ಬಂಡವಾಳಶಾಹಿ ವ್ಯವಸ್ಥೆ ವಿರುದ್ಧ ಹೋರಾಟ: ಟಿ.ಸಿ. ರಮಾ ಮನದ ಮಾತು

ಬುಧವಾರ, ಏಪ್ರಿಲ್ 24, 2019
31 °C
ಸೋಷಲಿಸ್ಟ್‌ ಯೂನಿಟಿ ಸೆಂಟರ್‌ ಅಫ್‌ ಇಂಡಿಯಾ ಅಭ್ಯರ್ಥಿ

ಬಂಡವಾಳಶಾಹಿ ವ್ಯವಸ್ಥೆ ವಿರುದ್ಧ ಹೋರಾಟ: ಟಿ.ಸಿ. ರಮಾ ಮನದ ಮಾತು

Published:
Updated:
Prajavani

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಸೋಷಲಿಸ್ಟ್‌ ಯೂನಿಟಿ ಸೆಂಟರ್‌ ಅಫ್‌ ಇಂಡಿಯಾ (ಕಮ್ಯೂನಿಸ್ಟ್‌) ಪಕ್ಷದಿಂದ ಸ್ಪರ್ಧಿಸಿರುವ ಟಿ.ಸಿ. ರಮಾ ಕ್ಷೇತ್ರದಲ್ಲಿನ ಏಕೈಕ ಮಹಿಳಾ ಅಭ್ಯರ್ಥಿ. ಅವರೊಟ್ಟಿಗೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನ ಇಲ್ಲಿದೆ.

ಪ್ರ: ಮಹಿಳಾ ಅಭ್ಯರ್ಥಿಯಾಗಿ ನೀವು ಎದುರಿಸಿದ ಸವಾಲುಗಳು ಏನು? ಕ್ಷೇತ್ರದಲ್ಲಿನ ಮಹಿಳೆಯರ ಸಮಸ್ಯೆಗಳು ಏನು?
ರಮಾ: ಮೊದಲಿನಿಂದಲೂ ಮಹಿಳಾ ಪರ ಹೋರಾಟಗಳಲ್ಲಿ ತೊಡಗಿಸಿಕೊಂಡವಳು ನಾನು. ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟ ನೌಕರರು.... ಹೀಗೆ ಮಹಿಳಾ ಕಾರ್ಮಿಕರ ನಡುವೆಯೇ ಕೆಲಸ ಮಾಡುತ್ತಾ ಬಂದವಳು. ಹೀಗಾಗಿ ಸ್ಪರ್ಧೆ, ಪ್ರಚಾರದ ಸಂದರ್ಭ ಅಷ್ಟೇನು ಸಮಸ್ಯೆ ಆಗಿಲ್ಲ.

ದೇಶದಲ್ಲಿ ಮಹಿಳೆಯರ ಪರಿಸ್ಥಿತಿ ಅಷ್ಟು ಉತ್ತಮವಾಗಿಲ್ಲ. ಇದು ಚುನಾವಣೆಯ ಸಂದರ್ಭವೂ ನನ್ನ ಅನುಭವಕ್ಕೆ ಬಂದಿತು. ‘ಬೇಟಿ ಬಚಾವೋ, ಬೇಟಿ ಪಡವೋ’ ಮೊದಲಾದ ಘೋಷಣೆಗಳು ಮೊಳಗಿದರೂ ಇಲ್ಲಿನ ಹೆಣ್ಣುಮಕ್ಕಳ ಸ್ಥಿತಿ ಬದಲಾಗಿಲ್ಲ. ಕನಿಷ್ಠ ವಿದ್ಯಾಭ್ಯಾಸ, ಶೌಚಾಲಯದಂತಹ ಮೂಲ ಸೌಕರ್ಯವೂ ಇಲ್ಲದೆ ಮಹಿಳೆಯರು ಬದುಕುತ್ತಿದ್ದಾರೆ. ಇದರ ವಿರುದ್ಧ ಮಹಿಳೆ–ಪುರುಷರೆಲ್ಲದೇ ಎಲ್ಲರೂ ಹೋರಾಟ ಮಾಡುವ ಅಗತ್ಯವಿದೆ.

* ಚುನಾವಣೆಯಲ್ಲಿ ನಿಮ್ಮ ಸ್ಪರ್ಧೆ ಗೆಲ್ಲುವುದಕ್ಕಾಗಿಯೋ ಇಲ್ಲ ಪಕ್ಷದ ಹೋರಾಟ, ಸಿದ್ಧಾಂತಗಳ ಪ್ರಚಾರಕ್ಕೋ?
ನಾವು ಸ್ಪರ್ಧೆಗೆ ಇಳಿದಿರುವುದು ಒಂದು ಹೋರಾಟವೇ. ಜನರ ಧ್ವನಿ ಗಟ್ಟಿ ಆಗಬೇಕು. ಆ ಕೆಲಸವನ್ನು ಸಮರ್ಥವಾಗಿ ಮಾಡುತ್ತಿದ್ದೇನೆ. ಆಯ್ಕೆ ಮಾಡಿದರೆ ಸದನದ ಒಳಗೂ ಧ್ವನಿ ಎತ್ತುತ್ತೇನೆ. ನಾನು ಆಯ್ಕೆಯಾದ ತಕ್ಷಣ ಸಮಸ್ಯೆಗಳೆಲ್ಲ ಬಗೆಹರಿಯುವುದಿಲ್ಲ. ಆದರೆ ಈ ವ್ಯವಸ್ಥೆ ವಿರುದ್ಧ ಹೋರಾಟ ಗಟ್ಟಿಯಾದರೆ ಖಂಡಿತ ಬದಲಾವಣೆ ಸಾಧ್ಯವಿದೆ.

* ಕ್ಷೇತ್ರಕ್ಕೆ ನಿಮ್ಮ ಪ್ರಣಾಳಿಕೆ ಏನು?
ಕ್ಷೇತ್ರದ ರೈತರ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ರಾಮನಗರ ಜಿಲ್ಲೆ ಒಂದರಲ್ಲಿಯೇ 40 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಏಳ್ಗೆಗಾಗಿ ಸ್ವಾಮಿನಾಥನ್‌ ವರದಿ ಜಾರಿಗೆ ತಂದು ಬೆಂಬಲ ಬೆಲೆ, ಸಂಸ್ಕರಣಾ ಘಟಕಗಳು, ನೀರಾವರಿ ಸೌಲಭ್ಯಗಳನ್ನು ಒದಗಿಸಬೇಕು. ಸಾಲ ಮನ್ನಾ ಮಾಡಬೇಕು. ಇಲ್ಲಿಂದ ಬೆಂಗಳೂರಿಗೆ ಹೋಗುವ ಕಾರ್ಮಿಕರಿಗೆ ಲೋಕಲ್‌ ರೈಲು, ವರ್ತುಲ ರೈಲು ಸೇವೆ ಒದಗಿಸಬೇಕು. ಕಾರ್ಮಿಕರಿಗೆ ಉಚಿತ ರೈಲು ಹಾಗೂ ಬಸ್ ಪಾಸ್ ನೀಡಬೇಕು. ಉನ್ನತ ಶಿಕ್ಷಣದವರೆಗೂ ಸರ್ಕಾರ ಉಚಿತ ಶಿಕ್ಷಣ ನೀಡಬೇಕು.

* ಕ್ಷೇತ್ರದಲ್ಲಿ ಕಾರ್ಮಿಕ ಪರವಾದ, ಎಡಪಂಥೀಯವಾದ ಅಲೆ ಇದೆಯೇ?
ಎಂಟು ವಿಧಾನಸಭಾ ಕ್ಷೇತ್ರಗಳಲ್ಲೂ ಜನರ ಮಧ್ಯೆ ಸಭೆ ಮಾಡಿ ಸಂವಾದ ನಡೆಸಿದ್ದೇವೆ. ಜನರು ಖಂಡಿತ ಬದಲಾವಣೆಯನ್ನು ಬಯಸಿದ್ದಾರೆ. ಜನಸಾಮಾನ್ಯರು, ಕಾರ್ಮಿಕರ ಪರವಾಗಿ ಧ್ವನಿ ಎತ್ತುವವರು ಬೇಕು ಎಂದು ಸಾಕಷ್ಟು ಮತದಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

* ಯಾರ ವಿರುದ್ಧ, ಯಾವುದರ ವಿರುದ್ಧ ನಿಮ್ಮ ಹೋರಾಟ?
ನಮ್ಮ ಹೋರಾಟ ಏನಿದ್ದರೂ ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧ. ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಇವೆಲ್ಲ ಬಂಡವಾಳಶಾಹಿ ಪಕ್ಷಗಳು. ಆ ಪಕ್ಷಗಳ ಅಭ್ಯರ್ಥಿಗಳು ಅಂತಹವರ ಪ್ರತಿನಿಧಿಗಳು. ಹೀಗಾಗಿ ಅವರಿಗೆ ಸ್ಪರ್ಧೆ ನೀಡುತ್ತೇವೆ.

ಹೋರಾಟದ ಹಿನ್ನೆಲೆ ನಿಮಗೆ ಚುನಾವಣೆ ಎದುರಿಸಲು ನೆರವಾಗಿದೆಯೇ?
* ವಿದ್ಯಾರ್ಥಿ ದಿಸೆಯಲ್ಲೇ ಹೋರಾಟಕ್ಕೆ ಧುಮುಕಿದ್ದು, ಕಳೆದ ಮೂರು ದಶಕದಿಂದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಬಿಸಿಯೂಟ ನೌಕರರು, ಅಂಗನವಾಡಿ ಕಾರ್ಯಕರ್ತೆಯರ ಪರವಾಗಿ ಧ್ವನಿ ಎತ್ತಿದ್ದೇನೆ. ಇದರಿಂದಾಗಿ ಜನರ ಮಧ್ಯೆ ನಿಂತು ಗಟ್ಟಿಯಾಗಿ ಮಾತನಾಡುವುದನ್ನು ಕಲಿತಿದ್ದೇನೆ. ಇದು ಚುನಾವಣೆಯಲ್ಲಿ ಸಾಕಷ್ಟು ನೆರವಿಗೆ ಬಂದಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !