ಗುರುವಾರ , ಮಾರ್ಚ್ 30, 2023
24 °C
ಜಿಲ್ಲಾಡಳಿತದಿಂದ ಬಸವ ಜಯಂತಿ ಆಚರಣೆ

‘ಬಸವಣ್ಣ ಸಮಾಜ ತಿದ್ದಿದ ಕಾಯಕ ಯೋಗಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ‘ಬಸವಣ್ಣನವರು 12ನೇ ಶತಮಾನದಲ್ಲಿ ಸಮಾಜದಲ್ಲಿ ಬೇರೂರಿದ್ದ ಜಾತಿ ಮತ ಬೇಧಗಳನ್ನು ತೊಡೆದು ಹಾಕಿ ವಚನಗಳ ಮೂಲಕ ಜನಜಾಗೃತಿ ಮೂಡಿಸಿದ ಮಹಾನ್‌ ಸಾಧಕ’ ಎಂದು ಪ್ರೊ. ಮಧುಸುಧನ್ ಆಚಾರ್ಯ ಜೋಶಿ ಬಣ್ಣಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕತಿ ಇಲಾಖೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಸಮಾಜದಲ್ಲಿ ಆಳವಾಗಿ ಬೇರೂರಿದ್ದ ಕಂದ ಸಂಪ್ರದಾಯ, ಜಾತಿ ಪದ್ದತಿ, ಮೇಲು, ಕೀಳೆಂಬ ಕಟ್ಟು ಪಾಡುಗಳಿಂದ ಜನರು ಸಂಕಷ್ಟ ಎದುರಿಸುತ್ತಿದ್ದರು. ಇಂತಹ ಸಂದರ್ಭದಲ್ಲಿ ಬಸವಣ್ಣನವರು ಸಮಾಜವನ್ನು ತಿದ್ದುವ ಕೆಲಸ ಮಾಡಿದರು. ಅವರ ವಚನಗಳ ಒಂದೊಂದು ಸಾಲುಗಳು ಕೂಡ ಅಂದಿನ ಜನರ ಸಾಮಾಜಿಕ ಬದುಕನ್ನು ಬದಲಿಸುತ್ತಾ ಬಂದಿತು. ಮಹಿಳೆಯರಿಗೂ ಕೂಡ ಹೆಚ್ಚಿನ ಪ್ರಾಧಾನ್ಯತೆ ನೀಡಿ ಸಮಾಜದಲ್ಲಿ ಸಮಾನತೆ ತರುವಲ್ಲಿ ಯಶಸ್ವಿಯಾದರು ಎಂದು ಹೇಳಿದರು.

ಸಮಾಜದ ಮುಖಂಡ ಕೇತೋಹಳ್ಳಿ ಕೆ.ಎಸ್. ಶಂಕರಯ್ಯ ಮಾತನಾಡಿ ‘ಸಮೂಹ ನಾಯಕತ್ವದ ಉದ್ದೇಶದಿಂದ ಸಂಸತ್ತಿನ ಪರಿಕಲ್ಪನೆಯ ಸಂಕಲ್ಪ ಮಾಡಿದ್ದ ಬಸವಣ್ಣ ಶೋಷಿತ ವರ್ಗಗಳ ಗಟ್ಟಿ ಧ್ವನಿಯಾಗಿದ್ದರು. ಸರ್ವರಿಗೂ ಸಮಾನತೆಯ ಸಂದೇಶದ ಸಂಕಲ್ಪವನ್ನು ತಮ್ಮ ಅನುಭವ ಮಂಟಪದ ಮೂಲಕ ಜಗತ್ತಿಗೆ ಸಾರಿದ ಮಹಾನ್ ಚೇತನ ಅವರು’ ಎಂದು ಬಣ್ಣಿಸಿದರು.

ಅಂದಿನ ಕಾಲದಲ್ಲಿಯೇ ಬಡವ, ಶ್ರೀಮಂತ ಮೇಲ್ಜಾತಿ ಕೀಳುಜಾತಿ ಹಾಗೂ ಲಿಂಗ ಅಸಮಾನತೆ ವಿರುದ್ಧ ಹೋರಾಡಿದರು. ತಮ್ಮ ಅನುಭವ ಮಂಟಪದಲ್ಲಿ ಎಲ್ಲ ಜಾತಿ ಶರಣರಿಗೂ ಅವಕಾಶ ಕಲ್ಪಿಸುವ ಮೂಲಕ ಸಮಾನತೆ ಮಹತ್ವವನ್ನು ವಿಶ್ವಕ್ಕೆ ಸಾರಿದರು. ಕಾಯಕವೇ ಕೈಲಾಸ ಎಂದು ಹೇಳುವ ಮೂಲಕ ದುಡಿಮೆಯ ಮಹತ್ವವನ್ನು ಜನರಿಗೆ ಸಾರಿ ಅವರಲ್ಲಿ ಅರಿವು ಮೂಡಿಸಿದರು. ತಾನು ಬದುಕುವುದಕ್ಕಾಗಿ ಇನ್ನೊಬ್ಬರನ್ನು ನಿರ್ನಾಮ ಮಾಡುವುದು ಸುಳ್ಳು ಹೇಳುವುದನ್ನು ಕಟುವಾಗಿ ವಿರೋಧಿಸುತ್ತಾ, ಜನರು ಬದುಕುವ ರೀತಿ ಕಲಿಸಿಕೊಟ್ಟರು ಎಂದು ವಿವರಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಪಿ ವಿಜಯ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಉಮೇಶ್, ಉಪವಿಭಾಗಾಧಿಕಾರಿ ಕೃಷ್ಣಮೂರ್ತಿ, ತಹಶೀಲ್ದಾರ್ ರಾಜು, ವೀರಶೈವ ಸಮಾಜದ ಮುಖಂಡರು ಬಸವಣ್ಣ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಜಿಲ್ಲಾ ವೈದ್ಯಾಧಿಕಾರಿ ವಿಜಯ ನರಸಿಂಹ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ್, ತಾಲೂಕು ವೀರಶೈವ ಸಂಘ ಅಧ್ಯಕ್ಷ ಶಿವಕುಮಾರಸ್ವಾಮಿ, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಎಂ.ಎಸ್. ಶಂಕರಪ್ಪ, ಮುಖಂಡರಾದ ಸುರೇಶ್, ವಿಭೂತಿಕೆರೆ ಶಿವಲಿಂಗಯ್ಯ, ರುದ್ರದೇವರು, ಬೆಂಕಿ ಮಹದೇವ್, ಐಜೂರು ಜಗದೀಶ್, ಮಹದೇವ್, ಎಂ. ಮಹೇಶ್, ರಾಜಶೇಖರ್, ಶಿವಕುಮಾರ್, ಶಂಕರ್, ವಕೀಲ ರೇಣುಕಾಪ್ರಸಾದ್, ಪ್ರಕಾಶ್, ಲೋಕೇಶ್, ಶಿವಾನಂದ್, ನಂಜುಂಡಯ್ಯ, ಜಯಮ್ಮ ಇದ್ದರು.

ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ. ರಾಜು ಸ್ವಾಗತಿಸಿ, ವಂದಿಸಿದರು. ಶಾರದಾ ನಾಗೇಶ್ ಮತ್ತು ತಂಡದವರು ವಚನ ಗಾಯನ ಪ್ರಸ್ತುತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು