ಇಲ್ಲ. ನಾನು ಇದರಲ್ಲಿ ಸಾಫ್ಟ್ ಕಾರ್ನರ್ ಆಗುವ ಪ್ರಶ್ನೆ ಇಲ್ಲ’ ಎಂದರು.

ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಯಮುತ್ತು, ಒಕ್ಕಲಿಗರ ಸಂಘದ ನಿರ್ದೇಶಕ ದೇವರಾಜು, ಪಿಎಲ್‌ಡೊ ಬ್ಯಾಂಕ್ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ತಹಶೀಲ್ದಾರ್ ನಾಗೇಶ್, ಇಒ ಚಂದ್ರು, ಪೌರಾಯುಕ್ತ ಶಿವನಂಕಾರಿಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT