ಸೋಮವಾರ, ಸೆಪ್ಟೆಂಬರ್ 16, 2019
29 °C

ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಮಾವು ಮೇಳ ಆಯೋಜನೆ

Published:
Updated:
Prajavani

ರಾಮನಗರ: ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಮಾವು ಬೆಳೆಗಾರರಿಗೆ ಉತ್ತಮ ಬೆಲೆ ನೀಡುವ ಉದ್ದೇಶದಿಂದ ಮಾವು ಮೇಳ ಆಯೋಜಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ನಿರ್ದೇಶಕ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.

ಇಲ್ಲಿನ ಜಾನಪದ ಲೋಕದ ಆವರಣದಲ್ಲಿ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ, ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಮಾವು ಮೇಳ ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯಲ್ಲಿ 23,350 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯುವುದರಿಂದ ಬಹುಮುಖ್ಯ ಬೆಳೆಯಾಗಿದೆ. ಬಾದಾಮಿ, ರಸಪುರಿ, ಸೇಂದೂರು, ತೋವತಾಪುರಿ, ಮಲ್ಲಿಕಾ ಮುಂತಾದ ತಳಿಗಳಿದ್ದು, ವಾರ್ಷಿಕ 1.80 ರಿಂದ 2ಲಕ್ಷ ಮೆಟ್ರಿಕ್ ಟನ್ ಬೆಳೆಯಲಾಗುತ್ತಿದೆ ಎಂದರು. 

ಮಾವಿಗೆ ಯೋಗ್ಯ ದರ ಮತ್ತು ಮಧ್ಯವರ್ತಿಗಳಿಂದ ಬೆಳೆಗಾರರಿಗಾಗುವ ವಂಚನೆ ತಡೆಯಲು ಮೇಳೆ ಆಯೋಜಿಸಲಾಗಿದೆ. ಇದರ ಮುಖಾಂತರ ಉತ್ತಮ ಗುಣಮಟ್ಟದ ಕಾರ್ಬೈಡ್ ಮುಕ್ತ ನೈಸರ್ಗಿಕ ಮಾವಿನ ಹಣ್ಣುಗಳನ್ನು ಬೆಳೆಗಾರರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸಲಾಗುವುದು ಎಂದರು.

ಜಿಲ್ಲಾಧಿಕಾರಿ ಕ್ಯಾಪ್ಟನ್ ಕೆ.ರಾಜೇಂದ್ರ ಮಾತನಾಡಿ, 22 ಮಳಿಗೆಯನ್ನು ತೆರೆಯಲಾಗಿದೆ. 50ಟನ್‌ಗೂ ಅಧಿಕ ಮಾವು ಮಾರಾಟವಾಗುವ ನಿರೀಕ್ಷೆ ಇದೆ. ಕಳೆದ ಬಾರಿ ನಿಫಾ ವೈರಸ್ ಭೀತಿ ನಡುವೆಯೂ 30 ಟನ್ ಮಾವು ಮಾರಾಟ ಮಾಡಲಾಗಿತ್ತು. ಮಾವು ಮೇಳದ ಪ್ರಯೋಜನವನ್ನು ಬೆಳೆಗಾರರು ಹಾಗೂ ಗ್ರಾಹಕರು ಪಡೆಯಬೇಕೆಂದು ಎಂದು ತಿಳಿಸಿದರು.

ಮಾವು ಮೇಳದಲ್ಲಿ ಅಡಿಕೆ, ತೆಂಗು, ನುಗ್ಗೆ ಸೇರಿದಂತೆ ವಿವಿಧ ಜಾತಿಯ ಹಣ್ಣುಗಳ ಸಸಿಗಳ ಪ್ರದರ್ಶನ ಮತ್ತು ಮಾರಾಟ ಆಯೋಜಿಸಲಾಗಿತ್ತು. ಸಿಇಒ ಎಂ.ಪಿ.ಮುಲ್ಲೈಮುಹಿಲನ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಗುಣವಂತ್, ಹಿರಿಯ ರೈತ ಮುಖಂಡ ಸಿ.ಪುಟ್ಟಸ್ವಾಮಿ, ಧರಣೀಶ್ ರಾಂಪುರ, ಸುಜೀವನ್ ಕುಮಾರ್, ಆರ್. ಚಿಕ್ಕಬೈರೇಗೌಡ, ಪುಟ್ಟಗೌರಮ್ಮ, ಎಂ.ಜಯಮ್ಮ ಇದ್ದರು.

 

Post Comments (+)