ನಿರಂಕುಶ, ವೈಚಾರಿಕ ಮತಿಗಳಾಗಿ: ಡಾ.ಚಕ್ಕೆರೆ ಶಿವಶಂಕರ್

ಭಾನುವಾರ, ಮೇ 26, 2019
32 °C
ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ

ನಿರಂಕುಶ, ವೈಚಾರಿಕ ಮತಿಗಳಾಗಿ: ಡಾ.ಚಕ್ಕೆರೆ ಶಿವಶಂಕರ್

Published:
Updated:
Prajavani

ಬಿಡದಿ: ‘ಗುರುವಿನ ಮಾರ್ಗದರ್ಶನ ಹಾಗೂ ಸಹಪಾಠಿಗಳ ಪ್ರೇರಣೆ ಇದ್ದಾಗ ವಿದ್ಯಾರ್ಥಿಗಳು ಸಮಾಜದ ಉತ್ತಮ ಪ್ರಜೆಯಾಗಿ ರೂಪುಗೊಳ್ಳಲು ಸಾಧ್ಯ’ ಎಂದು ಜಾನಪದ ಹಿರಿಯ ವಿದ್ವಾಂಸ ಡಾ.ಚಕ್ಕೆರೆ ಶಿವಶಂಕರ್ ಅಭಿಪ್ರಾಯಪಟ್ಟರು.

ಶನಿವಾರ ಬಿಡದಿ ಜ್ಞಾನ ವಿಕಾಸ ವಿದ್ಯಾಸಂಘದ ಆಶ್ರಯದಲ್ಲಿ ಜ್ಞಾನ ವಿಕಾಸ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಸ್ಟಡೀಸ್ ಅಂಡ್ ಕಾಮರ್ಸ್ ವಿಭಾಗದ ವತಿಯಿಂದ ನಡೆದ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಶಿಕ್ಷಕರ ಕೊಡುಗೆ: ‘ಪ್ರತಿಯೊಬ್ಬ ವಿದ್ಯಾರ್ಥಿ ಯಶಸ್ಸಿನಲ್ಲಿ ಗುರುವಿನ ಪಾತ್ರ ಮಹತ್ವದ್ದಾಗಿದೆ. ಟಿ.ಎಸ್‌.ವೆಂಕಣ್ಣಯ್ಯ ಅವರಂತಹ ಗುರುವಿನ ಮಾರ್ಗದರ್ಶನದಿಂದ ಕುವೆಂಪು ಅವರು ‘ರಾಮಾಯಣ ದರ್ಶನಂ’ ಗ್ರಂಥ ರಚಿಸಲು ಸಾಧ್ಯವಾಯಿತು. ಅಂಧಾನುಕರಣೆಯಿಂದಾಗಿ ಮನುಷ್ಯನ ಬದುಕು ಮೌಢ್ಯದ ಕಡೆಗೆ ವಾಲುತ್ತಿದೆ. ವಿದ್ಯಾರ್ಥಿಗಳು ಜ್ಞಾನದ ಪರವಾಗಬೇಕು. ಸ್ವಾರ್ಥ ಮತ್ತು ದುರಾಸೆಯಿಂದ ಹೊರಗುಳಿದು ನಿರಂಕುಶಮತಿ ಹಾಗೂ ವೈಚಾರಿಕ ಮತಿಗಳಾಬೇಕು’ ಎಂದು ಸಲಹೆ ನೀಡಿದರು.

ಬೆಟ್ಟದ ಹೂವು ನಾಡಿಗೆ: ಜ್ಞಾನ ವಿಕಾಸ ವಿದ್ಯಾಸಂಘದ ಅಧ್ಯಕ್ಷರಾದ ವಿಧಾನ ಪರಿಷತ್‌ ಸದಸ್ಯ ಸಿ.ಎಂ.ಲಿಂಗಪ್ಪ ಮಾತನಾಡಿ ‘ಚಕ್ಕೆರೆ ಶಿವಶಂಕರ್ ಕಾಡು ಹೂವಾಗಿದ್ದರು. ಊರು ಮಲ್ಲಿಗೆಯಾಗಿ, ನಂತರ ನಾಡು ಮಲ್ಲಿಗೆ ಆದರು. ಅವರು ಜಾನಪದ ಕಲೆಗಳ ಬಗ್ಗೆ ಅರಿತಿರುವ ವಿದ್ವತ್ತನ್ನು ಗಮನಿಸಿ ರಾಜ್ಯ ಸರ್ಕಾರ ‘ಗ್ರಾಮ ಚರಿತ್ರಾ ಕೋಶ’ ಕೈಪಿಡಿ ರಚಿಸುವ ಹೊಣೆ ನೀಡಿದೆ. ರಾಜ್ಯದ 30 ಜಿಲ್ಲೆಗಳಲ್ಲಿ ಜಾನಪದ ಕಲೆಗಳ ವೈವಿಧ್ಯತೆ ಸಮಗ್ರ ಚಿತ್ರಣ ಸಂಗ್ರಹಿಸಿ ಸಂಪುಟ ಹೊರತರುವ ಜವಾಬ್ದಾರಿ ನೀಡಿರುವುದು ಅರ್ಥಪೂರ್ಣ’ಎಂದು ಶ್ಲಾಘಿಸಿದರು.

ದಾಸರ ಕೀರ್ತನೆ ‘ತೊರೆದು ಜೀವಿಸಬಹುದೆ’ ಗೀತೆಯನ್ನು ಸಿ.ಎಂ.ಲಿಂಗಪ್ಪ ಹಾಡಿ ವಿದ್ಯಾರ್ಥಿಗಳನ್ನು ರಂಜಿಸಿದರು. ಅಂತಿಮ ವರ್ಷದ ವಿದ್ಯಾರ್ಥಿಗಳು ಅಭಿಪ್ರಾಯ ಹಂಚಿಕೊಂಡರು.

ಜಾನಪದ ವಿದ್ವಾಂಸ ಡಾ.ಚಕ್ಕೆರೆ ಶಿವಶಂಕರ, ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಬಿ.ಟಿ ನಾಗೇಶ್ ಅವರನ್ನು ಸನ್ಮಾನಿಸಲಾಯಿತು. ಪ್ರಥಮ ಮತ್ತು ದ್ವಿತೀಯ ವರ್ಷದ ಪದವಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಲಾಯಿತು.

ಜ್ಞಾನ ವಿಕಾಸ ಸಂಘದ ಖಜಾಂಚಿ ಬಿ.ಜೆ ಹೊನ್ನಶೆಟ್ಟಿ, ಕಾರ್ಯದರ್ಶಿ ಬಿ.ಆರ್.ನಾಗರಾಜು, ನಿರ್ದೇಶಕರಾದ ಬಿ.ಎನ್ ಗಂಗಧಾರಯ್ಯ, ಎಲ್.ಸತೀಶ್ ಚಂದ್ರ, ಪ್ರಾಂಶುಪಾಲರಾದ ಡಾ.ರಾಮ್‌ಪ್ರಸಾದ್, ಟಿ.ರೂಪ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !