ಸೋಮವಾರ, ಸೆಪ್ಟೆಂಬರ್ 16, 2019
29 °C

ಹಾರೋಹಳ್ಳಿ, ಮರಳವಾಡಿ ಹೋಬಳಿ ವ್ಯಾಪ್ತಿ ಬಿರುಗಾಳಿಗೆ 80 ವಿದ್ಯುತ್‌ ಕಂಬ ಧರೆಗೆ

Published:
Updated:
Prajavani

ಕನಕಪುರ: ತಾಲ್ಲೂಕಿನಲ್ಲಿ ಮಂಗಳವಾರ ಸಂಜೆ ಬೀಸಿದ ಬಿರುಗಾಳಿಗೆ ಹಾರೋಹಳ್ಳಿ ಮತ್ತು ಮರಳವಾಡಿ ಹೋಬಳಿ ವ್ಯಾಪ್ತಿಯಲ್ಲಿ ಬೆಸ್ಕಾಂ ಇಲಾಖೆಯ ಲೈಟ್‌ ಕಂಬಗಳು ಧರೆಗೆ ಉರುಳಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

ಎರಡೂ ಹೋಬಳಿಗಳಲ್ಲಿ ಭೀಕರ ಬಿರುಗಾಳಿ ಬೀಸಲಾರಂಭಿಸಿತು. ರೈತರ ಜಮೀನುಗಳಲ್ಲಿ ಹೊಸದಾಗಿ ಹಾಕಿದ್ದ ಹೆಚ್‌ವಿಡಿಎಸ್‌ ನ ಟ್ರಾನ್ಸ್‌ ಫಾರ್ಮರ್‌ ಕಂಬಗಳೇ ಹೆಚ್ಚು ಹಾನಿಗೊಂಡಿವೆ. ಮರಳವಾಡಿ ಹೋಬಳಿ ವ್ಯಾಪ್ತಿಯಲ್ಲಿ ಸುಮಾರು 50 ವಿದ್ಯುತ್‌ ಕಂಬಗಳು ಉರುಳಿವೆ.

ಹಾರೋಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಸುಮಾರು 30 ಕಂಬಗಳು ಉರುಳಿವೆ. ವಿದ್ಯುತ್‌ ಕಂಬ ಉರುಳಿದ್ದರಿಂದ ಎರಡೂ ಹೋಬಳಿ ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆಯಿಂದಲೇ ವಿದ್ಯುತ್‌ ಪೂರೈಕೆ ಸ್ಥಗಿತವಾಗಿದೆ.

ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿಯೂ ವಿದ್ಯುತ್‌ ಕಂಬಗಳು ಮುರಿದು ಬಿದ್ದಿದುದರಿಂದ ಇಡೀ ಇಂಡಸ್ಟ್ರಿಯಲ್‌ಗೆ ವಿದ್ಯುತ್‌ ಪೂರೈಕೆ ಸ್ಥಗಿತವಾಗಿದ್ದು ಬುಧವಾರ ಮಧ್ಯಾಹ್ನದ ವೇಳೆಗೆ ವಿದ್ಯುತ್‌ ಮಾರ್ಗವನ್ನು ಸರಿಪಡಿಸಿ ವಿದ್ಯುತ್‌ ಪೂರೈಕೆಯನ್ನು ಕೊಡಲಾಗಿದೆ ಎಂದು ತಿಳಿದು ಬಂದಿದೆ.

ಉಳಿದಂತೆ ರೈತರ ಜಮೀನಿನಲ್ಲಿ ಉರುಳಿರುವ ವಿದ್ಯುತ್‌ ಕಂಬಗಳನ್ನು ನಿಲ್ಲಿಸಲಾಗುತ್ತಿದೆ. ಸಂಪೂರ್ಣವಾಗಿ ಮುರಿದಿರುವ ಕಂಬಗಳನ್ನು ಬದಲಾಯಿಸಿ ಹೊಸ ಕಂಬ ಹಾಕಬೇಕಿರುವುದರಿಂದ ಆ ಕೆಲಸವು ವಿಳಂಬವಾಗುತ್ತಿದೆ. ಎಲ್ಲ ವಿದ್ಯುತ್‌ ಮಾರ್ಗಗಳು ಸರಿಹೋಗುವ ವರೆಗೂ ವಿದ್ಯುತ್‌ ಪೂರೈಕೆ ಸಾಧ್ಯವಾಗುವುದಿಲ್ಲವೆಂದು ಇಲಾಖೆ ತಿಳಿಸಿದೆ.

ಮುರಿದಿರುವ ಹಾಗೂ ಉರುಳಿರುವ ವಿದ್ಯುತ್‌ ಕಂಬ ಮತ್ತು ಮಾರ್ಗವನ್ನು ಸರಿಪಡಿಸುವ ಕೆಲಸ ಬೆಸ್ಕಾ ಇಲಾಖೆಯವರು ಬುಧವಾರ ಬೆಳಿಗ್ಗೆಯಿಂದಲೇ ಮಾಡುತ್ತಿದ್ದಾರೆ. ಸಂಜೆ ವೇಳೆಗೆ ಬಹುತೇಕ ಸರಿಪಡಿಸುವ ವಿಶ್ವಾಸವನ್ನು ಇಲಾಖೆಯ ಸಿಬ್ಬಂದಿ ವ್ಯಕ್ತಪಡಿಸಿದ್ದಾರೆ.

Post Comments (+)