ಸೋಮವಾರ, ಅಕ್ಟೋಬರ್ 25, 2021
26 °C

ರಾಮನಗರ: ವಸತಿ ಶಾಲೆ ವಿದ್ಯಾರ್ಥಿನಿಯರಿಗೆ ಥಳಿತ; ಮುಖ್ಯ ಶಿಕ್ಷಕನ ವಿರುದ್ಧ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಜಿಲ್ಲೆಯ ಮಾಗಡಿ ತಾಲ್ಲೂಕಿನ ಹುಲಿಕಟ್ಟೆಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಭಾರ ಪ್ರಾಚಾರ್ಯ ಕೃಷ್ಣಮೂರ್ತಿ ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಥಳಿಸಿದ್ದಾಗಿ ಅಲ್ಲಿನ ವಿದ್ಯಾರ್ಥಿನಿಯರು ದೂರಿದ್ದಾರೆ.

ಈ ಆರೋಪದ ಬೆನ್ನಲ್ಲೇ ಪ್ರಾಚಾರ್ಯರನ್ನು ಪ್ರಭಾರ ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ.

‘ಗುರುವಾರ ರಾತ್ರಿ ಊಟದ ಬಳಿಕ 8.30ರಿಂದ 10ಗಂಟೆಯವರೆಗೂ ಎಲ್ಲ ವಿದ್ಯಾರ್ಥಿನಿಯರನ್ನೂ ಸಾಲಾಗಿ ನಿಲ್ಲಿಸಿದ್ದರು. ಕಾಪಿ ರೈಟಿಂಗ್‌ ಮಾಡಿಲ್ಲ ಎಂಬ ಕಾರಣಕ್ಕೆ ಎಲ್ಲರಿಗೂ ಬಾಸುಂಡೆ ಬರುವಂತೆ ಥಳಿಸಿದ್ದಾರೆ. ತಲೆಕೂದಲು ಹಿಡಿದು ಬೆನ್ನಿಗೆ ಹೊಡೆಯುತ್ತಾರೆ. ಶಾಲೆಯಲ್ಲಿನ ಶಿಕ್ಷಕಿಯರನ್ನೂ ಏಕವಚನದಲ್ಲಿ ಬಯ್ಯುತ್ತಾರೆ. ಹೀಗಾಗಿ ಅವರನ್ನು ಬದಲಾಯಿಸಬೇಕು’ ಎಂದು ವಸತಿ ಶಾಲೆಯ ವಿದ್ಯಾರ್ಥಿನಿಯರು ಶನಿವಾರ ಮಾಧ್ಯಮದವರು ಹಾಗೂ ಸಾರ್ವಜನಿಕರ ಮುಂದೆ ಅಳಲು ತೋಡಿಕೊಂಡರು.

ಮಾಗಡಿ ಶಾಸಕ ಎ. ಮಂಜುನಾಥ್‌ ಸಹ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದು ಕ್ರಮಕ್ಕೆ ಆಗ್ರಹಿಸಿದ್ದರು.

ಭೇಟಿ: ವಿದ್ಯಾರ್ಥಿನಿಯರ ದೂರಿನ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ವಸತಿ ಶಾಲೆಗೆ ಭೇಟಿ ನೀಡಿ ವಿಚಾರಣೆ ನಡೆಸಿದರು.

‘ವಿದ್ಯಾರ್ಥಿನಿಯರಿಗೆ ಹೊಡೆದದ್ದು ನಿಜ. ಆದರೆ ಅವಾಚ್ಯ ಶಬ್ದಗಳಿಂದ ನಿಂದಿಸಿಲ್ಲ. ಅವರೊಂದಿಗೆ ಅಸಭ್ಯವಾಗಿ ವರ್ತಿಸಿಲ್ಲ’ ಎಂದು ಕೃಷ್ಣಮೂರ್ತಿ ಅಧಿಕಾರಿಗಳ ಎದುರು ಒಪ್ಪಿಕೊಂಡರು ಎನ್ನಲಾಗಿದೆ. ಪ್ರಾಚಾರ್ಯರ ವಿರುದ್ಧ ಶಿಸ್ತುಕ್ರಮ ಸಂಬಂಧ ಜಿ.ಪಂ. ಸಿಇಒ ಅವರಿಗೆ ವರದಿ ನೀಡುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು.

ಬಿಡುಗಡೆ: ಶಾಲೆಯ ಪ್ರಾಚಾರ್ಯರು ಬೇರೆಡೆಗೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಅದೇ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯ ಕೃಷ್ಣಮೂರ್ತಿ ಅವರಿಗೆ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ಉಸ್ತುವಾರಿಯನ್ನೂ ನೀಡಲಾಗಿತ್ತು. ಇದೀಗ ಅವರನ್ನು ಪ್ರಭಾರ ಹುದ್ದೆಯಿಂದ ಬಿಡುಗಡೆ ಮಾಡಿದ್ದು, ಮೂಲ ಹುದ್ದೆಯಲ್ಲಿ ಮುಂದುವರಿದಿದ್ದಾರೆ. ಶಾಲೆಗೆ ಸದ್ಯ ಬೇರೊಬ್ಬ ಪ್ರಾಚಾರ್ಯರನ್ನು ನೇಮಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು