ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಘಟನೆ, ವೈಯಕ್ತಿಕ ವರ್ಚಸ್ಸಿಗೆ ಒಲಿದ ಜಯ

ಸಂಸದರಾಗಿ ಕಾಂಗ್ರೆಸ್‌ನ ಡಿ.ಕೆ. ಸುರೇಶ್‌ ಮರು ಆಯ್ಕೆ: ನಿರ್ಲಕ್ಷ್ಯ ಧೋರಣೆಗೆ ಪಾಠ ಕಲಿತ ಬಿಜೆಪಿ
Last Updated 23 ಮೇ 2019, 13:41 IST
ಅಕ್ಷರ ಗಾತ್ರ

ರಾಮನಗರ: ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ನಿರೀಕ್ಷಿತ ಫಲಿತಾಂಶ ಸಿಕ್ಕಿದೆ. ಇಲ್ಲಿ ಪಕ್ಷಕ್ಕಿಂತ ಡಿ.ಕೆ. ಸಹೋದರರ ವರ್ಚಸ್ಸು ಮತ್ತು ಸಂಘಟನೆ ಹೆಚ್ಚು ಕೆಲಸ ಮಾಡಿದೆ.

ಸುರೇಶ್‌ಗಿದು ಕ್ಷೇತ್ರದಲ್ಲಿ ಮೂರನೆಯ ಗೆಲುವು. ಕಳೆದ ಎರಡು ಚುನಾವಣೆಯನ್ನು ಎದುರಿಸಿದ್ದ ಅವರು ಇಲ್ಲಿನ ರಾಜಕಾರಣದ ನಾಡಿ ಮಿಡಿತ ಅರಿತಿದ್ದರು. ಈ ಬಾರಿ ಗೆಲುವಿಗೆಂದೇ ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದರು. ಆರು ತಿಂಗಳ ಹಿಂದೆ ರಾಮನಗರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಪರವಾಗಿ ಅವಿರತ ಪ್ರಚಾರ ಮಾಡಿದ್ದರ ಹಿಂದೆ ಲೋಕಸಭಾ ಚುನಾವಣೆಗೆ ಸಿದ್ಧತೆಯ ದೂರದೃಷ್ಟಿಯೂ ಇತ್ತು.

ಕ್ಷೇತ್ರದಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳಿವೆ. ಇಲ್ಲಿ 4ರಲ್ಲಿ ಕಾಂಗ್ರೆಸ್‌ನ ಶಾಸಕರು ಹಾಗೂ ಮೂರರಲ್ಲಿ ಜೆಡಿಎಸ್‌ಶಾಸಕರು ಇದ್ದಾರೆ. ಈ ಬಾರಿ ಕ್ಷೇತ್ರದಲ್ಲಿ ಮೈತ್ರಿ ಏರ್ಪಟ್ಟಿದ್ದು, ಈ ಎಲ್ಲ ಶಾಸಕರ ಬೆಂಬಲವೂ ಸಿಕ್ಕಿತು. ಇದರಿಂದಾಗಿ ಸುರೇಶ್‌ಗೆ ಸ್ಥಳೀಯರ ಸಹಕಾರ ಹೆಚ್ಚಿ, ಪ್ರಚಾರಕ್ಕೆ ಅನುಕೂಲವೂ ಆಯಿತು.

ಕೈಗೆ ಸಿಗುವ ಸಂಸದ: ಸಂಸದರಾಗಿ ಕಳೆದ ಎರಡು ಅವಧಿಯಲ್ಲಿನ ಅವರ ಕಾರ್ಯಗಳ ಬಗ್ಗೆ ಜನರಲ್ಲಿ ಸಮಾಧಾನದ ಭಾವವಿತ್ತು. ಜನಸಾಮಾನ್ಯರಿಗೆ ಸಿಗುವ ರಾಜಕಾರಣಿಯಾಗಿ ಕೆಲವು ಜನಪರ ಕಾರ್ಯಗಳನ್ನೂ ಮಾಡುತ್ತಾ ಬಂದಿದ್ದರು. ನರೇಗಾ ಅನುದಾನ ಸದ್ಬಳಕೆ, ದಾಖಲೆಯ ಸಂಖ್ಯೆಯಲ್ಲಿ ಚೆಕ್‌ ಡ್ಯಾಮ್‌ಗಳ ನಿರ್ಮಾಣ, ಮೈಸೂರು–ಬೆಂಗಳೂರು ಹೆದ್ದಾರಿ ವಿಸ್ತರಣೆ ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳ ಮೂಲಕ ಗಮನ ಸೆಳೆದಿದ್ದರು. ಪ್ರಗತಿ ಪರಿಶೀಲನಾ ಸಭೆಗಳಲ್ಲಿ ತಪ್ಪದೇ ಪಾಲ್ಗೊಂಡು ಅಧಿಕಾರಿಗಳ ಕಿವಿ ಹಿಂಡಿ ಕೆಲಸ ಮಾಡಿಸುವ ಪ್ರವೃತ್ತಿ ಹೊಂದಿದ್ದರು. ಈ ಎಲ್ಲ ಅಂಶಗಳು ಅವರ ಪರವಾಗಿ ಕೆಲಸ ಮಾಡಿವೆ. ಅವರ ಮೇಲೆ ಬಿಜೆಪಿ ಮಾಡಿದ ಅಕ್ರಮ ಗಣಿಗಾರಿಕೆ, ಅಕ್ರಮ ಆಸ್ತಿ ಗಳಿಕೆ ಮೊದಲಾದ ಆರೋಪಗಳಿಗೆ ಜನರು ಸೊಪ್ಪು ಹಾಕಿಲ್ಲ.

ಬಿಜೆಪಿಯದ್ದು ಸ್ವಯಂಕೃತ ಅಪರಾಧ: ಕ್ಷೇತ್ರದ ಬಗೆಗಿನ ನಿರ್ಲಕ್ಷ್ಯ ಧೋರಣೆಯೇ ಬಿಜೆಪಿ ಸೋಲಿಗೆ ಪ್ರಮುಖ ಕಾರಣ ಎನ್ನುವುದು ಆ ಪಕ್ಷದ ಕಾರ್ಯಕರ್ತರ ಆರೋಪ.

ಮೊದಲನೆಯದಾಗಿ ಅಭ್ಯರ್ಥಿ ಆಯ್ಕೆಗೆ ಪಕ್ಷದ ವರಿಷ್ಠರು ಹೆಚ್ಚು ಗಮನ ನೀಡಲಿಲ್ಲ. ಕಡೆಯ ಕ್ಷಣದಲ್ಲಿ ಪಕ್ಷದ ವಕ್ತಾರ ಅಶ್ವಥ್‌ ನಾರಾಯಣ್‌ಗೆ ಟಿಕೆಟ್‌ ಘೋಷಿಸಲಾಯಿತು. ಅವರು ತರಾತುರಿಯಲ್ಲಿ ನಾಮಪತ್ರ ಸಲ್ಲಿಸಿ ಪ್ರಚಾರ ಆರಂಭಿಸಿದರು.

ಕ್ಷೇತ್ರದಾದ್ಯಂತ ಬಿಜೆಪಿಗೆ ಹೆಚ್ಚು ನೆಲೆ ಇಲ್ಲ. ಕೇವಲ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಮಾತ್ರ ಕೇಸರಿ ಪಾಳಯದ ಶಾಸಕರು ಇದ್ದರು. ಹೀಗಾಗಿ ಪ್ರಚಾರ ಕಾರ್ಯಕ್ಕೆ ಸ್ಥಳೀಯವಾಗಿ ಬೇಕಾದ ಬೆಂಬಲ ಸಿಗಲಿಲ್ಲ. ಬೂತ್‌ ಮಟ್ಟದಲ್ಲಿ ಕಾರ್ಯಕರ್ತರ ಸಂಘಟನೆಯ ಕೊರತೆಯು ಮತ ಗಳಿಕೆಯ ಮೇಲೆ ಪ್ರಭಾವ ಬೀರಿತು.

ಅಭ್ಯರ್ಥಿ ಪರ ಪ್ರಚಾರಕ್ಕೆ ರಾಷ್ಟ್ರೀಯ ನಾಯಕರಾಗಲಿ, ರಾಜ್ಯ ಮಟ್ಟದ ನಾಯಕರಾಗಲಿ ಬರಲೇ ಇಲ್ಲ. ಮೋದಿ ಇರಲಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಕೂಡ ಇತ್ತ ತಲೆ ಹಾಕಲಿಲ್ಲ. ಆರ್. ಅಶೋಕ್‌, ಕಟ್ಟಾ ಸುಬ್ರಮಣ್ಯನಾಯ್ಡು ಮೊದಲಾದವರು ಆಗೊಮ್ಮೆ ಈಗೊಮ್ಮೆ ಬಂದು ಹೋದರು. ಸಿ.ಪಿ. ಯೋಗೇಶ್ವರ್‌ರನ್ನೇ ಪ್ರಚಾರಕ್ಕೆ ನೆಚ್ಚಿಕೊಳ್ಳುವಂತಹ ಸ್ಥಿತಿ ಬಂದಿತು.

ನಗರ ಪ್ರದೇಶದಲ್ಲಿ ಹೆಚ್ಚು ಮತದಾನ ನಡೆದರೆ ತನಗೆ ಲಾಭ ಎನ್ನುವುದು ಬಿಜೆಪಿ ನಿರೀಕ್ಷೆ ಆಗಿತ್ತು. ಆದರೆ ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿ ನಗರ ಹಾಗೂ ಆನೇಕಲ್‌ನಲ್ಲಿ ಕನಿಷ್ಠ ಮತದಾನ ನಡೆಯಿತು. ಈ ಮೂರು ಕ್ಷೇತ್ರಗಳಲ್ಲಿ ಬಿಜೆಪಿಗೆ ತಕ್ಕ ಮಟ್ಟಿಗೆ ಮುನ್ನಡೆ ಸಿಕ್ಕಿದರೂ ಹೆಚ್ಚು ಮತದಾನವಾಗದ ಕಾರಣ ಬಿಜೆಪಿ ನಿರೀಕ್ಷೆ ಹುಸಿಯಾಯಿತು. ಕಾಂಗ್ರೆಸ್ ಹಾಗೂ ಜೆಡಿಎಸ್‌ ಪ್ರಾಬಲ್ಯ ಇರುವ ರಾಮನಗರ ಜಿಲ್ಲೆಯ ನಾಲ್ಕೂ ಕ್ಷೇತ್ರಗಳು ಹಾಗೂ ತುಮಕೂರು ಜಿಲ್ಲೆಯ ಕುಣಿಗಲ್‌ನಲ್ಲಿ ಹೆಚ್ಚಿನ ಮತದಾನ ನಡೆದಿದ್ದು, ಇಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಮತ ಚಲಾವಣೆ ಆಗಿದ್ದವು.

**
ಸೋತರೂ ಮತ ಗಳಿಕೆಯಲ್ಲಿ ಸಾಧನೆ

ಬಿಜೆಪಿ ಸೋತಿದ್ದರೂ ಕ್ಷೇತ್ರದಲ್ಲಿ ಹಿಂದೆಂದಿಗಿಂತ ಹೆಚ್ಚು ಮತ ಗಳಿಸಲು ಸಾಧ್ಯವಾಗಿರುವುದಕ್ಕೆ ಪಕ್ಷದ ಕಾರ್ಯಕರ್ತರು ಖುಷಿ ವ್ಯಕ್ತಪಡಿಸುತ್ತಾರೆ.

ಈ ಕ್ಷೇತ್ರದಲ್ಲಿ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಏರ್ಪಟ್ಟಿದ್ದರಿಂದ ಬಿಜೆಪಿಗೆ ಭಾರಿ ಹಿನ್ನಡೆ ಆಗಬಹುದು ಎನ್ನಲಾಗಿತ್ತು. ಆದರೆ ಫಲಿತಾಂಶ ಸುಧಾರಿಸಿದೆ. ಕಾಂಗ್ರೆಸ್ ಅಭ್ಯರ್ಥಿ ಹಿಂದಿನ ಚುನಾವಣೆಗಿಂತ ಕಡಿಮೆ ಅಂತರದಲ್ಲಿ ಗೆದ್ದಿರುವುದು ಬಿಜೆಪಿ ಕಾರ್ಯಕರ್ತರಲ್ಲಿ ಸಮಾಧಾನವನ್ನೇ ತಂದಿದೆ.

**
ರಾಜ್ಯದ ಏಕೈಕ ಕಾಂಗ್ರೆಸ್‌ ಸಂಸದ
ಈ ಬಾರಿಯ ಚುನಾವಣೆಯಲ್ಲಿ ರಾಜ್ಯದಿಂದ ಕಾಂಗ್ರೆಸ್‌ನಿಂದ ಆಯ್ಕೆಯಾದ ಏಕೈಕ ಸಂಸದ ಎನ್ನುವ ಕೀರ್ತಿ ಸುರೇಶ್‌ಗೆ ಸಂದಿದೆ.
ಇಡೀ ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳು ಮುಗ್ಗಿರಿಸಿದ್ದರೂ ಸುರೇಶ್‌ ಗೆಲುವಿಗೆ ಮಾತ್ರ ಯಾವುದೇ ಅಡ್ಡಿಯಾಗಿಲ್ಲ. ಎರಡು ಲಕ್ಷಗಳ ಭಾರಿ ಅಂತರದ ಜಯ ಅವರ ವರ್ಚಸ್ಸು ಹೆಚ್ಚಿಸಿದೆ. ಇದರಿಂದಾಗಿ ಪಕ್ಷದಲ್ಲಿ ಮುಂದೆ ದೊಡ್ಡ ಅವಕಾಶ ಮತ್ತು ಜವಾಬ್ದಾರಿ ದೊರೆಯುವ ಸಾಧ್ಯತೆಯೂ ಇದೆ.

**

ಜನರು ಮೂರನೇ ಬಾರಿ ಸಂಸದನಾಗುವ ಅವಕಾಶ ನೀಡಿದ್ದಾರೆ. ಇದು ಪಕ್ಷದ ನನ್ನೆಲ್ಲ ಕಾರ್ಯಕರ್ತರು, ಕಾಂಗ್ರೆಸ್‌, ಜೆಡಿಎಸ್‌ ಮುಖಂಡರ ಶ್ರಮಕ್ಕೆ ಸಂದ ಫಲ
- ಡಿ.ಕೆ. ಸುರೇಶ್‌, ನೂತನ ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT