ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ: ಮತದಾನ ಪ್ರಕ್ರಿಯೆಗೆ ಕ್ಷಣಗಣನೆ

2762 ಮತಗಟ್ಟೆಗಳಲ್ಲಿ ಹಕ್ಕು ಚಲಾವಣೆಗೆ ಅವಕಾಶ
Last Updated 3 ಮೇ 2019, 15:42 IST
ಅಕ್ಷರ ಗಾತ್ರ

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚುನಾವಣೆಯ ಮತದಾನ ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿದೆ.

ಗುರುವಾರ ಬೆಳಗ್ಗೆ 7ಕ್ಕೆ ಮತದಾನವು ಆರಂಭಗೊಳ್ಳಲಿದ್ದು, ಸಂಜೆ 6ರವರೆಗೂ ಮತದಾರರು ತಮ್ಮ ಹಕ್ಕು ಚಲಾವಣೆ ಮಾಡಲು ಅವಕಾಶ ಇರಲಿದೆ. ಮತ ಚಲಾವಣೆ ಪ್ರಕ್ರಿಯೆಯನ್ನು ಸುಗಮಗೊಳಿಸಲು ಬೇಕಾದ ಎಲ್ಲ ಸಿದ್ಧತೆಗಳನ್ನು ಚುನಾವಣಾ ಆಯೋಗವು ಮಾಡಿಕೊಂಡಿದೆ.

ಕ್ಷೇತ್ರದಲ್ಲಿ ಬರೋಬ್ಬರಿ 24.97 ಲಕ್ಷ ಮತದಾರರು ಹಕ್ಕು ಚಲಾಯಿಸುವ ಅವಕಾಶ ಹೊಂದಿದ್ದಾರೆ. ಇಲ್ಲಿ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಹಾಗೂ ಪಕ್ಷೇತರರೂ ಸೇರಿ ಒಟ್ಟು 15 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ಕ್ಷೇತ್ರದಲ್ಲಿ ಒಟ್ಟು 2762 ಮತಗಟ್ಟೆಗಳಿವೆ. ಪ್ರತಿ ಮತಗಟ್ಟೆಗೆ ತಲಾ ಒಬ್ಬರು ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿ, ಮತದಾನಾಧಿಕಾರಿ ಹಾಗೂ ಡಿ ದರ್ಜೆ ನೌಕರರ ಸೇವೆಯನ್ನು ಒದಗಿಸಲಾಗಿದೆ. ಇದರೊಟ್ಟಿಗೆ ಅರೆ ಸೇನಾಪಡೆ, ಪೊಲೀಸ್ ಹಾಗೂ ಗೃಹರಕ್ಷಕ ಸಿಬ್ಬಂದಿ ಕಾವಲು ಕಾಯಲಿದ್ದಾರೆ. ಪ್ರತಿ ಮತಗಟ್ಟೆಗೆ ಬೆಳಕಿನ ವ್ಯವಸ್ಥೆ, ವಿದ್ಯುತ್‌, ಶೌಚಾಲಯ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಲಾಗಿದ್ದು, ಅಧಿಕಾರಿಗಳು ಎಲ್ಲವನ್ನೂ ಪರಿಶೀಲಿಸಿ ಖಾತ್ರಿ ಮಾಡಿಕೊಂಡಿದ್ದಾರೆ.

ಮತದಾರರ ಸೆಳೆಯುವ ಯತ್ನ: ಮಹಿಳಾ ಮತದಾರರು, ಅಂಗವಿಕಲರು ಹಾಗೂ ಹಿರಿಯ ನಾಗರಿಕರನ್ನು ಸೆಳೆಯಲು ಚುನಾವಣಾ ಆಯೋಗ ಹಾಗೂ ಸ್ವೀಪ್ ಸಮಿತಿಯು ವಿವಿಧ ಕ್ರಮಗಳನ್ನು ಕೈಗೊಂಡಿದೆ.

ಕಳೆದ ವಿಧಾನಸಭೆ ಚುನಾವಣೆಯಂತೆ ಇಲ್ಲಿಯೂ ಮಹಿಳಾ ವಿಶೇಷ ಮತಗಟ್ಟೆಗಳು ಇರಲಿದ್ದು, ಇವುಗಳನ್ನು ‘ಸಖಿ’ ಹೆಸರಿನಿಂದ ಗುರುತಿಸಲಾಗಿದೆ. ಸಂಪೂರ್ಣ ಮಹಿಳಾ ಸಿಬ್ಬಂದಿಯೇ ಇಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಮತದಾರರ ಆಕರ್ಷಣೆಗಾಗಿ ಈ ಮತಗಟ್ಟೆಗಳನ್ನು ವಿಶೇಷವಾಗಿ ಸಿಂಗರಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಎರಡರಂತೆ ಒಟ್ಟು 16 ಸಖಿ ಮತಗಟ್ಟೆಗಳು ಕಾರ್ಯ ನಿರ್ವಹಿಸಲಿವೆ.

ರಾಮನಗರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ಒಂದರಂತೆ ಅಂಗವಿಕಲರ ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಇಲ್ಲಿ ಸಂಪೂರ್ಣ ಅಂಗವಿಕಲ ಸಿಬ್ಬಂದಿಯೇ ಕಾರ್ಯ ನಿರ್ವಹಿಸಲಿದ್ದಾರೆ. ಇದರಲ್ಲದೆ ಕ್ಷೇತ್ರಕ್ಕೆ ಒಂದರಂತೆ ಮಾದರಿ ಮತಗಟ್ಟೆಗಳೂ ಕಾರ್ಯ ನಿರ್ವಹಿಸಲಿವೆ.

ಅಂಗವಿಕಲರೇ ಬನ್ನಿ ಮತಗಟ್ಟೆಗೆ: ಅಂಗವಿಕಲರನ್ನು ಮತಗಟ್ಟೆಗೆ ಕರೆತರಲು ಆಯೋಗವು ಹಲವು ವ್ಯವಸ್ಥೆಗಳನ್ನು ಮಾಡಿದೆ. ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 13,109 ಅಂಗವಿಕಲರು ಇದ್ದಾರೆ. ಇವರ ಮನೆ ಬಾಗಿಲಿಗೆ ವಾಹನ ಸೇವೆಯು ಲಭ್ಯವಾಗಲಿದೆ. ಇದಕ್ಕಾಗಿ 415 ವಾಹನಗಳನ್ನು ಮೀಸಲಿಡಲಾಗಿದೆ. ಮತಗಟ್ಟೆಗೆ ಬರುವ ಅಶಕ್ತರಿಗೆ ವೀಲ್‌ಚೇರ್‌ ವ್ಯವಸ್ಥೆ ಸಹ ಇದೆ. ಅಂಧರು ಮತದಾನ ಮಾಡಲು ಅನುಕೂಲ ಆಗುವಂತೆ ಅವರಿಗೆ ಬ್ರೈಲ್‌ ಲಿಪಿ ಇರುವ ಫಾರ್ಮ್‌ 7ಎ ಅನ್ನು ನೀಡಲಾಗಿದೆ.

ಮತಗಟ್ಟೆಯತ್ತ ಹೊರಟ ಅಧಿಕಾರಿಗಳು: ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಮಸ್ಟರಿಂಗ್ ಪ್ರಕ್ರಿಯೆಯು ಬುಧವಾರ ನಡೆಯಿತು.

ಬೆಳಗ್ಗೆ ಮಸ್ಟರಿಂಗ್‌ ಕೇಂದ್ರಗಳಿಗೆ ಧಾವಿಸಿದ ಚುನಾವಣಾ ಸಿಬ್ಬಂದಿಗೆ ಅಂತಿಮ ಹಂತದ ತರಬೇತಿಯನ್ನು ನೀಡಲಾಯಿತು. ಬಳಿಕ ಅವರಿಗೆ ಇವಿಎಂ ಯಂತ್ರಗಳು, ವಿವಿಪ್ಯಾಟ್‌ ಸಹಿತ ಅಗತ್ಯ ಚುನಾವಣಾ ಸಾಮಗ್ರಿಗಳನ್ನು ಒದಗಿಸಲಾಯಿತು. ಯಂತ್ರಗಳನ್ನು ಪರಿಶೀಲಿಸಿ ಖಾತ್ರಿಪಡಿಸಿಕೊಂಡ ಸಿಬ್ಬಂದಿ ಊಟದ ಬಳಿಕ ತಮಗೆ ನಿಗದಿಪಡಿಸಿದ ವಾಹನಗಳನ್ನೇರಿ ಮತಗಟ್ಟೆಗಳತ್ತ ಹೆಜ್ಜೆ ಹಾಕಿದರು. ಸಂಜೆಯ ವೇಳೆಗೆ ಬಹುತೇಕ ಚುನಾವಣಾ ಸಿಬ್ಬಂದಿ ತಮಗೆ ನಿಗದಿಪಡಿಸಲಾದ ಮತಗಟ್ಟೆಗಳನ್ನು ತಲುಪಿದರು.

ಈ ಬಾರಿಯ ಚುನಾವಣೆಯಲ್ಲಿ ಒಟ್ಟು 12,399 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಓಡಾಟಕ್ಕಾಗಿ 374 ಬಸ್‌, 166 ಮ್ಯಾಕ್ಸಿಕ್ಯಾಬ್‌, ಮಿನಿ ಬಸ್ ಹಾಗೂ 83 ಜೀಪ್‌ಗಳ ವ್ಯವಸ್ಥೆಯನ್ನು ಮಾಡಲಾಗಿದೆ.

ಪೊಲೀಸರ ಮೇಲೆ ಗರಂ: ರಾಮನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾದ ಪೊಲೀಸ್ ಸಿಬ್ಬಂದಿ ಪೈಕಿ ಕೆಲವರು ನಿಗದಿತ ಸಮಯಕ್ಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿನ ಮಸ್ಟರಿಂಗ್‌ ಕೇಂದ್ರದಲ್ಲಿ ಹಾಜರಿರಲಿಲ್ಲ. ಇದರಿಂದ ಉಳಿದ ಸಿಬ್ಬಂದಿಯು ವಾಹನಗಳಲ್ಲಿ ತೆರಳಲು ಅಡ್ಡಿಯಾಗಿದ್ದನ್ನು ಕಂಡುಗರಂ ಆದ ಕ್ಷೇತ್ರದ ಚುನಾವಣಾಧಿಕಾರಿ ಎ.ಸಿ. ಕೃಷ್ಣಮೂರ್ತಿ, ಕೆಲವು ಪೊಲೀಸ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ಕ್ಷೇತ್ರದ ಚುನಾವಣಾ ಅಧಿಕಾರಿ ಕೆ. ರಾಜೇಂದ್ರ ಹಾಗೂ ಚುನಾವಣಾ ವೀಕ್ಷಕರು ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲಿಸಿದರು.

ಸಾರ್ವತ್ರಿಕ ರಜೆ

ಮತದಾನದಲ್ಲಿ ಪ್ರತಿಯೊಬ್ಬರು ಬಾಗಿಯಾಗಬೇಕು ಎನ್ನುವ ಸದುದ್ದೇಶದಿಂದ ಜಿಲ್ಲಾಡಳಿತವು ಗುರುವಾರ ಸಾರ್ವತ್ರಿಕ ರಜೆ ಘೋಷಣೆ ಮಾಡಿದೆ. ಕ್ಷೇತ್ರ ವ್ಯಾಪ್ತಿಯ ಎಲ್ಲ ಸರ್ಕಾರಿ ಕಚೇರಿಗಳು, ಕಾಲೇಜುಗಳು, ಬ್ಯಾಂಕ್‌ಗಳು ರಜೆ ಇರಲಿವೆ.
ಖಾಸಗಿ ಸಂಸ್ಥೆಗಳು ಹಾಗೂ ಕಾರ್ಖಾನೆಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ವೇತನ ಸಹಿತ ಕಡ್ಡಾಯ ರಜೆ ಘೋಷಿಸುವಂತೆ ಜಿಲ್ಲಾಧಿಕಾರಿ ಈಗಾಗಲೇ ಸೂಚನೆ ನೀಡಿದ್ದಾರೆ. ನಿಯಮ ಉಲ್ಲಂಘನೆ ಮಾಡಿದಲ್ಲಿ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನೂ ನೀಡಿದ್ದಾರೆ.

ಇವುಗಳಲ್ಲಿ ಇರಲಿ ಒಂದು ದಾಖಲೆ

ಮತದಾರರ ಗುರುತಿನ ಚೀಟಿಯ ಜೊತೆಗೆ ಇತರ ಪರ್ಯಾಯ ದಾಖಲೆಗಳನ್ನು ಹಾಜರುಪಡಿಸಿ ಮತದಾರರು ತಮ್ಮ ಹಕ್ಕು ಚಲಾಯಿಸಬಹುದಾಗಿದೆ.

ಆಧಾರ್‌ ಕಾರ್ಡ್, ಪಾಸ್ ಪೋರ್ಟ್, ವಾಹನ ಚಾಲನಾ ಪರವಾನಗಿ, ಸರ್ಕಾರಿ/ಖಾಸಗಿ ಸಂಸ್ಥೆಗಳು ನೀಡಿರುವ ಗುರುತಿನ ಪತ್ರಗಳು, ಬ್ಯಾಂಕ್‌ ಅಥವಾ ಅಂಚೆಕಚೇರಿ ಪಾಸ್‌ಪುಸ್ತಕ, ಪಾನ್‌ ಕಾರ್ಡ್‌ ಆರ್‌ಜಿಐ ಸ್ಮಾರ್ಟ್‌ ಕಾರ್ಡ್‌, ನರೇಗಾ ಜಾಬ್‌ ಕಾರ್ಡ್‌, ಆಧಾರ್‌ ಕಾರ್ಡ್‌, ಇಎಸ್‌ಐ ಆರೋಗ್ಯ ವಿಮೆ ಸಾರ್ಟ್‌ ಕಾರ್ಡ್‌ ಗಳ ಪೈಕಿ ಒಂದನ್ನು ತೋರಿಸಿ ಮತದಾನ ಮಾಡಬಹುದಾಗಿದೆ.

ಮತಗಟ್ಟೆಗಳಿಗೆ ಸಿಂಗಾರ

ಚುನಾವಣಾ ಆಯೋಗವು ಇದೇ ಮೊದಲ ಬಾರಿಗೆ ಅಂಗವಿಕಲ ಸಿಬ್ಬಂದಿಯೇ ಕಾರ್ಯ ನಿರ್ವಹಿಸುವ ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಿದ್ದು, ಅವುಗಳನ್ನು ಅಷ್ಟೇ ವಿಶೇಷವಾಗಿ ಅಲಂಕಾರಗೊಳಿಸಲಾಗಿದೆ.

ರಾಮನಗರದ ನೆಹರೂ ಶಾಲೆ ಆವರಣದಲ್ಲಿನ ಮತಗಟ್ಟೆ ಸಂಖ್ಯೆ 67ನ್ನು ಬುಧವಾರ ಮದುವಣಗಿತ್ತಿಯಂತೆ ಸಿಂಗಾರ ಮಾಡಲಾಗಿತ್ತು. ಸುತ್ತಲೂ ಕಂಬ ನೆಟ್ಟು, ಅವುಗಳಿಗೆ ನಾಡಧ್ವಜದ ಬಣ್ಣ ನೀಡಲಾಗಿತ್ತು. ಇಲ್ಲಿ ನಾಲ್ವರು ಚುನಾವಣಾ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದು, ಎಲ್ಲರೂ ಅಂಗವಿಕಲರೇ ಆಗಿದ್ದಾರೆ. ಜಿಲ್ಲೆಯಲ್ಲಿ ಇಂತಹ ಇನ್ನೂ ಮೂರು ಮತಗಟ್ಟೆಗಳನ್ನು ಸಿಂಗರಿಸಲಾಗಿದೆ. ಇದಲ್ಲದೆ ಸಖಿ ಮತಗಟ್ಟೆಗಳು ತಿಳಿ ಗುಲಾಬಿ ಬಣ್ಣದಿಂದ ಕಂಗೊಳಿಸುತ್ತಿದ್ದು, ಅಲ್ಲಿ ಪೂರ್ಣ ಮಹಿಳಾ ಸಿಬ್ಬಂದಿಯೇ ಕಾರ್ಯ ನಿರ್ವಹಿಸಲಿದ್ದಾರೆ.

* ಮುಕ್ತ, ನ್ಯಾಯಸಮ್ಮತ ಮತದಾನಕ್ಕೆ ಬೇಕಾದ ಎಲ್ಲ ಸಿದ್ಧತೆಗಳೂ ಪೂರ್ಣಗೊಂಡಿವೆ. ಮತದಾರರು ನಿರ್ಭೀತಿಯಿಂದ ತಪ್ಪದೇ ತಮ್ಮ ಹಕ್ಕು ಚಲಾಯಿಸಬೇಕು
–ಕೆ. ರಾಜೇಂದ್ರ,ಚುನಾವಣಾಧಿಕಾರಿ

ಇದು ನಿಮಗೆ ನೆನಪಿರಲಿ

* ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಮತದಾನಕ್ಕೆ ಅವಕಾಶ

* ಮತಗಟ್ಟೆಗೆ ಮೊಬೈಲ್, ಕ್ಯಾಮೆರಾ ಕೊಂಡೊಯ್ಯುವಂತಿಲ್ಲ

* ಮತದಾನಕ್ಕೆ ಮುನ್ನ ಗುರುತಿನ ಚೀಟಿ ತೋರಿಸುವುದು ಕಡ್ಡಾಯ

* ಎಡಗೈ ತೋರು ಬೆರಳಿಗೆ ಶಾಹಿ ಗುರುತು

ಬೆಂಗಳೂರು ಗ್ರಾಮಾಂತರ ಕ್ಷೇತ್ರ ಮತದಾರರ ವಿವರ

ವಿಧಾನಸಭಾ ಕ್ಷೇತ್ರ ಪುರುಷರು ಮಹಿಳೆಯರು ಇತರೆ ಒಟ್ಟು

ಕುಣಿಗಲ್‌ 96,670 94,228 15 1,90,992
ರಾಜರಾಜೇಶ್ವರಿ ನಗರ 2,35,471 2,15,377 80 4,50,945
ಬೆಂಗಳೂರು ದಕ್ಷಿಣ 3,28,260 2,88,649 102 6,17,045
ಅನೇಕಲ್‌ 1,92,447 1,71,286 85 3,63,830
ಮಾಗಡಿ 1,13,547 1,11,673 19 2,25,312
ರಾಮನಗರ 1,04,176 1,05,655 24 2,09,878
ಕನಕಪುರ 1,10,241 1,10,902 9 2,21,182
ಚನ್ನಪಟ್ಟಣ 1,06,712 1,11,506 7 2,18,274

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT