ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿವೃಷ್ಟಿ ಹಾನಿ ವೀಕ್ಷಿಸಿದ ಅಶ್ವತ್ಥನಾರಾಯಣ

ಮೂರು ತಾಲ್ಲೂಕುಗಳಿಗೆ ಭೇಟಿ: ಸಂತ್ರಸ್ತ ಕುಟುಂಬಗಳಿಗೆ ಪರಿಹಾರದ ಚೆಕ್ ವಿತರಣೆ
Last Updated 9 ಆಗಸ್ಟ್ 2022, 3:59 IST
ಅಕ್ಷರ ಗಾತ್ರ

ರಾಮನಗರ: ಅತಿವೃಷ್ಟಿಯಿಂದ ಕಂಗೆಟ್ಟಿರುವ ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ಉಸ್ತುವಾರಿ ಸಚಿವ ಡಾ.ಸಿ. ಎನ್. ಅಶ್ವತ್ಥನಾರಾಯಣ ಸೋಮವಾರ ಪ್ರವಾಸ ಕೈಗೊಂಡಿದ್ದು, ಸಂತ್ರಸ್ಥರಿಗೆ ಭರವಸೆ ತುಂಬುವ ಜೊತೆಗೆ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.

ಬೆಳಿಗ್ಗೆ ಮೊದಲಿಗೆ ಸೋಲೂರು ಹೋಬಳಿಯ ಕೂಡ್ಲೂರು ಗೇಟ್ ನಲ್ಲಿ, ಗೋಡೆ ಕುಸಿದು ಇಬ್ಬರು ನೇಪಾಳಿ ಮಕ್ಕಳು ಮೃತಪಟ್ಟ ಸ್ಥಳಕ್ಕೆ ಸಚಿವರು ಭೇಟಿ ನೀಡಿ ಪರಿಶೀಲಿಸಿದರು. ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ ಅವರು, ಈ ಮಕ್ಕಳು ನೇಪಾಳಿ ಕುಟುಂಬಕ್ಕೆ ಸೇರಿದವರಾದ್ದರಿಂದ ಪರಿಹಾರ ಕೊಡಲು ತಾಂತ್ರಿಕ ಅಡಚಣೆಗಳಿವೆ. ಆದರೂ, ಪರಿಹಾರದ ಚೆಕ್ ಸಿದ್ಧಪಡಿಸಿ ಇಡಲಾಗಿದೆ. ಇರುವ ತೊಡಕುಗಳನ್ನು ನಿವಾರಿಸಿ ಎರಡ್ಮೂರು ದಿನಗಳಲ್ಲಿ ಚೆಕ್ ಕೊಡಲಾಗುವುದು ಎಂದು ಭರವಸೆ ನೀಡಿದರು.

ಮಾಗಡಿ ತಾಲ್ಲೂಕಿನ ಕುದೂರಿನಲ್ಲಿ ಕೆರೆಗೆ ನೀರು ನುಗ್ಗಿ ಮನೆ ಕಳೆದುಕೊಂಡಿರುವ 36 ಕುಟುಂಬಗಳಿಗೆ ತಲಾ ₹10 ಸಾವಿರ ಮೊತ್ತದ ಪರಿಹಾರದ ಚೆಕ್ ವಿತರಿಸಿದರು. ಬಳಿಕ ತುಂಬಿ ತುಳುಕುತ್ತಿರುವ ಮಾಯಸಂದ್ರ ಕೆರೆಗೆ ಬಾಗಿನ ಅರ್ಪಿಸಿದರು. ಈ ವೇಳೆ ಮನೆ ಕಳೆದುಕೊಂಡಿರುವ ಯಲ್ಲಾಪುರ, ಮುತ್ತುಗದಹಳ್ಳಿ, ಕೆಂಚನಪಾಳ್ಯಗಳ ಒಟ್ಟು 7 ಮಂದಿಗೆ ಒಟ್ಟು ₹5 ಲಕ್ಷ ಮೊತ್ತದ ಪರಿಹಾರ ವಿತರಿಸಿದರು. ಈ ಪೈಕಿ ಮನೆ ವಿಪರೀತ ಹಾನಿಗೊಳಗಾಗಿರುವ ಮೂವರಿಗೆ ತಲಾ ₹95 ಸಾವಿರ ನೆರವು ನೀಡಲಾಯಿತು.

ಬಳಿಕ ಈಡಿಗರ ಪಾಳ್ಯಕ್ಕೆ ಭೇಟಿ ನೀಡಿದ ಸಚಿವರು, ಉಕ್ಕಿ ಹರಿಯುತ್ತಿರುವ ಕಾಲುವೆಯನ್ನು ವೀಕ್ಷಿಸಿದರು. ಆಗ ಊರಿನ ಜನರು, ಸರಿಯಾದ ಸೇತುವೆ ನಿರ್ಮಿಸಿ ಕೊಡುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವರು, ಆದಷ್ಟು ಬೇಗ ಇದನ್ನು ಪೂರೈಸುವುದಾಗಿ ಆಶ್ವಾಸನೆ ನೀಡಿದರು. ಸಂಕೀಘಟ್ಟ ಕೆರೆಗೂ ಸಚಿವರು ಭೇಟಿ ನೀಡಿ ಬಾಗಿನ ಅರ್ಪಿಸಿದರು.

ಕೆರೆ ಕೋಡಿ ದುರಸ್ತಿಗೆ ಸೂಚನೆ: ಮಾಡಬಾಳು ಹೋಬಳಿಯ ಅಂಚಿಕುಪ್ಪೆಗೆ ಭೇಟಿ ನೀಡಿದ ಸಚಿವರು ಮತ್ತು ಅಧಿಕಾರಿಗಳು, ಅಲ್ಲಿ ಕೆರೆ ಕೋಡಿ ಒಡೆದು, ಜಮೀನಿಗೆಲ್ಲ ಅಪಾರ ಪ್ರಮಾಣದಲ್ಲಿ ನೀರು ನುಗ್ಗಿ, ಆಗಿರುವ ನಷ್ಟವನ್ನು ಕಣ್ಣಾರೆ ಕಂಡರು. ಅಲ್ಲೇ ಇದ್ದ ಅಧಿಕಾರಿಗಳ ಜೊತೆ ಚರ್ಚಿಸಿದ ಸಚಿವರು, ಕೂಡಲೇ ದುರಸ್ತಿಗೆ ಕ್ರಮ ವಹಿಸಬೇಕು. ನೀರು ವ್ಯರ್ಥವಾಗಿ ಹರಿದು ಹೋಗುತ್ತಿರುವುದನ್ನು ತಡೆಯಬೇಕು ಎಂದು
ನಿರ್ದೇಶಿಸಿದರು. ರಾಮನಗರ ತಾಲ್ಲೂಕಿನ ಮೆಳೇಹಳ್ಳಿಯಲ್ಲಿ ಮಳೆಯಿಂದಾಗಿ ಕೊಚ್ಚಿ ಹೋದ ಸೇತುವೆ ಸ್ಥಳಕ್ಕೆ ಭೇಟಿ ನೀಡಿ, ತ್ವರಿತ ದುರಸ್ತಿಗೆ ಸೂಚಿಸಿದರು.

ರಾಮನಗರ ತಾಲ್ಲೂಕಿನ ಜೋಗಿದೊಡ್ಡಿ ಗ್ರಾಮದ ಸಮೀಪ ಸೇತುವೆ ಕೊಚ್ಚಿ ಹೋಗಿರುವುದನ್ನು ವೀಕ್ಷಿಸಿದ ಸಚಿವರು ‘ ಈ ಸೇತುವೆ ನಿರ್ಮಾಣಕ್ಕೆ ಇನ್ನು ಒಂದು ವಾರದಲ್ಲಿ ಟೆಂಡರ್ ಪ್ರಕ್ರಿಯೆ ಮುಗಿಸಿ, ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಸಂಬಂಧಿಸಿದ ಎಂಜಿನಿಯರ್‌ಗಳಿಗೆ ಹೇಳಿದರು. ಮಾಗಡಿ ಶಾಸಕ ಎ.ಮಂಜುನಾಥ ಜೊತೆಗಿದ್ದರು.

ಟಿಪ್ಪು ನಗರಕ್ಕೆ ಭೇಟಿ: ಜಿಲ್ಲಾ ಕೇಂದ್ರವಾದ ರಾಮನಗರ ನಗರಸಭೆ ವ್ಯಾಪ್ತಿಯಲ್ಲಿ ಸತತ ಮಳೆಯಿಂದ ಹಾನಿಗೊಳಗಾಗಿರುವ ಟಿಪ್ಪು ನಗರಕ್ಕೆ ಭೇಟಿ ನೀಡಿ, ಸಂತ್ರಸ್ತರಿಗೆ ಒಟ್ಟು 15 ಲಕ್ಷ ಪರಿಹಾರ ವಿತರಣೆ ಮಾಡಿದರು. ಶಾಸಕಿ ಅನಿತಾ ಕುಮಾರಸ್ವಾಮಿ
ಇದ್ದರು.

ಬಳಿಕ ಚನ್ನಪಟ್ಟಣ ತಾಲ್ಲೂಕಿಗೆ ತೆರಳಿ, ಕಣ್ವ ಜಲಾಶಯಕ್ಕೆ ಸಚಿವರು ಬಾಗಿನ ಅರ್ಪಿಸಿದರು. ಅಲ್ಲಿಂದ ಕೊಂಡಾಪುರ- ಬಾಣಗಳ್ಳಿಗೆ ತೆರಳಿದ ಸಚಿವರ ನೇತೃತ್ವದ ತಂಡವು ಅಲ್ಲಿ ಕಣ್ವ ನದಿಗೆ ಅಡ್ಡಲಾಗಿ ಕಟ್ಟಿರುವ ಬೃಹತ್ ಸೇತುವೆಗೆ ಆಗಿರುವ ಹಾನಿಯನ್ನು ಪರಿಶೀಲಿಸಿತು.

ಇದಾದ ಮೇಲೆ, ಪ್ರವಾಹಪೀಡಿತ ಮೈಲನಾಯ್ಕನಹಳ್ಳಿಗೆ ಅವರು ತೆರಳಿ, ಸಂತ್ರಸ್ತರ ಸಮಸ್ಯೆ ಆಲಿಸಿತು.

ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್, ಜಿ.ಪಂ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ದಿಗ್ವಿಜಯ್ ಬೋಡ್ಕೆ ಹಾಗೂ ಇನ್ನಿತರು ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT