ಬಮೂಲ್‌ ಅಧ್ಯಕ್ಷ ಗಾದಿಗೆ ಪೈಪೋಟಿ

ಭಾನುವಾರ, ಮೇ 26, 2019
27 °C
ಕಾಂಗ್ರೆಸ್‌ ಪಾಳಯದಲ್ಲಿ ಟಿಕೆಟ್‌ಗೆ ತೀವ್ರ ಪೈಪೋಟಿ: ಜೆಡಿಎಸ್‌ ಒಳಗೂ ಬಿರುಸಿನ ಚಟುವಟಿಕೆ

ಬಮೂಲ್‌ ಅಧ್ಯಕ್ಷ ಗಾದಿಗೆ ಪೈಪೋಟಿ

Published:
Updated:

ರಾಮನಗರ: ಬೆಂಗಳೂರು ಸಹಕಾರಿ ಹಾಲು ಒಕ್ಕೂಟ (ಬಮೂಲ್ ) ಆಡಳಿತ ಮಂಡಳಿ ನಿರ್ದೇಶಕ ಸ್ಥಾನಗಳಿಗೆ ಹೊಸ ಪ್ರತಿನಿಧಿಗಳು ಆಯ್ಕೆಯಾದ ಬೆನ್ನಲ್ಲೇ ಅಧ್ಯಕ್ಷ ಗಾದಿ ಏರಲು ಪೈಪೋಟಿ ಶುರುವಾಗಿದೆ.

ಅಧ್ಯಕ್ಷ ಸ್ಥಾನಕ್ಕೆ ಇದೇ 22ರಂದು ಚುನಾವಣೆ ನಿಗದಿಯಾಗಿದ್ದು, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಬೆಂಬಲಿತರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಒಕ್ಕೂಟದಲ್ಲಿ ಒಟ್ಟು 13 ನಿರ್ದೇಶಕ ಸ್ಥಾನಗಳಿದ್ದು, ಇದರಲ್ಲಿ 8 ಕಾಂಗ್ರೆಸ್ ಬೆಂಬಲಿತರು , 3 ಜೆಡಿಎಸ್ ಬೆಂಬಲಿತ ಹಾಗೂ 2 ಬಿಜೆಪಿ ಬೆಂಬಲಿತರು ಆಯ್ಕೆಯಾಗಿದ್ದಾರೆ. ಮೇಲ್ನೋಟಕ್ಕೆ ಕಾಂಗ್ರೆಸ್ ಬಹುಮತ ಹೊಂದಿದ್ದರೂ ಹುದ್ದೆ ಆಕಾಂಕ್ಷಿಗಳ ನಂಬರ್‌ ಗೇಮ್‌ ಮೇಲೆ ಆಯ್ಕೆಯು ನಿರ್ಧಾರ ಆಗಲಿದೆ.

18 ವಿಧಾನಸಭಾ ಕ್ಷೇತ್ರಗಳು ಮತ್ತು 5 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯನ್ನು ಬಮೂಲ್‌ ಹೊಂದಿದೆ. ಇಲ್ಲಿ ಅಧ್ಯಕ್ಷ ಹುದ್ದೆಗೇರುವುದು ಪ್ರತಿಷ್ಠೆಯ ಪ್ರಶ್ನೆಯೂ ಆಗಿದೆ. ಹೀಗಾಗಿ ಆಕಾಂಕ್ಷಿಗಳು ಸಚಿವರು, ಶಾಸಕರ ಮಟ್ಟದಲ್ಲಿ ಲಾಬಿ ನಡೆಸುತ್ತಿದ್ದಾರೆ.

ದೋಸ್ತಿಗಳ ತೀರ್ಮಾನ ಅಂತಿಮ: ಬಮೂಲ್‌ ಅಧ್ಯಕ್ಷರ ಆಯ್ಕೆಯಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಡಿ.ಕೆ. ಸುರೇಶ್‌ರ ಪಾತ್ರ ನಿರ್ಣಾಯಕವಾಗಿದೆ.

ಅತಿ ಹೆಚ್ಚು ಮತಗಳ ಅಂತರದಿಂದ ಆಯ್ಕೆಯಾಗಿರುವ ಪಿ. ನಾಗರಾಜು ಈಗಾಗಲೇ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಬೆಂಬಲ ಕೋರಿದ್ದಾರೆ. ಆದರೆ ಕಳೆದ ಬಾರಿ ಡಿ.ಕೆ. ಸಹೋದರರಿಗೇ ಸಡ್ಡು ಹೊಡೆದು ಕೆಎಂಎಫ್‌ ಅಧ್ಯಕ್ಷ ಹುದ್ದೆ ಬಿಟ್ಟುಕೊಡಲು ನಿರಾಕರಿಸಿರುವುದು ಅವರಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಶಿವಕುಮಾರ್ ವಿರೋಧ ವ್ಯಕ್ತಪಡಿಸಲೂ ಬಹುದು. ಹಾಗೇನಾದರೂ ಆದಲ್ಲಿ ಅಧ್ಯಕ್ಷ ಹುದ್ದೆಗೆ ಬದಲಾಗಿ ಬಮೂಲ್‌ನಿಂದ ರಾಜ್ಯ ಸಮಿತಿಗೆ ಆಯ್ಕೆಯಾಗಿ ಅಲ್ಲಿ ರಾಜ್ಯ ಮಟ್ಟದಲ್ಲಿ ಸ್ಪರ್ಧೆ ಮಾಡಲು ನಾಗರಾಜು ತಂತ್ರ ರೂಪಿಸತೊಡಗಿದ್ದಾರೆ.
ಕಾಂಗ್ರೆಸ್‌ನಿಂದ ಹಲವರ ಹೆಸರುಗಳು ಚಾಲ್ತಿಯಲ್ಲಿ ಇವೆ. ಮಾಗಡಿ ಕ್ಷೇತ್ರದಿಂದ ಪುನರಾಯ್ಕೆಯಾಗಿರುವ ನರಸಿಂಹಮೂರ್ತಿ, ಕನಕಪುರ ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾಗಿರುವ ರಾಜಕುಮಾರ್ ಹಾಗೂ ಆನೇಕಲ್ ಕ್ಷೇತ್ರದ ಆಂಜಿನಪ್ಪ ಆಕಾಂಕ್ಷಿಗಳಾಗಿದ್ದಾರೆ.

ಐದನೇ ಬಾರಿಗೆ ನಿರ್ದೇಶಕರಾಗಿ ಆಯ್ಕೆಯಾಗಿರುವ ನರಸಿಂಹಮೂರ್ತಿ ಮಾಗಡಿಯ ಎಚ್‌.ಸಿ. ಬಾಲಕೃಷ್ಣರ ಮೂಲಕ ಸಚಿವ ಡಿ.ಕೆ. ಶಿವಕುಮಾರ್ ಮೇಲೆ ಒತ್ತಡ ಹೇರುತ್ತಿದ್ದಾರೆ. ರಾಜಕುಮಾರ್ ಮತ್ತು ಆಂಜಿನಪ್ಪ ಸಹ ವರಿಷ್ಠರ ಮನವೊಲಿಕೆಯ ಯತ್ನದಲ್ಲಿದ್ದಾರೆ.

ಮತಗಳೆಷ್ಟು?: ಬಮೂಲ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ 13 ನಿರ್ದೇಶಕರ ಜೊತೆಗೆ ಒಬ್ಬ ನಾಮನಿರ್ದೇಶಿತ ಸದಸ್ಯ, ಒಬ್ಬ ಕೆಎಂಎಫ್‌ ಪ್ರತಿನಿಧಿ, ಪಶುವೈದ್ಯ ಮತ್ತು ಪಶುಪಾಲನಾ ಸೇವಾ ಇಲಾಖೆಯ ಉಪನಿರ್ದೇಶಕ ಹಾಗೂ ಸಹಕಾರ ಇಲಾಖೆಯ ಜಂಟಿ ನಿರ್ದೇಶಕರು ಸೇರಿ ಒಟ್ಟು 17 ಮಂದಿ ಮತದಾನದ ಹಕ್ಕು ಹೊಂದಿದ್ದಾರೆ.

ಬಮೂಲ್‌ ನಿರ್ದೇಶಕರಿವರು
ಕಾಂಗ್ರೆಸ್ ಬೆಂಬಲಿತರು: ನರಸಿಂಹಮೂರ್ತಿ (ಮಾಗಡಿ), ರಾಜಣ್ಣ (ಕುದೂರು), ಎಚ್.ಪಿ. ರಾಜ ಕುಮಾರ್ (ಕನಕಪುರ), ಆಂಜಿನಪ್ಪ (ಆನೇಕಲ್), ಕೇಶವಮೂರ್ತಿ (ಬೆಂಗಳೂರು), ಹರೀಶ್ ಕುಮಾರ್ (ಬೆಂಗಳೂರು ದಕ್ಷಿಣ), ಆನಂದ್ ಕುಮಾರ್ (ದೊಡ್ಡಬಳ್ಳಾಪುರ), ಜಿ.ಆರ್ .ಭಾಸ್ಕರ್ (ನೆಲಮಂಗಲ).

ಜೆಡಿಎಸ್ ಬೆಂಬಲಿತರು: ಪಿ.ನಾಗರಾಜು (ರಾಮನಗರ), ಎಚ್.ಸಿ. ಜಯಮುತ್ತು (ಚನ್ನಪಟ್ಟಣ), ಬಿ.ಶ್ರೀನಿವಾಸ್ (ದೇವನಹಳ್ಳಿ).
ಬಿಜೆಪಿ ಬೆಂಬಲಿತರು : ಸಿ.ಮಂಜುನಾಥ್ (ಹೊಸಕೋಟೆ), ಎಂ.ಮಂಜುನಾಥ್ (ಬೆಂಗಳೂರು ಪೂರ್ವ).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !