ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು–ಮೈಸೂರು ಹೆದ್ದಾರಿ: ಹತ್ತು ಪಥ ಸಂಚಾರಕ್ಕೆ ಶೀಘ್ರ ಮುಕ್ತ

2 ಬೈಪಾಸ್‌ಗಳಲ್ಲಿ ವಾಹನಗಳ ಓಡಾಟ ಶುರು: ತಪ್ಪಿದ ಟ್ರಾಫಿಕ್‌ ಕಿರಿಕಿರಿ
Last Updated 17 ಸೆಪ್ಟೆಂಬರ್ 2022, 3:13 IST
ಅಕ್ಷರ ಗಾತ್ರ

ಬೆಂಗಳೂರು–ಮೈಸೂರು ಹೆದ್ದಾರಿಯು ಈಗ ನಾಲ್ಕು ಪಥದಿಂದ ದಶಪಥಕ್ಕೆ ವಿಸ್ತಾರಗೊಳ್ಳುತ್ತಿದೆ. ಮೊದಲ ಹಂತದ ಕಾಮಗಾರಿಗಳು ಅಂತಿಮ ಘಟ್ಟ ತಲುಪಿದ್ದು, ಎರಡನೇ ಹಂತದ ಕಾಮಗಾರಿ ಪ್ರಗತಿಯಲ್ಲಿದೆ. ಇದರಿಂದ ಈ ಮಹಾನಗರಗಳ ನಡುವಿನ ಪ್ರಯಾಣದ ಅವಧಿ ಮೂರರಿಂದ ಒಂದೂವರೆ ಗಂಟೆಗೆ ತಲುಪಲಿದೆ ಎಂದು ನಿರೀಕ್ಷಿಸಲಾಗಿದೆ. ನೂತನ ದಶಪಥ ರಸ್ತೆಯ ವಿಶೇಷಗಳು ಏನು? ಪ್ರಯಾಣಿಕರಿಗೆ ಆಗುವ ಅನುಕೂಲಗಳೇನು? ಯಾವೆಲ್ಲ ಸೌಲಭ್ಯಗಳು ಇರಲಿವೆ? ಇದರ ನ್ಯೂನತೆಗಳೇನು? ಎಂಬುದನ್ನು ‘ಪ್ರಜಾವಾಣಿ’ ಸಾಕ್ಷಾತ್‌ ವರದಿ ಮೂಲಕ ನಿಮ್ಮ ಮುಂದೆ ಇಡಲಿದೆ.

ರಾಮನಗರ: ಬಹುನಿರೀಕ್ಷಿತ ಬೆಂಗಳೂರು–ಮೈಸೂರು ಹೆದ್ದಾರಿ ಹತ್ತು ಪಥ ಕಾಮಗಾರಿಯು ಅಂತಿಮ ಘಟ್ಟ ತಲುಪಿದ್ದು, ಈ ಬಾರಿಯ ದಸರಾದಲ್ಲಿ ಪ್ರಯಾಣಿಕರು ಹೆಚ್ಚಿನ ಟ್ರಾಫಿಕ್‌ ಕಿರಿಕಿರಿ ಇಲ್ಲದೇ ಮೈಸೂರು ತಲುಪಬಹುದಾಗಿದೆ.

ಹೆಲಿಪ್ಯಾಡ್‌ ನಿರ್ಮಾಣ ಸೇರಿದಂತೆ ಹತ್ತು ಹಲವು ವಿಶೇಷತೆ ಹೊಂದಿರುವ ಈ ‘ಎಕ್ಸ್‌ಪ್ರೆಸ್‌ ವೇ’ ಬೆಂಗಳೂರು–ಮೈಸೂರು ಕಾರಿಡಾರ್‌ನ ಅಭಿವೃದ್ಧಿಗೆ ಬೂಸ್ಟರ್ ಆಗಲಿದೆ ಎಂದು ವಿಶ್ಲೇಷಿಸಲಾಗಿದೆ. ಎರಡು ಹಂತದಲ್ಲಿ ಕೆಲಸ ನಡೆದಿದ್ದು, ಮೊದಲ ಚರಣದಲ್ಲಿ ಬೆಂಗಳೂರಿನ ನೈಸ್‌ ರಸ್ತೆ ಜಂಕ್ಷನ್‌ನಿಂದ ಮದ್ದೂರು ತಾಲ್ಲೂಕಿನ ನಿಡಘಟ್ಟವರೆಗಿನ 56.2 ಕಿ.ಮೀ ಉದ್ದದ ಹತ್ತು ಪಥದ ಹೆದ್ದಾರಿ ಕಾಮಗಾರಿ ಬಹುತೇಕ ಮುಗಿದಿದೆ. ಈಗಾಗಲೇ, ಬೈಪಾಸ್ ರಸ್ತೆ ಸಹ ಸಂಚಾರಕ್ಕೆ ಮುಕ್ತವಾಗಿದ್ದು, ವಾಹನಗಳು ಸಂಚರಿಸುತ್ತಿವೆ.

ನಿಡಘಟ್ಟದಿಂದ ಮೈಸೂರಿನ ಮಣಿಪಾಲ್ ಆಸ್ಪತ್ರೆ ಜಂಕ್ಷನ್‌ (ಕೊಲಂಬಿಯಾ ಏಷ್ಯಾ)ವರೆಗಿನ 62 ಕಿ.ಮೀ. ಉದ್ದದ ಕಾಮಗಾರಿಯು ಪ್ರಗತಿಯಲ್ಲಿದೆ. ಅಲ್ಲಲ್ಲಿ ಬೈಪಾಸ್, ಸೇತುವೆ ನಿರ್ಮಾಣ ಕಾಮಗಾರಿಗಳು ಸದ್ಯ ನಡೆದಿವೆ.

ಹತ್ತು ಪಥದಲ್ಲಿ ಆರು ಪಥಗಳು ‘ಎಕ್ಸ್‌ಪ್ರೆಸ್‌ ವೇ’ಗೆ ಮೀಸಲು. ಇದರಲ್ಲಿ ಬೆಂಗಳೂರು–ಮೈಸೂರು ಕಡೆಗೆ ತಲಾ ಮೂರು ಪಥಗಳು ಮೀಸಲಿವೆ. ಇದರ ಎಡಬಲದಲ್ಲಿ ತಲಾ ಎರಡು ಪಥಗಳ ಸರ್ವೀಸ್ ರಸ್ತೆ ಸಹ ನಿರ್ಮಾಣ ಆಗುತ್ತಿದೆ.

ಹಳೇ ಹೆದ್ದಾರಿಯಲ್ಲಿ ಬೆಂಗಳೂರಿನಿಂದ ಮೈಸೂರಿಗೆ ತೆರಳಬೇಕಾದರೆ ಕನಿಷ್ಠ 3–4 ಗಂಟೆ ಬೇಕಿತ್ತು. ಹೊಸ ಹೆದ್ದಾರಿಯಿಂದ ಟ್ರಾಫಿಕ್‌ ಕಿರಿಕಿರಿ ತಪ್ಪಲಿದ್ದು, ಬೈಪಾಸ್‌ಗಳಿಂದಾಗಿ ಸದ್ಯ ಈ ನಗರಗಳ ನಡುವಿನ ಪ್ರಯಾಣದ ಅವಧಿ ಈಗಾಗಲೇ ಸಾಕಷ್ಟು ಕಡಿಮೆ ಆಗಿದೆ. ಅಂತಿಮವಾಗಿ ಪ್ರಯಾಣದ ಒಟ್ಟು ಅವಧಿ ಸರಾಸರಿ 90 ನಿಮಿಷಕ್ಕೆ ಇಳಿಕೆ ಆಗುವ ನಿರೀಕ್ಷೆ ಇದೆ.

ಬೈಪಾಸ್‌ಗಳು ಮುಕ್ತ: ದಶಪಥ ಕಾಮಗಾರಿ ವೇಳೆ ಬರೋಬ್ಬರಿ 52 ಕಿ.ಮೀ. ನಷ್ಟು ಉದ್ದದ ಮಾರ್ಗವನ್ನು ಹೊಸತಾಗಿ ನಿರ್ಮಿಸಿರುವುದು ವಿಶೇಷ. ಇದರಿಂದಾಗಿ ಬೆಂಗಳೂರಿನಿಂದ ಮೈಸೂರಿಗೆ ನೇರ ಪ್ರಯಾಣಿಸುವವರು ಈ ಮಾರ್ಗದಲ್ಲಿನ ಪ್ರಮುಖ ನಗರಗಳಿಗೆ ಬಾರದೆಯೇ ಬೈಪಾಸ್ ಮೂಲಕ ಹಾದು ಹೋಗಬಹುದು. ಬಿಡದಿ, ರಾಮನಗರ– ಚನ್ನಪಟ್ಟಣ ಬೈಪಾಸ್‌ಗಳು ಈಗಾಗಲೇ ಸಂಚಾರಕ್ಕೆ ಮುಕ್ತವಾಗಿವೆ. ಬೆಟ್ಟ, ಗುಡ್ಡ, ಕಾಡಿನ ನಡುವೆ ಈ ಹೊಸ ರಸ್ತೆ ಹಾದು ಹೋಗಿದ್ದು, ಪ್ರಯಾಣಿಕರು ಪ್ರಕೃತಿ ಸೌಂದರ್ಯ ಸವಿಯಲು ಅವಕಾಶ ದೊರೆತಿದೆ.

ನವೀನ ಬಗೆಯ ತಂತ್ರಜ್ಞಾನ: ಹೆದ್ದಾರಿ ಕಾಮಗಾರಿಯಲ್ಲಿ ಹಲವು ನವೀನ ಬಗೆಯ ತಂತ್ರಜ್ಞಾನವನ್ನು ಬಳಸಲಾಗಿದೆ. ಪ್ರತಿ ಎರಡು ಕಿ.ಮೀ.ಗೆ ಒಂದು ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಇರಲಿದೆ. ಪ್ರತಿ 5 ಕಿ.ಮೀ.ಗೆ ಕ್ಲೋಸ್ ಯೂಟರ್ನ್‌ ಸಿಗಲಿದೆ. ಎಲಿವೇಟೆಡ್ ಕಾರಿಡಾರ್‌ಗಳಲ್ಲಿ ‘ಸ್ಲೈನ್‌ ಆ್ಯಂಡ್‌ ವಿಂಗ್‌ ಸೆಂಗ್‌ಮೆಂಟ್‌’ ತಂತ್ರಜ್ಞಾನ ಬಳಸಿದ್ದು, ವಾಹನಗಳು ಹೆಚ್ಚು ಅಲುಗಾಡುವುದು ತಪ್ಪಲಿದೆ.

ಹಲವು ವರ್ಷ ವಿಳಂಬ: ಎಸ್‌.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ವೇಳೆ ಬೆಂಗಳೂರು–ಮೈಸೂರು ರಸ್ತೆಯನ್ನು ನಾಲ್ಕು ಪಥಗಳ ಸುಸಜ್ಜಿತ ಹೆದ್ದಾರಿಯನ್ನಾಗಿ ನಿರ್ಮಿಸಲಾಗಿತ್ತು. ಆದರೆ, ನಂತರದಲ್ಲಿ ಟ್ರಾಫಿಕ್‌ ಸಮಸ್ಯೆ ಹೆಚ್ಚಾದ ಕಾರಣಕ್ಕೆ ಇದನ್ನು ಷಟ್ಪಥವನ್ನಾಗಿ ಪರಿವರ್ತಿಸಲು ಸರ್ಕಾರ ನಿರ್ಧರಿಸಿತ್ತು. 2016ರಲ್ಲಿ ಹತ್ತು ಪಥದ ಯೋಜನೆಗೆ ಅಂತಿಮ ಅನುಮೋದನೆ ದೊರೆಯಿತಾದರೂ ಭೂಸ್ವಾಧೀನ ಕಾರ್ಯ ವಿಳಂಬವಾದ ಕಾರಣ 2019ರಲ್ಲಿ ಕಾಮಗಾರಿ ಆರಂಭಗೊಂಡಿತು. ನಂತರದಲ್ಲಿಯೂ ಕೋವಿಡ್ ಹಾಗೂ ಮಳೆಯ ಕಾರಣಕ್ಕೆ ಕಾಮಗಾರಿ ಆಗಾಗ್ಗೆ ನಿಂತ ಕಾರಣ 2021ಕ್ಕೆ ಉದ್ಘಾಟನೆ ಆಗಬೇಕಿದ್ದ ದಶಪಥ ಹೆದ್ದಾರಿಯು 2023ರ ಆರಂಭಕ್ಕೆ ಉದ್ಘಾಟನೆ ಆಗುವ ನಿರೀಕ್ಷೆ ಇದೆ.

ಕೆಫೆಟೇರಿಯಾ ನಿರ್ಮಾಣ; ಹೆಲಿಪ್ಯಾಡ್‌ ವ್ಯವಸ್ಥೆ

ಎಕ್ಸ್‌ಪ್ರೆಸ್‌ ವೇನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಮಧ್ಯೆ ಎಲ್ಲೂ ಸರ್ವೀಸ್‌ ರಸ್ತೆಗೆ ಇಳಿಯಲು ಅವಕಾಶ ಇರದು. ಇಂತಹವರ ಊಟೋಪಚಾರಕ್ಕೆಂದು ವಿಶಿಷ್ಟ ಮಾದರಿಯಲ್ಲಿ ಕೆಫೆಟೇರಿಯಾ ನಿರ್ಮಿಸಲು ಯೋಜಿಸಲಾಗಿದೆ.

ಚನ್ನಪಟ್ಟಣ ತಾಲ್ಲೂಕಿನ ಕನ್ನಮಂಗಲ ಬಳಿ ಬೈಪಾಸ್ ರಸ್ತೆಗೆ ಹೊಂದಿಕೊಂಡಂತೆ ಹೋಟೆಲ್ ಸಮುಚ್ಚಯ ತಲೆ ಎತ್ತಲಿದ್ದು, ಶೌಚಾಲಯ, ಲಾರಿ ಚಾಲಕರ ವಿಶ್ರಾಂತಿಗೆ ಟರ್ಮಿನಲ್‌ ಸಹ ಇರಲಿದೆ. ಇದಲ್ಲದೆ ಇನ್ನೂ ಮೂರು ಕಡೆ ಪ್ರಯಾಣಿಕರ ವಿಶ್ರಾಂತಿ ಸ್ಥಳಗಳು ತಲೆ ಎತ್ತಲಿವೆ.

ರಾಮನಗರ–ಚನ್ನಪಟ್ಟಣ ಬೈಪಾಸ್‌ಗೆ ಹೊಂದಿಕೊಂಡಂತೆ ಹೆಲಿಪ್ಯಾಡ್‌ ನಿರ್ಮಾಣಕ್ಕೆ ಸಹ ಹೆದ್ದಾರಿ ಪ್ರಾಧಿಕಾರ ಯೋಜಿಸಿದ್ದು, ಇದಕ್ಕೆ ಕೇಂದ್ರದ ಅನುಮತಿಯೂ ಸಿಕ್ಕಿದೆ. ಆರೋಗ್ಯ ಮತ್ತಿತರ ತುರ್ತು ಸೇವೆಗಳು ಹಾಗೂ ಗಣ್ಯರ ಓಡಾಟಕ್ಕೆ ಇದನ್ನು ಬಳಸಿಕೊಳ್ಳಬಹುದಾಗಿದೆ.

ವಿಡಿಯೊ ನೋಡಿ:ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ವೇ: ಒಂದೂವರೆ ತಾಸಿನ ಪ್ರಯಾಣ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT