ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಸಂದ್ರದಲ್ಲಿ ಕಾಡಾನೆಗಳ ದಾಳಿಗೆ ಬಾಳೆತೋಟಕ್ಕೆ ಹಾನಿ

ಪಂಪ್‌ಸೆಂಟ್‌ಗಳ ನಾಶ; ₹ 5 ಲಕ್ಷ ನಷ್ಟ
Last Updated 18 ಮಾರ್ಚ್ 2020, 12:45 IST
ಅಕ್ಷರ ಗಾತ್ರ

ಕೋಡಿಹಳ್ಳಿ (ಕನಕಪುರ):ಹೋಬಳಿಯ ಚನ್ನಸಂದ್ರ ಗ್ರಾಮದಲ್ಲಿ ಕಾಡಾನೆಗಳ ದಾಳಿಯಿಂದ ಫಸಲಿಗೆ ಬಂದಿದ್ದ ಬಾಳೆ, ಮಾವು ತೋಟಗಳು ನಾಶಗೊಂಡಿರುವ ಘಟನೆಮಂಗಳವಾರ ರಾತ್ರಿ ನಡೆದಿದೆ.

ಸುಮಾರು ನಾಲ್ಕೈದು ಆನೆಗಳು ಮುನೇಶ್ವರಬೆಟ್ಟ ಅರಣ್ಯದಿಂದ ಬಂದಿದ್ದು, ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಜಮೀನುಗಳಿಗೆ ನುಗ್ಗಿ ದಾಂಧಲೆ ನಡೆಸಿವೆ.ತೆಂಗು, ಜೋಳ ಬೆಳೆ ಹಾನಿಯಾಗಿದೆ. ಕೃಷಿ ಪಂಪ್‌ಸೆಟ್‌ ಜಖಂಗೊಂಡಿವೆ. ಸುಮಾರು ₹ 5 ಲಕ್ಷ ನಷ್ಟ ಆಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಮಾರಸಂದ್ರ ಗ್ರಾಮದ ಶಿವರಾಜು, ದೇವಿರಮ್ಮ ಶಿವನೇಗೌಡ, ಶಂಭುಲಿಂಗೇಗೌಡ, ಚಿಕ್ಕವೆಂಕಟಯ್ಯ, ಪುಟ್ಟಮಾದೇಗೌಡ, ನಂಜೇಗೌಡ ಉರುಫ್‌ ದೊಳ್ಳಪ್ಪ, ಶಿವರಾಜು ನಂಜೇಗೌಡ ಎಂಬುವರ ತೋಟಗಳ ಫಸಲು ನಾಶವಾಗಿವೆ.

ರಾತ್ರಿ ಜಮೀನುಗಳಲ್ಲಿಬೆಳೆ, ಪಂಪ್‌ಸೆಟ್‌‌ಗಳನ್ನು ಆನೆಗಳು ನಾಶಗೊಳಿಸುತ್ತಿರುವ ಶಬ್ದ ಕೇಳಿಬಂದರೂ ರೈತರು ಜಮೀನುಗಳ ಕಡೆ ಹೋಗಲು ಭಯಗೊಂಡು ಸುಮ್ಮನಾಗಿದ್ದಾರೆ.ಬೆಳಿಗ್ಗೆ ಜಮೀನಿನ ಕಡೆ ಹೋದಾಗ ಫಸಲಿಗೆ ಬಂದಿದ್ದ ಬೆಳೆಗಳು ನಾಶವಾಗಿವೆ. ಈ ಬಗ್ಗೆ ರೈತರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ ದೂರು ಕೊಟ್ಟಿದ್ದಾರೆ.

ವಲಯ ಅರಣ್ಯಾಧಿಕಾರಿ ದಿನೇಶ್‌ ಮತ್ತು ಉಪ ವಲಯ ಅರಣ್ಯಾಧಿಕಾರಿ ಕೃಷ್ಣ ಅವರು ತೋಟಗಳಿಗೆ ಭೇಟಿ ನೀಡಿ ಫಸಲು ಹಾನಿಯಾಗಿರುವ ಬಗ್ಗೆ ಪರಿಶೀಲನೆ ನಡೆಸಿ ರೈತರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಸರ್ಕಾರಕ್ಕೆ ಶೀಘ್ರ ವರದಿಯನ್ನು ಕಳುಹಿಸಿ ಸೂಕ್ತ ಪರಿಹಾರ ನೀಡುವ ಭರವಸೆಯನ್ನು ನೀಡಿದ್ದಾರೆ.

ಒಂದು ತಿಂಗಳಿನಿಂದ ನಾಲ್ಕೈದು ಆನೆಗಳು ಹಿಂಡಿನಲ್ಲಿ ಜಮೀನುಗಳಿಗೆ ನುಗ್ಗಿ ದಾಂಧಲೆ ಮಾಡುತ್ತಿವೆ. ಫಸಲು ಬಂದಿದ್ದ ಬೆಳೆಯನ್ನು ನಾಶಪಡಿಸಿವೆ. ಜತೆಗೆ ಕೃಷಿ ಪಂಪ್‌ಸೆಟ್‌ ಪೈಪುಗಳನ್ನು ನೀರಿನ ಡ್ರಮ್‌ಗಳನ್ನು ಧ್ವಂಸಮಾಡುತ್ತಿವೆ. ಈ ಬಗ್ಗೆ ಹಲವು ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಅಳಲುತೋಡಿಕೊಂಡರು.

ಕೊಳವೆಬಾವಿಗೆ ಇಳಿ ಬಿಟ್ಟಿರುವ ಪೈಪ್‌ ಅನ್ನು ಮುರಿದಿವೆ. ಪೈಪ್‌ ಕಟ್‌ ಆಗಿದ್ದರೆ ಪಂಪು ಕೊಳವೆ ಬಾವಿಯ ಒಳಗೆ ಬೀಳುತ್ತಿತ್ತು. ₹3– 4 ಲಕ್ಷದ ಪಂಪು ಒಳಗೆ ಬಿದ್ದಿದ್ದರೆ ಭಾರಿ ನಷ್ಟವಾಗುತ್ತಿತ್ತು. ಆನೆಗಳು ಶಾಶ್ವತವಾಗಿ ಕಾಡಿನಿಂದ ಹೊರಗಡೆ ಬರದಂತೆ ತಡೆಗಟ್ಟಬೇಕು ಎಂದು ರೈತರೊಬ್ಬರು ಒತ್ತಾಯಿಸಿದರು.

‘ಮೇವು ಕೊರತೆಯಿಂದ ನಾಡಿಗೆ’:ಅರಣ್ಯದಲ್ಲಿ ಆನೆ ಸಂತತಿ ಜಾಸ್ತಿಯಾಗಿದ್ದು ಕಾಡಿನಲ್ಲಿ ಅವುಗಳಿಗೆ ಮೇವು ಮತ್ತು ನೀರಿನ ಕೊರತೆ ಕಾಡುತ್ತಿದೆ. ಜತೆಗೆ ಕಿಡಿಕೇಡಿಗಳು ಕಾಡಿಗೆ ಬೆಂಕಿ ಹಚ್ಚುತ್ತಿರುವುದರಿಂದ ಕಾಡಾನೆಗಳು ಬೆಂಕಿಯಿಂದ ತಪ್ಪಿಸಿಕೊಳ್ಳಲು ಕಾಡಿನಿಂದ ಹೊರ ಬರುತ್ತಿವೆ. ಕಾಡಾನೆಗಳು ಹೊರಗಡೆ ಬರದಂತೆ ತಡೆಗಟ್ಟಬೇಕಾದರೆ ರೈಲ್ವೆ ಕಂಬಿಗಳನ್ನು ಅಳವಡಿಸಬೇಕು. ಅಳವಡಿಸುವ ಸಂದರ್ಭದಲ್ಲಿ ರೈತರು ಸಹಕರಿಸುತ್ತಿಲ್ಲ, ಬೇರಾವ ಕ್ರಮದಿಂದಲೂ ಆನೆಗಳನ್ನು ತಡೆಗಟ್ಟಲು ಸಾಧ್ಯವಿಲ್ಲ ಎಂದು ವಲಯ ಅರಣ್ಯಾಧಿಕಾರಿ ದಿನೇಶ್‌ ಹೇಳಿದರು.

‘ಶಾಶ್ವತ ಪರಿಹಾರ ದೊರಕಿಸಿ’:ಕಾಡಾನೆಗಳು ನಿರಂತರವಾಗಿ ದಾಳಿ ಮಾಡಿ ಬೆಳೆದ ಬೆಳೆಗಳನ್ನು ನಾಶ ಮಾಡುತ್ತಿವೆ. ಇದರಿಂದ ನಾವು ಜೀವನ ನಡೆಸುವುದೇ ಕಷ್ಟವಾಗಿದೆ. ರಾತ್ರಿ ವೇಳೆ ಜಮೀನುಗಳಲ್ಲಿ ಕಾವಲನ್ನೂ ಕಾಯುತ್ತೇವೆ. ಅದನ್ನು ಮೀರಿ ದಾಳಿಯಾಗುತ್ತಿದೆ. ಒಂದು ವೇಳೆ ಆನೆದಾಳಿ ವೇಳೆ ನಾವು ಸಿಕ್ಕರೆ ನಮ್ಮನ್ನು ತುಳಿದು ಸಾಯಿಸುತ್ತವೆ. ರಾತ್ರಿ ವೇಳೆಯಲ್ಲಿ ದಾಳಿ ಮಾಡುತ್ತಿದ್ದ ಆನೆಗಳು ಈಗ ಬೆಳಕಿನ ವೇಳೆಯೇ ಬರುತ್ತಿವೆ. ಕಣ್ಮುಂದೆ ಫಸಲು ನಾಶ ಮಾಡುತ್ತಿದ್ದರೂ ಜೀವ‌ಭಯದಿಂದ ಸುಮ್ಮನಾಗುತ್ತಿದ್ದೇವೆ. ಶಾಶ್ವತ ಪರಿಹಾರ ದೊರಕಿಸಬೇಕು. ಹಾನಿಯಾದ ಬೆಳೆಗೆ ಇಂದಿನ ಬೆಲೆಗೆ ತಕ್ಕಂತೆ ಪರಿಹಾರ ಕೊಡಬೇಕು ಎಂದುಚನ್ನಸಂದ್ರ ಗ್ರಾಮದ ಮುಖಂಡಶಿವರಾಜು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT