ಶನಿವಾರ, ಫೆಬ್ರವರಿ 29, 2020
19 °C
ಭೂಹಳ್ಳಿ ಗ್ರಾಮದ ಬಸವರಾಜು, ಸರೋಜಮ್ಮ ದಂಪತಿಗಳ ತೋಟ, ದಾಳಿ ತಡೆಗಟ್ಟಲು ಮನವಿ

ಕಾಡಾನೆಗಳ ದಾಳಿ: ₹2 ಲಕ್ಷದಷ್ಟು ಬೆಳೆನಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

elephant

ಸಾತನೂರು (ಕನಕಪುರ): ‘ನೀರಿನ ಸಮಸ್ಯೆಯ ನಡೆವೆಯೂ ಕೊಡದಲ್ಲಿ ನೀರು ಹಾಕಿ ಸಸಿಗಳನ್ನು ಬೆಳೆಸಿದ್ದೇವೆ. ಅವುಗಳ ರಕ್ಷಣೆ ಮಾಡಲು ಅರಣ್ಯ ಇಲಾಖೆಯವರು ಸಹಕರಿಸುತ್ತಿಲ್ಲ. ನಮ್ಮಿಂದಲೂ ಸಾಧ್ಯವಾಗುತ್ತಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವುದೊಂದೇ ನಮಗೆ ಉಳಿದಿರುವ ದಾರಿ’ ಎಂದು ರೈತರು ಅವಲತ್ತುಕೊಂಡರು.
ಇಲ್ಲಿನ ಸಾತನೂರು ಹೋಬಳಿ ಭೂಹಳ್ಳಿ ಗ್ರಾಮದಲ್ಲಿ ಭಾರತಿರಾಜು ಎಂಬುವವರಿಗೆ ಸೇರಿದ 7 ಎಕರೆ ಜಮೀನಿನಲ್ಲಿ ಸಾವಯವ ಕೃಷಿ ಮಾಡಿ ತೇಗ, ತೆಂಗು, ಮಾವು, ಸೀಬೆ, ಬಾಳೆ ಗಿಡಗಳನ್ನು ಬಹಳ ಶ್ರಮದಿಂದ ಬೆಳೆಸಲಾಗಿದೆ. ಕಾಡಾನೆಗಳು ಸುತ್ತಲೂ ಹಾಕಿದ್ದ ಸೋಲಾರ್‌ ತಂತಿಯನ್ನು ಮಂಗಳವಾರ ರಾತ್ರಿ ನಾಶಮಾಡಿ ಸಸಿಗಳಿಗೆ ಹಾನಿ ಮಾಡಿವೆ ಎಂದು ರೈತ ದಂಪತಿಗಳಾದ ಬಸವರಾಜು ಮತ್ತು ಸರೋಜಮ್ಮ ಅರಣ್ಯ ಇಲಾಖೆ ಅಧಿಕಾರಿಗಳ ಮುಂದೆ ನೋವು ತೋಡಿಕೊಂಡರು.

‘ಈ ಭಾಗದಲ್ಲಿ ಕಾಡಾನೆ ಮತ್ತು ಕಾಡು ಪ್ರಾಣಿಗಳ ಸಮಸ್ಯೆಯಿಂದ ರೈತರು ಬೇಸಾಯ ಮಾಡುವುದನ್ನೆ ಬಿಟ್ಟಿದ್ದಾರೆ. ಕಾಡಾನೆಗಳ ತಡೆಗೆ ಜಮೀನಿನ ಸುತ್ತಲೂ ಸೋಲಾರ್‌ ತಂತಿ ಅಳವಡಿಸಿದ್ದೇವೆ. 3 ವರ್ಷದಿಂದ ರಾತ್ರಿಯಿಡೀ ಇಲ್ಲೇ ಕಾಯುತ್ತಿದ್ದೇವೆ. ಮಂಗಳವಾರ ರಾತ್ರಿ ನಾಲ್ಕೈದು ಆನೆಗಳ ಹಿಂಡು ಸೋಲಾರ್‌ ತಂತಿಯನ್ನೇ ತುಳಿದು ಜಮೀನಿನ ಒಳಗೆ ಬಂದು ₹2 ಲಕ್ಷದಷ್ಟು ಬೆಳೆ ನಾಶ ಮಾಡಿವೆ’ ಎಂದು ಅವರು ತಿಳಿಸಿದರು. ‘ಅವುಗಳನ್ನು ಓಡಿಸುವ ಪ್ರಯತ್ನ ಮಾಡಿದಾಗ ನಮ್ಮ ಮೇಲೂ ದಾಳಿ ನಡೆಸಲು ಮುಂದಾದವು. ನಾನು ಮತ್ತು ಪತ್ನಿ ಜೋರಾಗಿ ಕಿರಿಚಿಕೊಂಡಿದ್ದರಿಂದ ಬಿಟ್ಟು ವಾಪಸ್ಸಾದವು’ ರೈತ ಬಸವರಾಜು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

‘ಇದು ಮೂರನೇ ಬಾರಿ ತೋಟಕ್ಕೆ ಆನೆಗಳು ಬಂದು ನಾಶ ಮಾಡಿರುವುದು. ಪ್ರತಿ ಸಾರಿ ಆನೆಗಳು ಬಂದಾಗ ಓಡಿಸಲು ಯಾರೂ ನಮ್ಮ ಸಹಾಯಕ್ಕೆ ಬರುತ್ತಿಲ್ಲ. ಆನೆ ದಾಳಿಗೆ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷವೇ ಕಾರಣ. ಅರಣ್ಯದ ಸುತ್ತಲೂ ದೊಡ್ಡಾದಾಗಿ ಆನೆಕಂದಕ, ಸೋಲಾರ್‌ ತಂತಿ, ರೈಲ್ವೇ ಕಂಬಿಗಳನ್ನು ಅಳವಡಿಸಿ ಆನೆಗಳು ಹೊರ ಬರದಂತೆ ತಡೆಗಟ್ಟಬೇಕು’ ಎಂದು ಆಗ್ರಹಿಸಿದರು.

*****

 ನನ್ನ ಪತಿ ಸ್ವಲ್ಪದರಲ್ಲೇ ಆನೆ ದಾಳಿಯಿಂದ ಪಾರಾದರು. ಸಸಿಗಳು ನಾಶವಾಗಿವೆ. ನಮಗೆ ಪರಿಹಾರ ಬೇಡ. ಆನೆ ಬರದಂತೆ ಕ್ರಮ ಕೈಗೊಳ್ಳಿ

-ಸರೋಜಮ್ಮ ರೈತ ಮಹಿಳೆ

 ಪರಿಹಾರ, ಕ್ರಮಕ್ಕೆ ಮುಂದಾಗುವ ಭರವಸೆ

ಅರಣ್ಯ ಅಂಚಿನ ಗ್ರಾಮ, ಜಮೀನುಗಳಲ್ಲಿ ಕಾಡಾನೆಗಳು ದಾಳಿ ಮಾಡುತ್ತಿವೆ. ನಿಯಂತ್ರಿಸುವ ಕೆಲಸ ಮಾಡುತ್ತಿದ್ದೇವೆ. ಈ ಭಾಗದಲ್ಲಿ ಸೋಲಾರ್‌ ವ್ಯವಸ್ಥೆ ಮತ್ತು ಆನೆ ಕಂದಕದಿಂದ ಆನೆಗಳನ್ನು ತಡೆಗಟ್ಟಲು ಸಾಧ್ಯವಿಲ್ಲ. ಏನಿದ್ದರೂ ರೈಲ್ವೇ ಕಂಬಿ ಅಳವಡಿಸುವುದರಿಂದ ಮಾತ್ರ ತಡೆಗಟ್ಟಬಹುದು.

ಶಿವಗಿರಿ ಬೆಟ್ಟದಿಂದ ಭೂಹಳ್ಳಿ ಚೆಕ್‌ಪೋಸ್ಟ್‌ವರೆಗೆ 10.5 ಕಿ.ಮೀ ರೈಲ್ವೇ ಕಂಬಿ ಅಳವಡಿಕೆಗೆ ಟೆಂಡರ್‌ ಆಗಿದೆ. ಜತೆಗೆ ಭೂಹಳ್ಳಿ ಚೆಕ್‌ಪೋಸ್ಟ್‌ನಿಂದ ಹರಿಹರದವರೆಗೂ ರೈಲ್ವೇ ಕಂಬಿ ಅಳವಡಿಸಿದಾಗ ಕಾಡನೆಗಳನ್ನು ಸಂಪೂರ್ಣವಾಗಿ ತಡೆಗಟ್ಟಬಹುದು. ಅರಣ್ಯ ವ್ಯಾಪ್ತಿಯ ದೂರ ಹೆಚ್ಚಿರುವುದರಿಂದ ಎಲ್ಲಿ ಹೊರಗಡೆ ಬರುತ್ತವೆ ಎಂದು ಗೊತ್ತಾಗುವುದಿಲ್ಲ. ಒಂದು ಕಡೆ ಕಾದರೆ ಮತ್ತೊಂದು ಕಡೆ ಹೊರಬರುತ್ತವೆ.

ಕಾಡಾನೆ ದಾಳಿಯಿಂದ ಲಕ್ಷಾಂತರ ಬೆಳೆ ಮತ್ತು ಸೋಲಾರ್‌ ಅಳವಡಿಕೆ ನಾಶವಾಗಿದೆ. ಹಿರಿಯ ಅಧಿಕಾರಿಗಳಿಗೆ ವರದಿ ಕೊಟ್ಟು ಸರ್ಕಾರದಿಂದ ಪರಿಹಾರ ಕೊಡಿಸಿ ಇಲ್ಲಿ ಹೆಚ್ಚು ಗಸ್ತು ಮಾಡಿ ಅನೆಗಳ ತಡೆಗೆ ಪ್ರಯ್ನಿಸಲಾಗುವುದು. ಬೇಸಿಗೆ ಸಮೀಪಿಸುತ್ತಿರುವುದರಿಂದ ಕಾಡಿಗೆ ಬೆಂಕಿ ಕಾಲ ಹತ್ತಿರವಾಗುತ್ತಿದೆ. ರಾತ್ರಿ ವೇಳೆ ಬೆಂಕಿ ರೇಖೆಗಳನ್ನು ನಾವು ಮಾಡಿಕೊಳ್ಳಬೇಕಿದೆ. ಕಾಡು ಪ್ರಾಣಿಗಳು ಹೊರ ಹೋಗದಂತೆ ತಡೆಗಟ್ಟಬೇಕಿದೆ. ಜತೆಗೆ ಕಾಡಿಗೆ ಬೀಳುವ ಬೆಂಕಿಯಿಂದ ಕಾಡನ್ನು ರಕ್ಷಿಸಬೇಕಿದೆ

-ಅನಿಲ್‌ಕುಮಾರ್‌, ಉಪ ವಲಯ ಅರಣ್ಯಾಧಿಕಾರಿ ಕಾವೇರಿ ವನ್ಯಜೀವಿ ವಲಯ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು