ಮಂಗಳವಾರ, ನವೆಂಬರ್ 12, 2019
28 °C

ಬಾವಿಗೆ ಬಿದ್ದ ಕರಡಿಯ ರಕ್ಷಣೆ

Published:
Updated:

ರಾಮನಗರ: ತಾಲ್ಲೂಕಿನ ಯರೇಹಳ್ಳಿ ಗ್ರಾಮದಲ್ಲಿ ಶನಿವಾರ ಮುಂಜಾನೆ ಬಾವಿಗೆ ಬಿದ್ದಿದ್ದ ಕರಡಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದರು.

ಗ್ರಾಮದ ಅಂಗಡಿ ಸಿದ್ದೇಗೌಡರ ಮಗ ಕುಮಾರ್‌ ಎಂಬುವರಿಗೆ ಸೇರಿದ ತೋಟಕ್ಕೆ ಮುಂಜಾನೆ ಕರಡಿಗಳು ಲಗ್ಗೆ ಇಟ್ಟಿದ್ದವು. ಈ ಸಂದರ್ಭ ಎರಡು ಕರಡಿಗಳು ಆಹಾರಕ್ಕಾಗಿ ಪರಸ್ಪರ ಕಾದಾಡುತ್ತ ಒಂದು ಕರಡಿಯು ಹೊಲದಲ್ಲಿನ ಸುಮಾರು 40 ಅಡಿ ಆಳದ ತೆರೆದ ಬಾವಿಗೆ ಬಿದ್ದಿತು.

ಕರಡಿಯ ಕಿರುಚಾಟ ಕೇಳಿ ಗ್ರಾಮಸ್ಥರು ಬಾವಿಯತ್ತ ಧಾವಿಸಿದರು. ಸುದ್ದಿ ತಿಳಿದು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆಗೆ ಮುಂದಾದರು. ಬನ್ನೇರುಘಟ್ಟದ ಪಶು ವೈದ್ಯ ಉಮಾಶಂಕರ್ ನೇತೃತ್ವದ ಸಿಬ್ಬಂದಿ ಕರಡಿಗೆ ಅರವಳಿಕೆ ಚುಚ್ಚುಮದ್ದು ನೀಡಿದರು. ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಕರಡಿಯನ್ನು ಬಾವಿಯಿಂದ ಮೇಲಕ್ಕೆ ಎತ್ತಲಾಯಿತು.

ನಾಲ್ಕು ವರ್ಷ ಪ್ರಾಯದ ಹೆಣ್ಣು ಕರಡಿ ಇದಾಗಿದೆ. ಬಾವಿಗೆ ಬಿದ್ದ ಕಾರಣ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಬನ್ನೇರುಘಟ್ಟ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದರು.

 

ಪ್ರತಿಕ್ರಿಯಿಸಿ (+)