ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತಂಬಾಕು ಮುಕ್ತ ಸಮಾಜಕ್ಕೆ ಕೈಜೋಡಿಸಿ’

Last Updated 26 ಏಪ್ರಿಲ್ 2019, 15:36 IST
ಅಕ್ಷರ ಗಾತ್ರ

ರಾಮನಗರ: ‘ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸಬೇಕು. ತಂಬಾಕಿನಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಎಚ್ಚರ ವಹಿಸಬೇಕು’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹೊನ್ನಸ್ವಾಮಿ ಕಿವಿಮಾತು ಹೇಳಿದರು.

ಆರೋಗ್ಯ ಇಲಾಖೆ, ತಂಬಾಕು ನಿಯಂತ್ರಣ ಘಟಕದ ಸಹಯೋಗದಲ್ಲಿ ಕೋಟ್ಪಾ -2003ರ ಕಾಯ್ದೆ ಹಾಗೂ ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆಗಳು ಎಂಬ ವಿಚಾರದ ಕುರಿತು ನಗರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತರಬೇತಿ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ತಂಬಾಕು ನಿಷೇಧಕ್ಕೆ ಕಟ್ಟುನಿಟ್ಟಿನ ಕಾನೂನುಗಳನ್ನು ಜಾರಿಗೆ ತರಲಾಗಿದ್ದು, ಪ್ರಾಣಕ್ಕೆ ಹಾನಿ ಉಂಟುಮಾಡುವಂತಹ ಉತ್ಪನ್ನಗಳ ಮಾರಾಟಕ್ಕೆ ಸರ್ಕಾರ ಕಡಿವಾಣ ಹಾಕಬೇಕು ಎಂದು ಅಭಿಪ್ರಾಯಪಟ್ಟರು.

ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ ಎಂದು ಬೀಡಿ, ಸಿಗರೇಟ್ ಮತ್ತಿತರ ತಂಬಾಕು ಉತ್ಪನ್ನಗಳ ಮೇಲೆ ಹಾಕಬೇಕು. ತಂಬಾಕು ಮತ್ತು ಅದರ ಉತ್ಪನ್ನಗಳಿಂದಾಗುವ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಕಾರ್ಯಕ್ರಮಗಳು ನಡೆಯಬೇಕು ಎಂದು ಹೇಳಿದರು. ಸಾರ್ವಜನಿಕ ಪ್ರದೇಶಗಳಾದ ಬಸ್ ನಿಲ್ದಾಣ, ಹೋಟೆಲ್, ಶಾಲಾ- ಕಾಲೇಜು ಪ್ರದೇಶ ಮತ್ತು ಸರ್ಕಾರಿ ಕಚೇರಿಗಳು ಹಾಗೂ ಚಲನಚಿತ್ರ ಮಂದಿರ ಮತ್ತಿತರ ಪ್ರದೇಶಗಳಲ್ಲಿ ಈ ಉತ್ಪನ್ನಗಳ ಮಾರಾಟ ನಿಷೇಧ ಇದೆ. ಸಾರ್ವಜನಿಕರು ಹಾಗೂ ವರ್ತಕರು ಈ ಬಗ್ಗೆ ಎಚ್ಚರ ವಹಿಸಬೇಕು ಎಂದರು.

‘ವಿಶ್ವ ಆರೋಗ್ಯ ಸಂಸ್ಥೆಯು ತಂಬಾಕು ಸೇವನೆಯಿಂದ ಉಂಟಾಗುವ ರೋಗ ಮತ್ತು ಸಾವುಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಪ್ರತಿ ವರ್ಷ ಮೇ 31ನ್ನು ವಿಶ್ವ ತಂಬಾಕು ವಿರೋಧಿ ದಿನವಾಗಿ ವಿಶ್ವದಾದ್ಯಂತ ಆಚರಿಸಲಾಗುತ್ತದೆ. ತಂಬಾಕು ಸೇವನೆ ಆರೋಗ್ಯಕ್ಕೆ ಮಾರಕ ಎಂದು ತಿಳಿದಿದ್ದರೂ ಯುವ ಜನಾಂಗ ಇದಕ್ಕೆ ಹೆಚ್ಚು ಬಲಿಯಾಗುತ್ತಿದ್ದಾರೆ’ ಎಂದು ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಸ್.ಶಂಕರಪ್ಪ ಬೇಸರ ವ್ಯಕ್ತಪಡಿಸಿದರು.

ರಾಮನಗರಕ್ಕೆ ತಂಬಾಕಿನ ಮತ್ತೊಂದು ರೂಪವಾದ ಹುಕ್ಕಾ ಲಗ್ಗೆ ಇಟ್ಟಿದ್ದು, ಯುವ ಜನಾಂಗವು ಕೆಟ್ಟ ಅಭ್ಯಾಸಗಳಿಂದ ದೂರವಿರಬೇಕು ಎಂದರು.

ಕಾರ್ಯಾಗಾರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಆರ್. ಅಮರ್‌ನಾಥ್‌, ಜಿಲ್ಲಾ ತರಬೇತಿ ಕೇಂದ್ರದ ಪ್ರಾಚಾರ್ಯೆ ಡಾ.ಮಂಜುಳಾ, ಜಿಲ್ಲಾ ಆರೋಗ್ಯ ವೀಕ್ಷಣಾಧಿಕಾರಿ ಎಚ್.ಎಂ. ದಕ್ಷಿಣಮೂರ್ತಿ, ಜಿಲ್ಲಾ ಸಲಹೆಗಾರರಾದ ಡಾ.ಹನುಮಂತರಾಯಪ್ಪ, ಆರೋಗ್ಯ ಇಲಾಖೆಯ ಸಿಬ್ಬಂದಿ, ಎನ್ಎಸ್ಎಸ್, ಎನ್‌ಸಿಸಿ, ರೆಡ್‌ಕ್ರಾಸ್, ರೆಡ್ ರಿಬ್ಬನ್ ಮತ್ತು ಮಹಿಳಾ ಆಯೋಗದ ಕಾರ್ಯಕ್ರಮಾಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT