ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೋಷಿತರ ಧ್ವನಿಯಾದ ಮಹಾ ನಾಯಕ ಅಂಬೇಡ್ಕರ್: ಅನಿತಾ ಕುಮಾರಸ್ವಾಮಿ

ಜಿಲ್ಲಾಡಳಿತದಿಂದ ಅಂಬೇಡ್ಕರ್ ಜಯಂತಿ ಆಚರಣೆ: ಸಂವಿಧಾನ ಶಿಲ್ಪಿಗೆ ನಮನ
Last Updated 15 ಏಪ್ರಿಲ್ 2022, 4:28 IST
ಅಕ್ಷರ ಗಾತ್ರ

ರಾಮನಗರ: ಅಂಬೇಡ್ಕರ್ ಒಂದು ಸಮುದಾಯಕ್ಕೆ ಸೀಮಿತರಾದವರಲ್ಲ, ಪ್ರತಿಯೊಂದು ಸಮುದಾಯದ ಶೋಷಿತ ವರ್ಗದ ಏಳಿಗೆಗೆ ಹಾಗೂ ದೇಶದ ಅಭಿವೃದ್ಧಿಗೆ ದುಡಿದವರು ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ರಾಮನಗರ ನಗರಸಭೆ ಸಹಯೋಗದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಒಳ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ ಬಿ.ಆರ್. ಅಂಬೇಡ್ಕರ್ ಅವರ 131ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ನಮ್ಮ ದೇಶದ ಪ್ರತಿಯೊಬ್ಬರ ಸಮಾನತೆಯ ಪ್ರಗತಿಯ ಕನಸು ಕಂಡ ಮೇರು ನಾಯಕರಾಗಿದ್ದು , ಅವರ ಬದುಕು ಮತ್ತು ಆದರ್ಶ ಎಲ್ಲರಿಗೂ ಸ್ಫೂರ್ತಿ ಮತ್ತು ಜೀವನಕ್ಕೆ ದಾರಿ. ನಮ್ಮ ದೇಶದಲ್ಲಿ ಸಾಮರಸ್ಯ ಕಾಪಾಡಿಕೊಂಡು ಐಕ್ಯತೆಯಿಂದ ಸಮಾನವಾಗಿ ಬಾಳಬೇಕು. ನಾವು ಬದುಕಿ ಬೇರೆಯವರು ಬದುಕಲು ಅವಕಾಶ ಮಾಡಿಕೊಡಬೇಕು ಎಂದರು.

ಮಹಿಳೆಯರ ಪ್ರಗತಿ ಆಧಾರದ ಮೇಲೆ ದೇಶದ ರಾಜ್ಯದ ಪ್ರಗತಿ ನಿರ್ಧಾರವಾಗಿರುತ್ತದೆ. ಅಂಬೇಡ್ಕರ್ ಅವರ ತತ್ವ ವಿಚಾರಗಳು ಮುಂದಿನ ಪೀಳಿಗೆಗೆ ತಿಳಿಸುವಂತಾಗಬೇಕು ಎಂದು ನುಡಿದರು.

ಜಿಲ್ಲಾಧಿಕಾರಿ ಕೆ. ರಾಕೇಶ್ ಕುಮಾರ್ ಮಾತನಾಡಿ, ಅಂಬೇಡ್ಕರ್ ಅಪಾರ ಜ್ಞಾನ ಹೊಂದಿದ್ದು ಶಿಕ್ಷಣಕ್ಕೆ ಹೆಚ್ಚು ಹೊತ್ತು ನೀಡಿದರು. ವಿಶ್ವದಲ್ಲಿ ಮೊದಲು ಭಾರತದಲ್ಲಿ ಮಹಿಳೆಯರ ಸಮಾನ ಅವಕಾಶ ಕಲ್ಪಿಸಿಕೊಡಬೇಕು ಎಂದ ಸದುದ್ದೇಶ ಹೊಂದಿದ್ದರು. ಸಂವಿಧಾನ ರಚನೆಯ 55 ವರ್ಷಗಳ ನಂತರ 2005ರ ಸಮಾನ ಶಿಕ್ಷಣ ನೀತಿ ಜಾರಿಗೆ ಬಂದಿದ್ದು ಈ ನೀತಿಯು ಯಾವುದೇ ವರ್ಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಜಾರಿಗೆ ತರಲಾಯಿತು. ನಮ್ಮ ದೇಶದ ರೂಪಾಯಿ ಮೌಲ್ಯವನ್ನು ಡಾಲರ್ ನ ಸರಿ ಸಮನಾಗಿ ಹೆಚ್ಚಿಸುವಲ್ಲಿ ಶ್ರಮಿಸಿದವರು. ಕೃಷಿ, ಕೈಗಾರಿಕೆಗಳ ಅಭಿವೃದ್ದಿಗೆ ಹಾಗೂ ದೇಶದ ಆರ್ಥಿಕತೆಗೆ ಶ್ರಮಿಸಿದರು ಎಂದು ತಿಳಿದರು.

ಅವರ ವಿಚಾರಧಾರೆಗಳನ್ನು ನಾವು ಬೆಳೆಸುವ ಕೆಲಸವಾಗಬೇಕು. ಸಮಾಜದಲ್ಲಿ ಯಾವುದೇ ವ್ಯಕ್ತಿ ನ್ಯಾಯದಿಂದ ವಂಚಿತರಾಗಬರದು. ಪ್ರತಿಯೊಬ್ಬರನ್ನು ಸಮಾನ ದೃಷ್ಟಿಯಿಂದ ಕಾಣಬೇಕು ಎಂದರು.

ಬೆಂಗಳೂರು ವಿಶ್ವವಿದ್ಯಾಲಯದ ರಾಮನಗರ ಸ್ನಾತಕೋತ್ತರ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ. ಕೂಡ್ಲೂರು ರವಿಕುಮಾರ್ ಮಾತನಾಡಿ, ಅಂಬೇಡ್ಕರ್ ಅವರ ಜೀವನ ಒಂದು ಸಂಘರ್ಷ ಹಾಗೂ ಸ್ವಾಭಿಮಾನದ ಕಥೆಯಾಗಿದ್ದು ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಮತದಾನದ ಹಕ್ಕನ್ನು ಹಾಗೂ ಸಮಾನತೆಯನ್ನು ಕಲ್ಪಿಸಿಕೊಟ್ಟವರು. ವಿಶ್ವದ ಶ್ರೇಷ್ಠ ಜ್ಞಾನಿಗಳಲ್ಲಿ ಅಂಬೇಡ್ಕರ್ ಪ್ರಮುಖರಾಗಿದ್ದಾರೆ. ವಿಶ್ವಸಂಸ್ಥೆಯು ಅವರ ಜನ್ಮ ದಿನವನ್ನು ದಿನವನ್ನು ವಿಶ್ವ ಜ್ಞಾನ ದಿನ ಎಂದು ಘೋಷಿಸಿದೆ. ಅವರ ತತ್ವ ಹಾಗೂ ಆಲೋಚನೆಗಳು ಇಂದಿಗೂ ಜೀವಂತವಾಗಿದೆ ಎಂದರು.

ವಿದೇಶಗಳಲ್ಲಿ ಅಂಬೇಡ್ಕರ್ ಅವರ ತತ್ವಗಳಿಗೆ ಮಹತ್ವವಿದ್ದು, ಗಾಂಧೀಜಿ ನಂತರದ ಪ್ರಮುಖ ವ್ಯಕ್ತಿ ಅಂಬೇಡ್ಕರ್ ಆಗಿದ್ದಾರೆ. ಅಮರ್ಥ್ಯಸೇನ್ ಅವರು ಅಂಬೇಡ್ಕರ್ ಅರ್ಥಶಾಸ್ತ್ರಕ್ಕೆ ತಂದೆ ಇದ್ದಂತೆ, ಅವರ ಕೊಡುಗೆ ಅರ್ಥಶಾಸ್ತ್ರಕ್ಕೆ ಅಪಾರವಾದುದು ಎಂದು ತಿಳಿಸಿದರು.

ನೆಲ್ಸನ್ ಮಂಡೇಲ ಭಾರತದಿಂದ ನಾನು ತೆಗೆದು ಹೋಗಲು ಬಯಸಿದರೆ ಅದು ಸಂವಿಧಾನ ಎಂದರು. ಅಂಬೇಡ್ಕರ್ ಅವರ ವಿಚಾರಧಾರೆ ಕುರಿತು ಓದಿದರೆ ವಿವಿಧ ಪ್ರಪಂಚ ಸುತ್ತಾಡಿದಂತೆ ಎಂದು ಹಲವಾರು ವಿದ್ವಾಂಸರು ಅಂಬೇಡ್ಕರ್ ಕುರಿತು ಬಣ್ಣಿಸಿದ್ದಾರೆ ಎಂದು ವಿವರಿಸಿದರು.

ರಾಮನಗರ ನಗರಸಭೆ ಅಧ್ಯಕ್ಷೆ ಬಿ.ಸಿ. ಪಾರ್ವತಮ್ಮ ಮಾತನಾಡಿ, ಅಂಬೇಡ್ಕರ್ ಸಮಾಜದಲ್ಲಿ ಶೋಷಿತ ಸಮುದಾಯ ಹಾಗೂ ಅವರ ಒಳಿತಿಗಾಗಿ ದುಡಿದವರು. ಸಮುದಾಯಗಳಲ್ಲಿ ಸಮಾನತೆ ಕಲ್ಪಿಸುವಲ್ಲಿ ಕಾರಣೀಭೂತರಾದವರು. ಅವರ ವಿಚಾರಗಳನ್ನು ಮುಂದಿನ ದಿನಗಳಲ್ಲಿ ಉಳಿಸಿ ಬೆಳೆಸುವಂಥ ಕೆಲಸ ಮಾಡಬೇಕು ಎಂದರು.

ಬೆಂಗಳೂರಿನ ನಾಗಸೇನಾ ಬುದ್ದವಿಹಾರ, ಕೊಳ್ಳೇಗಾಲದ ಚೇತವನ ಬುದ್ದವಿಹಾರ ಬೌದ್ಧ ಬಿಕ್ಕುಗಳು ಬುದ್ದವಂದನೆ ಮಾಡಿದರು. ಇದೇ ಸಂದರ್ಭದಲ್ಲಿ ಅಂಬೇಡ್ಕರ್ ಪ್ರತಿಮಾ ನಿರ್ಮಾಣ ಸಮಿತಿ ಸದಸ್ಯರಾದ ಶಿವಕುಮಾರ ಸ್ವಾಮಿ, ರಾಂಪುರ ನಾಗೇಶ್, ಚೆಲುವರಾಜು, ಗುಡ್ಡೆ ವೆಂಕಟೇಶ್, ಎಂ.ಜಗದೀಶ್, ಕೋಟೆ ಕುಮಾರ್, ಶಿವಪ್ರಕಾಶ್, ಶಿವಲಿಂಗಯ್ಯ ಕನಕಪುರ, ಶಿವಶಂಕರ್ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಟಿ.ಕೆ. ರಮೇಶ್, ಉಪವಿಭಾಗಾಧಿಕಾರಿ ಮಂಜುನಾಥ್, ರಾಮನಗರ ತಹಶೀಲ್ದಾರ್ ವಿಜಯ್ ಕುಮಾರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುರಳೀಧರ್, ರಾಮನಗರ ನಗರಸಭೆ ಉಪಾಧ್ಯಕ್ಷೆ ಜಯಲಕ್ಷಮ್ಮ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಲಲಿತಾ ಬಾಯಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ. ಸತೀಶ್, ಜಿಲ್ಲಾ ಜಾಗೃತಿ ಸಮಿತಿ ಸದಸ್ಯರು ಹಾಗೂ ಮುಖಂಡರು ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT