ರಾಮನಗರ: ಕೋಳಿ ಫಾರಂ ನಿರ್ಮಾಣಕ್ಕೆ ನೆರವು

ಚನ್ನಪಟ್ಟಣ: ಬಿಡಿಸಿಸಿ ಬ್ಯಾಂಕ್‌ನಿಂದ ರೈತರು ಮತ್ತು ಸ್ತ್ರೀಶಕ್ತಿ ಸಂಘಗಳಿಗೆ ಸ್ವಉದ್ಯೋಗ ಯೋಜನೆಯಡಿ ಕೋಳಿ ಫಾರಂ ನಿರ್ಮಾಣಕ್ಕೆ ಆರ್ಥಿಕ ಸೌಲಭ್ಯ ನೀಡಲಾಗುತ್ತಿದೆ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಿ. ಹನುಮಂತಯ್ಯ ತಿಳಿಸಿದರು.
ಪಟ್ಟಣದ ಬಿಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಬಿಡಿಸಿಸಿ ಬ್ಯಾಂಕ್ ವತಿಯಿಂದ ಚನ್ನಪಟ್ಟಣ ಮತ್ತು ಕೋಡಂಬಹಳ್ಳಿ ಶಾಖೆಯಲ್ಲಿನ 6 ಪಿ.ಎ.ಸಿ.ಎಸ್.ಗಳಿಗೆ ವಿವಿಧ ಯೋಜನೆಯಡಿ ₹ 4.60 ಕೋಟಿ ಸಾಲ ವಿತರಣೆ ಮಾಡಿ ಅವರು ಮಾತನಾಡಿದರು.
ರೈತರಿಂದ ಸಕಾಲಕ್ಕೆ ಸಾಲ ವಸೂಲಾತಿ ಮಾಡಿ ಮತ್ತಷ್ಟು ರೈತರಿಗೆ ಅನುಕೂಲ ಮಾಡಿಕೊಡಲು ಪಿ.ಎ.ಸಿ.ಎಸ್. ಅಧ್ಯಕ್ಷರು ಮತ್ತು ಸಿಇಒಗಳು ಮುಂದಾಗಬೇಕು. ಫಲಾನುಭವಿಗಳಿಂದ ಸಕಾಲಕ್ಕೆ ಸಾಲ ವಸೂಲಾತಿ ಮಾಡಿದರೆ ಮತ್ತಷ್ಟು ಫಲಾನುಭವಿಗಳಿಗೆ ಸಾಲ ಸೌಲಭ್ಯ ನೀಡಲು ಅವಕಾಶವಾಗುತ್ತದೆ ಎಂದರು.
ಸ್ತ್ರೀಶಕ್ತಿ ಸಂಘದ ಸದಸ್ಯರು ಸಕಾಲಕ್ಕೆ ಸಾಲ ಮರುಪಾವತಿ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಯಾವುದೇ ಭಯ ಇಲ್ಲದೆ ಸ್ತ್ರೀಶಕ್ತಿ ಸಂಘಗಳಿಗೆ ಎಷ್ಟು ಬೇಕಾದರೂ ಸಾಲ ನೀಡಲಾಗುತ್ತಿದೆ. ಅದೇ ರೀತಿ ರೈತರು ಸಹ ಸರ್ಕಾರಗಳು ಸಾಲ ಮನ್ನಾ ಮಾಡುತ್ತವೆ ಎನ್ನುವುದನ್ನು ಮನಸ್ಸಿನಿಂದ ಕೈಬಿಟ್ಟು ಸಕಾಲಕ್ಕೆ ಸಾಲದ ಹಣವನ್ನು ಸಂಘಕ್ಕೆ ಪಾವತಿಸಬೇಕು ಎಂದು ಕೋರಿದರು.
ಬಮೂಲ್ ನಿರ್ದೇಶಕ ಎಚ್.ಸಿ. ಜಯಮುತ್ತು ಮಾತನಾಡಿ, ಬಿಡಿಸಿಸಿ ಬ್ಯಾಂಕ್‌ನಿಂದ ಸಾಲ ಪಡೆಯುವ ಸ್ತ್ರೀಶಕ್ತಿ ಸಂಘಗಳ ಸದಸ್ಯರು ಹೈನುಗಾರಿಕೆಯಲ್ಲಿ ತೊಡಗಿದ್ದಾರೆ. ಇಲ್ಲಿ ಪಡೆದ ಸಾಲದಿಂದ ರಾಸುಗಳನ್ನು ಖರೀದಿಸಿ ಹೈನೋದ್ಯಮದ ಮೂಲಕ ಕುಟುಂಬ ನಿರ್ವಹಣೆ ಮಾಡುವ ಜೊತೆಗೆ ಸಕಾಲಕ್ಕೆ ಸಾಲವನ್ನು ಮರುಪಾವತಿ ಮಾಡುತ್ತಿದ್ದಾರೆ ಎಂದರು.
ಬ್ಯಾಂಕ್‌ನ ಸಾಲ ತೀರಿಸಿದರೆ ರಾಸು ನಿಮ್ಮ ಬಳಿಯೇ ಉಳಿಯುತ್ತದೆ. ಆದ್ದರಿಂದ ಹೈನೋದ್ಯಮದಲ್ಲಿ ಹೆಚ್ಚು ಲಾಭ ಗಳಿಸಬಹುದು. ರೈತರು ರಾಸುಗಳಿಗೆ ವಿಮೆ ಮಾಡಿಸಿ ಸಕಾಲಕ್ಕೆ ಲಸಿಕೆ ಹಾಕಿಸಿ ಹೈನೋದ್ಯಮದಲ್ಲಿ ಪ್ರಗತಿ ಸಾಧಿಸಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕಿನ 6 ಪಿಎಸಿಎಸ್‌ಗಳಲ್ಲಿನ ಫಲಾನುಭವಿಗಳಿಗೆ ಕೆಸಿಸಿ ಯೋಜನೆಯಡಿ ₹ 3.50 ಕೋಟಿ ಸಾಲ, ಸ್ತ್ರೀಶಕ್ತಿ ಸಂಘಗಳಿಗೆ ₹ 1 ಕೋಟಿ ಸಾಲ, ಮಂಗಾಡಹಳ್ಳಿ ಗ್ರಾಮದ ರೈತ ಶಿವಶಂಕರ್‌ಗೆ ಕೋಳಿ ಫಾರಂ ನಿರ್ಮಾಣಕ್ಕೆ ₹ 10 ಲಕ್ಷ ಸಾಲವನ್ನು ವಿತರಣೆ ಮಾಡಲಾಯಿತು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಕ್ಕೂರುದೊಡ್ಡಿ ಜಯರಾಂ, ಚನ್ನಪಟ್ಟಣ ಬಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಟಿ. ಸುರೇಶ್, ಮೇಲ್ವಿಚಾರಕ ಪಿ.ಎಸ್. ಪಾರ್ಥ, ಕೋಡಂಬಹಳ್ಳಿ ಶಾಖೆಯ ವ್ಯವಸ್ಥಾಪಕ ಬಿ.ವಿ. ಸಂಜಯ್ ಕುಮಾರ್, ಮೇಲ್ವಿಚಾರಕ ವೆಂಕಟೇಶ್, ಕಸಬಾ ಪಿಎಸಿಎಸ್ ಅಧ್ಯಕ್ಷ ಟಿ.ಎಲ್. ರಾಜು, ಮತ್ತೀಕೆರೆ ಪಿಎಸಿಎಸ್ ಅಧ್ಯಕ್ಷ ಬೆಳಕೆರೆ ಓದೇಶ್, ಸೋಗಾಲ ಪಿಎಸಿಎಸ್ ಅಧ್ಯಕ್ಷ ಶಶಿಧರ್, ರಾಜು, ಲಿಂಗರಾಜು, ಬಸವಲಿಂಗು ಹಾಜರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.