ಸೋಮವಾರ, ಮೇ 17, 2021
26 °C
ಕೊರೊನಾ ಸೋಂಕು ತಡೆಗೆ ₹ 3 ಲಕ್ಷ ಮೌಲ್ಯದ ವೈದ್ಯಕೀಯ ಸಾಮಗ್ರಿ ವಿತರಣೆ

ಕನಕಪುರ: ತುಂಗಣಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನಕಪುರ: ‘ಗ್ರಾಮೀಣರು ಅನಗತ್ಯವಾಗಿ ಮನೆಯಿಂದ ಹೊರಕ್ಕೆ ಮತ್ತು ನಗರ ಪ್ರದೇಶಗಳಿಗೆ ಹೋಗುವುದರ ಬದಲು ಜಮೀನುಗಳಲ್ಲಿಯೇ ಕೃಷಿ ಚಟುವಟಿಕೆ ಮಾಡುವ ಮೂಲಕ ಕೊರೊನಾ ಸೋಂಕಿನಿಂದ ದೂರ ಉಳಿಯಬೇಕು’ ಎಂದು ಸಮಾಜ ಸೇವಕ ಗೋಪಸಂದ್ರ ರವಿ ಸಲಹೆ ನೀಡಿದರು.

ತಾಲ್ಲೂಕಿನ ತುಂಗಣಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೋವಿಡ್‌ ಸೋಂಕು ನಿವಾರಣೆಗಾಗಿ ಬೇಕಾಗುವ ₹ 3 ಲಕ್ಷ ವೆಚ್ಚದಲ್ಲಿ ಮಾಸ್ಕ್‌, ವಿಟಮಿನ್‌ ಮಾತ್ರೆ, ಹ್ಯಾಂಡ್‌ಗ್ಲೌಸ್‌, ಸ್ಯಾನಿಟೈಸರ್‌ ಸೇರಿದಂತೆ ಮತ್ತಿತರ ಅಗತ್ಯ ವಸ್ತುಗಳನ್ನು ಭಾನುವಾರ ಕೊಡುಗೆಯಾಗಿ ನೀಡಿ ಮಾತನಾಡಿದರು.

ಕೋವಿಡ್‌ ಎರಡನೇ ಅಲೆ ಮೊದಲನೆ ಅಲೆಗಿಂತ ತೀವ್ರವಾಗಿದೆ. ಸೋಂಕು ತಡೆಗಟ್ಟುವುದಕ್ಕಾಗಿಯೇ ಸರ್ಕಾರ ಲಾಕ್‌ಡೌನ್‌ ಮಾಡಿದೆ. ಸಾರ್ವಜನಿಕರು ಮನೆಯಲ್ಲಿಯೇ ಇರಬೇಕು. ಗ್ರಾಮೀಣ ಪ್ರದೇಶದ ಜನರು ಜಮೀನುಗಳಲ್ಲಿ ಕೃಷಿ ಚಟುವಟಿಕೆ ಮಾಡುವ ಮೂಲಕ ನಗರದಿಂದ ದೂರ ಉಳಿಯಬೇಕು ಎಂದರು.

‘ಆರೋಗ್ಯ ಕೇಂದ್ರದಲ್ಲಿ ಕೋವಿಡ್‌ ಸೋಂಕಿತರಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಪರಿಣಾಮಕಾರಿಯಾಗಿ ವೈದ್ಯಕೀಯ ಸೇವೆ ದೊರಕಿಸಲು ಕೆಲವು ಅಗತ್ಯ ವಸ್ತುಗಳ ಕೊರತೆಯಿದೆ ಎಂದು ಆಸ್ಪತ್ರೆಯ ವೈದ್ಯರು ಗ್ರಾಮ ಪಂಚಾಯಿತಿ ಸದಸ್ಯರ ಮೂಲಕ ಮನವಿ ಮಾಡಿದ್ದರು. ಅದರಂತೆ ಸದ್ಯಕ್ಕೆ ಬೇಕಿರುವ ವಸ್ತುಗಳನ್ನು ಕೊಡಿಸಿದ್ದೇನೆ. ಮುಂದೆ ಆಕ್ಸಿಜನ್‌ ಕೇಳಿದ್ದು ಅದನ್ನು ಕೊಡಿಸುತ್ತೇನೆ’ ಎಂದು
ಹೇಳಿದರು.

ಗ್ರಾಮ ಪಂಚಾಯಿತಿ ಸದಸ್ಯ ಪ್ರಕಾಶ್‌ ಮಾತನಾಡಿ, ವೈದ್ಯರಾದ ಡಾ.ಶ್ರೀನಿವಾಸ್‌ ಅವರು ಕೊರೊನಾ ಸೋಂಕು ತಡೆಯುವ ಕೆಲಸವನ್ನು ತುಂಬಾ ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ. ಎಲ್ಲಾ ರೋಗಿಗಳನ್ನು ಚೆನ್ನಾಗಿ ನೋಡುತ್ತಿದ್ದಾರೆ. ಅವರು ಮಾಡುತ್ತಿರುವ ಕೆಲಸಕ್ಕೆ ನಮ್ಮ ಸಹಕಾರ ನೀಡಬೇಕು. ಸಮಾಜ ಸೇವಕ ಗೋಪಸಂದ್ರ ರವಿ ಅವರು ಅಗತ್ಯ ವೈದ್ಯಕೀಯ ಸಾಮಗ್ರಿಗಳನ್ನು ಕೊಡಿಸಿ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಸುಮ ಉಮೇಶ್‌ ಮಾತನಾಡಿ, ಸೋಂಕು ನಿವಾರಣೆಗೆ ನಾವು ಸ್ವಯಂ ಪ್ರೇರಣೆಯಿಂದ ಹೋರಾಡಬೇಕಿದೆ. ಸೋಂಕು ಹರಡದಂತೆ ತಡೆಗಟ್ಟುವುದರ ಜತೆಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ. ವೈದ್ಯರ ಹೋರಾಟಕ್ಕೆ ನಾವು ಕೈ ಜೋಡಿಸಬೇಕಿದೆ ಎಂದು ತಿಳಿಸಿದರು.

ಎಲ್ಲರೂ ಸರ್ಕಾರ ಸೂಚಿಸಿರುವ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು. 18 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು. ತಜ್ಞರ ಸಲಹೆ ಪಾಲಿಸಿದರೆ ಸೋಂಕಿನಿಂದ ದೂರ ಇರಬಹುದು. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ್‌, ಸದಸ್ಯರಾದ ತುಂಗಣಿ ಮನು, ರವಿ, ಅಳ್ಳಾಸಂದ್ರ ಕಾಂತರಾಜು, ವರಗೇರಹಳ್ಳಿ ರಘುರಾಮ್‌, ರಾಯಸಂದ್ರ ರವಿ, ಬನ್ನಿಕುಪ್ಪೆ ಸತೀಶ್‌ ಸೇರಿದಂತೆ ಕಾಂಗ್ರೆಸ್‌ ಮುಖಂಡರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು