ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೃಷಿಯಲ್ಲಿ ನೀರಿನ ಮಿತವ್ಯಯ ಅತ್ಯವಶ್ಯ’

ಎಪಿಎಂಸಿ: ಶಾಸಕಿ ಅನಿತಾ ಕುಮಾರಸ್ವಾಮಿರಿಂದ ರೈತ ಭವನ, ಹರಾಜು ಕಟ್ಟೆಯ ಉದ್ಘಾಟನೆ
Last Updated 24 ಜೂನ್ 2019, 12:11 IST
ಅಕ್ಷರ ಗಾತ್ರ

ರಾಮನಗರ: ಭವಿಷ್ಯದಲ್ಲಿ ನೀರಿನ ಬೇಡಿಕೆ ಹೆಚ್ಚಾಗಲಿದ್ದು, ಕೃಷಿಗೂ ನೀರಿನ ಅಭಾವ ಕಾಡುವ ಸ್ಥಿತಿ ಎದುರಾಗಲಿದೆ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದರು.

ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಮಾರುಕಟ್ಟೆ ಪ್ರಾಂಗಣದ ದಿನಸಿ ವಿಭಾಗದಲ್ಲಿ ಸಮಿತಿ ನಿಧಿಯಿಂದ ನಿರ್ಮಿಸಿರುವ ರೈತ ಭವನ ಹಾಗೂ ಆರ್ ಕೆ ವಿವೈ ಯೋಜನೆಯಡಿ ನಿರ್ಮಿಸಿರುವ ಹರಾಜು ಕಟ್ಟೆಯನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ಕೃಷಿಯಲ್ಲಿ ಹನಿ ನೀರಾವರಿ ಅಳವಡಿಸಿಕೊಳ್ಳುವುದು ಸೂಕ್ತ. ಇದಕ್ಕಾಗಿ ಪ್ರತ್ಯೇಕವಾಗಿ ಅನುದಾನ ಮೀಸಲಿಡಲು ಕುಮಾರಸ್ವಾಮಿ ಚಿಂತನೆ ನಡೆಸಿದ್ದಾರೆ ಎಂದು ತಿಳಿಸಿದರು. ಕೃಷಿಯಲ್ಲಿ ರೈತರು ಹೂಡಿದ ಬಂಡವಾಳಕ್ಕೆ ಲಾಭ ದೊರಕಬೇಕು. ಇದಕ್ಕಾಗಿ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಸಿಗಬೇಕು. ಆಗ ಮಾತ್ರ ಕೃಷಿಕರು ಆರ್ಥಿಕವಾಗಿ ಸದೃಢರಾಗಲು ಸಾಧ್ಯ ಎಂದರು.

ನೆರೆಯ ಆಂಧ್ರಪ್ರದೇಶ ಹಾಗೂ ಇಸ್ರೇಲ್ ದೇಶದಲ್ಲಿನ ಕೃಷಿ ಪದ್ಧತಿಯನ್ನು ಮುಖ್ಯಮಂತ್ರಿಗಳು ಅಧ್ಯಯನ ಮಾಡಿದ್ದಾರೆ. ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಜಾರಿಗೆ ತಂದು ಬದಲಾವಣೆ ತರುವ ಉದ್ದೇಶ ಹೊಂದಿದ್ದಾರೆ. ರಾಮನಗರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಮಾವು ಸಂಸ್ಕರಣ ಘಟಕ ಆರಂಭಿಸಲಾಗುತ್ತಿದೆ. ಇದರಿಂದ ಮಾವು ಬೆಳೆಗಾರರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ದೊರೆಸ್ವಾಮಿ ಮಾತನಾಡಿ, ಮಾರುಕಟ್ಟೆಯಲ್ಲಿ ಕೃಷಿಕರಿಗೆ ಅನೇಕ ಸಮಸ್ಯೆಗಳು ಕಾಡುತ್ತಿದ್ದವು. ಅವೆಲ್ಲವನ್ನು ಹಂತ ಹಂತವಾಗಿ ಬಗೆಹರಿಸಿ ಸುಧಾರಣೆ ತಂದಿದ್ದೇವೆ. ಸೊಪ್ಪು, ತರಕಾರಿಯನ್ನು ಪ್ರತ್ಯೇಕವಾಗಿ ಮಾರಾಟ ಮಾಡಲು ಹರಾಜು ಕಟ್ಟೆ , ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಟ್ಯಾಂಕ್ ನಿರ್ಮಾಣ ಮಾಡಲಾಗಿದೆ. ಮೆಗಾಮಂಡಿ ಸ್ಥಾಪನೆ ಹಾಗೂ ಎಪಿಎಂಸಿಯಿಂದ ಮಾಗಡಿಯನ್ನು ಬೇರ್ಪಡಿಸಬೇಕು ಎಂದು ಮನವಿ ಮಾಡಿದರು.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ. ಅಶ್ವತ್ಥ್, ಎಪಿಎಂಸಿ ಉಪಾಧ್ಯಕ್ಷ ಗೋಪಾಲ್, ನಿರ್ದೇಶಕರಾದ ಪುಟ್ಟರಾಮಯ್ಯ , ನಿರ್ದೇಶಕರಾದ ಶಿವಕುಮಾರ್ , ರಮೇಶ್, ವಿ. ವೆಂಕಟರಂಗಯ್ಯ, ಮಾರೇಗೌಡ, ಗಂಗರಾಜಣ್ಣ, ಕಾರ್ಯದರ್ಶಿ ಬಸವರಾಜು, ಜೆಡಿಎಸ್ ಮುಖಂಡರಾದ ಎಚ್.ಎಲ್. ನಾಗರಾಜ್, ಡಿ. ನರೇಂದ್ರ, ಎಸ್.ಆರ್. ರಾಮಕೃಷ್ಣಯ್ಯ, ಕೆ. ಶಿವಲಿಂಗಯ್ಯ, ಲಿಂಗೇಶ್ ಕುಮಾರ್ ಇದ್ದರು.

ರೇಷ್ಮೆ ಅಧಿಕಾರಿ ವಿರುದ್ಧ ದೂರು
ಎಪಿಎಂಸಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರನ್ನು ಕೆಲ ರೈತರು ಭೇಟಿಯಾಗಿ ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿನ ಅವ್ಯವಸ್ಥೆಯ ಬಗ್ಗೆ ದೂರಿದರು.

‘ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಕಾರುಬಾರು ಜಾಸ್ತಿಯಾಗಿದೆ. ಅಧಿಕಾರಿಗಳೇ ದಲ್ಲಾಳಿಗಳೊಂದಿಗೆ ಸೇರಿಕೊಂಡು ರೈತರಿಗೆ ಮೋಸ ಮಾಡುತ್ತಾರೆ. ಇತ್ತೀಚೆಗೆ ಪಾಸ್‍ ಬುಕ್ ತರದ ರೈತನಿಗೆ ರೇಷ್ಮೆ ಹರಾಜಿಗೆ ಅವಕಾಶ ಕೊಡದೆ ಆತನಿಗೆ ನಷ್ಟ ಉಂಟಾಗುವಂತೆ ಮಾಡಿದ್ದಾರೆ. ಇದಕ್ಕೆ ರೇಷ್ಮೆ ಗೂಡು ಇಲಾಖೆಯ ಉಪ ನಿರ್ದೇಶಕರ ನಿರ್ಲಕ್ಷ್ಯವೇ ಕಾರಣ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ರೈತ ಮುಖಂಡರಾದ ತುಂಬೇನಹಳ್ಳಿ ಶಿವಕುಮಾರ್, ಮೆಳೆಹಳ್ಳಿ ಕುಮಾರ್ ಒತ್ತಾಯಿಸಿದರು.

₹21 ಕೋಟಿ ಅನುದಾನಕ್ಕೆ ಮನವಿ
ಎಪಿಎಂಸಿಯಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಒಟ್ಟು ₹21 ಕೋಟಿ ಅನುದಾನ ನೀಡುವಂತೆ ಆಡಳಿತ ಮಂಡಳಿಯ ಸದಸ್ಯರು ಶಾಸಕಿ ಅನಿತಾ ಕುಮಾರಸ್ವಾಮಿ ಮೂಲಕ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.

ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿನ ಆಂತರಿಕ ರಸ್ತೆಗಳಿಗೆ ಕಾಂಕ್ರೀಟ್ ಅಳವಡಿಸುವ ಕಾಮಗಾರಿಗೆ ₹10 ಕೋಟಿ, ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿನ ಚರಂಡಿಗಳನ್ನು ಬಾಕ್ಸ್-ಡ್ರೈ ಮಾದರಿಯಾಗಿ ಮಾರ್ಪಡಿಸುವ ಕಾಮಗಾರಿಗೆ ₹2 ಕೋಟಿ, ಪ್ರಾಂಗಣದಲ್ಲಿ ನಿರ್ಮಿಸಿರುವ ರೈತ ಭವನದಲ್ಲಿ ವಿಶ್ರಾಂತಿ ಕೊಠಡಿಗಳ ನಿರ್ಮಾಣಕ್ಕೆ ₹1 ಕೋಟಿ, ಕಮಾನು, ಕಾಂಪೌಂಡ್‌ ವಿಸ್ತರಣೆ, ಹೈಮಾಸ್ಟ್‌ ದೀಪಗಳ ಅಳವಡಿಕೆಗೆ ತಲಾ ₹1 ಕೋಟಿ, ಮಾರುಕಟ್ಟೆಯಲ್ಲಿ ಕಾರ್ಯ ನಿರ್ವಹಿಸುವ ಹಮಾಲರಿಗೆ ಸುಸಜ್ಜಿತವಾದ ವಸತಿ ಗೃಹಗಳನ್ನು ನಿರ್ಮಿಸಲು ಮೂರು ಎಕರೆ ಜಾಗ ಮತ್ತು ₹5 ಕೋಟಿ ನೀಡಬೇಕು ಎಂದು ಎಪಿಎಂಸಿ ಅಧ್ಯಕ್ಷ ದೊರೆಸ್ವಾಮಿ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT